ಬಾರೆಲೆ ಹಕ್ಕಿ ಬಣ್ಣದ ಹಕ್ಕಿ: ರಷ್ಯನ್ ಬಾಲೆಯ ಬಾಯಲ್ಲಿ ಕನ್ನಡ ಹಾಡು ಕೇಳಿ ಫಿದಾ ಆದ ಕನ್ನಡಿಗರು

Published : Aug 08, 2025, 02:03 PM ISTUpdated : Aug 11, 2025, 02:33 PM IST
Russian girl sings Kannada song in Bengaluru

ಸಾರಾಂಶ

ರಷ್ಯನ್ ಮೂಲದ ಪುಟ್ಟ ಬಾಲಕಿ 'ಬಾರೆಲೆ ಹಕ್ಕಿ' ಹಾಡನ್ನು ಹಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನಲ್ಲಿ ವಾಸಿಸುವ ಈ ಬಾಲಕಿ ತನ್ನ ಗೆಳತಿಯೊಂದಿಗೆ ಹಾಡನ್ನು ಹಾಡುವ ಮೂಲಕ ಕನ್ನಡಿಗರ ಮನಗೆದ್ದಿದ್ದಾಳೆ. 

ಕನ್ನಡದ ಕೆಲವು ಹಾಡುಗಳು ಕನ್ನಡದ ಮಕ್ಕಳಿಗೆ ಗೊತ್ತಿಲ್ಲ, ಹೀಗಿರುವಾಗ ವಿದೇಶಿ ಪುಟಾಣಿಯೊಬ್ಬಳ ಬಾಯಲ್ಲಿ ಕನ್ನಡ ಹಾಡು ಕೇಳಿ ಬಂದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಬೆಂಗಳೂರಿನಲ್ಲಿ ವಾಸವಾಗಿರುವ ಶಾಲೆಗೂ ಹೋಗುತ್ತಿರುವ ರಷ್ಯನ್ ಮೂಲದ ಪುಟ್ಟ ಬಾಲಕಿ ತನ್ನ ಗೆಳತಿಯ ಜೊತೆ ಸೇರಿ ಬಾರೆಲೆ ಹಕ್ಕಿ ಬಣ್ಣದ ಹಕ್ಕಿ ಹಾಡನ್ನು ಹಾಡುತ್ತಿದ್ದು, ಇದರ ವೀಡಿಯೋ ಭಾರಿ ವೈರಲ್ ಆಗಿದೆ.

alsu_12.12(Алсу Муртазина) ಎಂಬ ರಷ್ಯನ್ ಮೂಲದ ಮಾಡೆಲ್ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಗೆಳತಿ ಹಾಗೂ ಕ್ಲಾಸ್‌ಮೇಟ್ 3 ವರ್ಷದ ಸ್ನೇಹ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ರಷ್ಯನ್ ಮಗು ಕನ್ನಡ ಹಾಡು ಹಾಡುತ್ತಿರುವುದರಿಂದ ಈ ವೀಡಿಯೋ ಭಾರಿ ವೈರಲ್ ಆಗಿದೆ. ಅಂದಹಾಗೆ ಸಿ.ಫ. ಕಟ್ಟೀಮನಿ ಎಂಬುವವರು ಬರೆದ ಕನ್ನಡದ ಕವಿತೆ ಇದಾಗಿದೆ.

