
ಬೆಂಗಳೂರು: ರಸ್ತೆ ಬದಿ ಮಾರ್ಗಗಳ ಕುರಿತ ಮಾಹಿತಿಯುಳ್ಳ ಫಲಕಗಳನ್ನು ಅಳವಡಿಸಲಾಗಿರುತ್ತದೆ. ಈ ಬೋರ್ಡ್‌ಗಳ ಮಾಹಿತಿಯಿಂದ ಜನರಿಗೆ ತಮ್ಮ ಗಮ್ಯ ಸ್ಥಾನ ತಲುಪಲು ಸಹಾಯವಾಗುತ್ತದೆ. ಆದ್ರೆ ಕೆಲವು ಬೋರ್ಡ್‌ಗಳು ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡುತ್ತವೆ. ಅಂತಹವುದೇ ಒಂದು ಬೋರ್ಡ್ ಬೆಂಗಳೂರಿನಲ್ಲಿದ್ದು, ಸಿಲಿಕಾನ್ ಸಿಟಿ ಪ್ರವೇಶದಲ್ಲಿ ಈ ಫಲಕ ಕಂಡು ಒಂದು ಕ್ಷಣ ಪ್ರಯಾಣಿಕರು ಗೊಂದಲಕ್ಕೊಳಗಾಗೋದು ಖಂಡಿತ. ಈ ಫಲಕದ ಫೋಟೋ ಹಂಚಿಕೊಂಡಿರುವ ನೆಟ್ಟಿಗರೊಬ್ಬರು, Bengaluru ಮತ್ತು Bangaluru ಎಂಬ ಎರಡು ಬೇರೆ ಬೇರೆ ನಗರಗಳಿವೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಪ್ರವೇಶಿಸುವ ಮಾರ್ಗದಲ್ಲಿ ಈ ಗೊಂದಲಮಯ ಬೋರ್ಡ್ ಕಾಣಬಹುದು. ಹೆಬ್ಬಾಳ ಫ್ಲೈ ಓವರ್ ಎಂಟ್ರಿಯಲ್ಲಿ Bengaluru ಮತ್ತು Bangaluru ಹೆಸರಿನಲ್ಲಿ ಫಲಕ ಅಳವಡಿಕೆ ಮಾಡಲಾಗಿದ್ದು, ಎರಡು ವಿಭಿನ್ನ ಮಾರ್ಗಗಳನ್ನು ತೋರಿಸಲಾಗಿದೆ. ಬೆಂಗಳೂರು ಎಂದು ಬರೆದಿರುವ ಇಂಗ್ಲಿಸ್ ಅಕ್ಷರಗಳಲ್ಲಿಯೂ ವ್ಯತ್ಯಾಸವಿರೋದನ್ನು ಗಮನಿಸಬಹುದು. ಹಾಗಾಗಿ ಹೊಸ ಪ್ರಯಾಣಿಕರು ಅಥವಾ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿರೋ ಜನರು ಒಂದು ಕ್ಷಣ ಬೋರ್ಡ್ ನೋಡಿದ್ರೆ ಕನ್ಫ್ಯೂಸ್ ಆಗುತ್ತಾರೆ.
ಈ ಫೋಟೋವನ್ನು Sanjeev (@geniusparadox) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಬೆಂಗಳೂರಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಿಂಗೂ ಹೋಗ್ಬಹುದು ಹಂಗೂ ಹೋಗ್ಬಹುದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾಡಿರಬಹುದು. ಗೊಂದಲದಿಂದ ವೇಗವಾಗಿ ಬರುತ್ತಿರೋ ತಮ್ಮ ವಾಹನದ ಸ್ಪೀಡ್ ಕಡಿಮೆ ಮಾಡುತ್ತಾರೆ. ಈ ಮೂಲಕ ಅಪಘಾತ ಸಂಖ್ಯೆ ತಗ್ಗಿಸಲು ಪ್ಲಾನ್ ಮಾಡಿರಬೇಕು ಎಂದು ಬರೆದಿದ್ದಾರೆ. ಒಬ್ಬರು ಅಲ್ಲಿ ಬೆಂಗಳೂರು ನಗರ ಪ್ರವೇಶಿಸಲು ಎರಡು ಮಾರ್ಗಗಳಿವೆ. ಹಾಗಾಗಿ ಪ್ರತ್ಯೇಕವಾಗಿ ಎರಡು ಮಾರ್ಗ ತೋರಿಸಲಾಗಿದೆ. ಸ್ಪೆಲ್ಲಿಂಗ್ ನಿಂದ ಗೊಂದಲವಾಗಿದೆ. ಹಾಗಾಗಿ ಅಧಿಕಾರಿಗಳು ಫಲಕ ಸರಿಪಡಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ 227 ರಸ್ತೆಗಳ ಟ್ರಾಫಿಕ್ ನಿಯಂತ್ರಣಕ್ಕೆ BBMP ಸೂಪರ್ ಪ್ಲಾನ್; 337 ಕಿ.ಮೀ ಇನ್ನು ಆರಾಮಾದಾಯಕ
ಯಾಕೆ ಈ ಎರಡು ಮಾರ್ಗ?
ಫ್ಲೈ ಓವರ್ ಮೂಲಕ ಬೆಂಗಳೂರು ಪ್ರವೇಶಿಸುವ ಪ್ರಯಾಣಿಕರು ನೇರವಾಗಿಯೇ ಹೆಬ್ಬಾಳ ಫ್ಲೈ ಓವರ್‌ಗೆ ಹೋಗಬಹುದು. ಇನ್ನು ಸರ್ವಿಸ್ ರೋಡ್ ಬಳಸುವ ಪ್ರಯಾಣಿಕರಿಗೆ ನೇರವಾಗಿ ಹೆಬ್ಬಾಳ ಫ್ಲೈ ಓವರ್ ಪ್ರವೇಶಿಸಲು ಆಗದಂತೆ ರಸ್ತೆಬದಿ ತಡೆಗೋಡೆ ನಿರ್ಮಿಸಲಾಗಿದೆ. ಹಾಗಾಗಿ ಸರ್ವಿಸ್ ರೋಡ್‌ನಿಂದ ಬರುವ ಪ್ರಯಾಣಿಕರು ನೇರವಾಗಿ ಬಂದು, ಎಡ ತಿರುವ ಪಡೆದು ಪಕ್ಕದ ಮೇಲ್ಸೇತುವೆ ಮೂಲಕ ಹೆಬ್ಬಾಳ ಫ್ಲೈ ಒವರ್ ಪ್ರವೇಶಿಸಬಹುದು. ಬಲ ತಿರುವ ಪಡೆದ್ರೆ ಆ ರಸ್ತೆ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಸರ್ವಿಸ್ ರಸ್ತೆಯಿಂದ ಫ್ಲೈಓವರ್ ಕೆಳಗೆ ಬಂದ ಎಡ ತಿರುವ ಪಡೆದರೆ ಅದು ಕೆಆರ್ ಪುರಂಗೆ ಸಂಪರ್ಕ ಕಲ್ಪಿಸುತ್ತದೆ.
ಇದನ್ನೂ ಓದಿ: 200 ಕೋಟಿ ವೆಚ್ಚದಲ್ಲಿ ಬೆಂಗಳೂರಿಗರಿಗೆ 7.22 KM ಉದ್ದದ ಹೊಸ ರಸ್ತೆ; ನೋ ಟ್ರಾಫಿಕ್, ಫುಲ್ ಜಾಲಿ ರೈಡ್