ಬಾರೆಲೆ ಹಕ್ಕಿ ಬಣ್ಣದ ಹಕ್ಕಿ

ಬಾರೆಲೆ ಹಕ್ಕಿ ಹಾರುವ ಹಕ್ಕಿ

ಗೆಳೆಯರು ಆಡಲು ಯಾರೂ ಇಲ್ಲ

ಕಳೆಯುವುದೆಂತು ವೇಳೆಯನೆಲ್ಲ

ಬಾಬಾ ನನಗೂ ಹಾಡಲು ಕಲಿಸು

ಬಾಬಾ ನನಗೂ ಹಾರಲು ಕಲಿಸು

ಅವ್ವನು ನೀರಿಗೆ ಹೋಗಿಹಳು

ಅಪ್ಪನು ಪೇಟೆಗೆ ಹೋಗಿಹನು

ಅವ್ವನು ಬರಲಿ ಅಪ್ಪನು ಬರಲಿ

ತಿನ್ನಲು ಹಣ್ಣನು ಕೊಡಿಸುವೆನು

ನನಗೂ ಎರಡು ರೆಕ್ಕೆಯ ಹಚ್ಚು

ಹಿಂಗಡೆ ಬಣ್ಣದ ಪುಚ್ಚವ ಚುಚ್ಚು

ನೆತ್ತಿಯ ಮೇಲೆ ಜುಟ್ಟನು ಹಚ್ಚು

ಮೆಲ್ಲನೆ ಮೇಲೆ ಹಾರಲು ಹಚ್ಚು

ನಾನೂ ನೀನೂ ಇಬ್ಬರು ಕೂಡಿ

ಮುಗಿಲಿನ ಕಡೆಗೆ ಹಾರುವ ಬಾ

ಅಲ್ಲಿಂದಿತ್ತ ಇಲ್ಲಿಂದತ್ತ

ಹಾರುತ ಹಾಡುತ ನಲಿಯುವ ಬಾ.

ಈ ಹಾಡನ್ನು ಈ ಇಬ್ಬರು ಮಕ್ಕಳು ಸೈಕಲ್ ಓಡಿಸುತ್ತಾ ಸೊಗಸಾಗಿ ಹಾಡಿದ್ದಾರೆ. ಕೆಲ ಕನ್ನಡದ ಮಕ್ಕಳಿಗೂ ಗೊತ್ತಿರದ ಈ ಹಾಡನ್ನು ರಷ್ಯನ್ ಬಾಲೆಯ ಬಾಯಲ್ಲಿ ಕೇಳಿದ ಕನ್ನಡಿಗರು ಫುಲ್ ಖುಷಿಯಾಗಿದ್ದಾರೆ. ಹಲವರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. 'ನಮ್ ಬೆಂಗಳೂರು ನಲ್ ಸ್ವಲ್ಪ ಜನ ಅವ್ರೆ ಕನ್ನಡ ಗೊತ್ತಿಲ್ಲ ಅನ್ನೋರು ಅವರಿಗೆಲ್ಲ ಈ ಮಕ್ಳು ದು ಹೇ* ತಿನೋಕೆ ಹೇಳ್ಬೇಕು ಅವಾಗಾದ್ರೂ ಅದ್ರು ಕನ್ನಡ ಕಲ್ತ್ಕೊತಾರೆನೋ' ಎಂದು ಒಬ್ರು ಈ ವೀಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಆಕೆಗೆ ಕನ್ನಡ ಕಲಿಸಿದ್ದಕ್ಕೆ ಕೆಲವರು ಧನ್ಯವಾದ ಹೇಳಿದ್ದಾರೆ. ತಾಯಿ ಭುವನೇಶ್ವರಿಯ ಪದಗಳನ್ನು ನಿಮ್ಮ ಬಾಯಲ್ಲಿ ಕೇಳುವುದೇ ಒಂದು ಪುಣ್ಯ ತಾಯಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಈ ಮುದ್ದಾದ ಪುಟ್ಟ ಹುಡುಗಿಯನ್ನು ತಮ್ಮದಲ್ಲದ ಭಾಷೆಯನ್ನು ಕಲಿಯಲು ಪ್ರೋತ್ಸಾಹಿಸಿದ ಪೋಷಕರಿಗೆ ಅಪಾರ ಗೌರವ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕಲಿಯೋಕೆ ಕೋಟಿ ಭಾಷೆ, ಹಾಡೋಕೆ ಒಂದೇ ಭಾಷೆ.... ಕನ್ನಡ... ಕನ್ನಡ... ಎಂಬ ರಾಜ್‌ಕುಮಾರ್ ಹಾಡು ನಿಜವಾಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಂಸ್ಕೃತಿಯ ವಿನಿಮಯ ಹೀಗೆ ಇರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕರ್ನಾಟಕಕ್ಕೆ ಸ್ವಾಗತ, ಸುಂದರ ಸಂಸ್ಕೃತಿ ಮತ್ತು ಅತ್ಯಂತ ಹಳೆಯ ಭಾಷೆ, ಇಲ್ಲಿಗೆ ಬಂದಿದ್ದಕ್ಕಾಗಿ ಧನ್ಯವಾದಗಳು ಎಂದು ಇನ್ನೊಬ್ರು ಪ್ರತಿಕ್ರಿಯಿಸಿದ್ದಾರೆ. ಉತ್ತರ ಭಾರತೀಯರು ಈ ಬಾಲಕಿಯ ನೋಡಿ ಕಲಿಯಲಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಬಾಲಕಿಯ ಈ ಹಾಡು ಕೇಳಿ ನಿಮಗೇನನಿಸಿತು ಕಾಮೆಂಟ್ ಮಾಡಿ.

 

 

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