
ಬೆಂಗಳೂರು (ಆ.5): ಎಸ್ಟೀಮ್ ಮಾಲ್‌ನಿಂದ ವೆಟರ್ನರಿ ಕಾಲೇಜು (ಪಶುವೈದ್ಯಕೀಯ ಮಹಾವಿದ್ಯಾಲಯ) ವರೆಗೆ ನಿರ್ಮಿಸಲು ಉದ್ದೇಶಿಸಲಾಗಿರುವ 2.2 ಕಿಲೋಮೀಟರ್ ಉದ್ದದ ಹೆಬ್ಬಾಳ ಕಿರು ಸುರಂಗ ರಸ್ತೆ (Hebbal Tunnel) ಯೋಜನೆಗೆ ಬರೋಬ್ಬರಿ 893 ಮರಗಳು ಬಲಿಯಾಗಲಿವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನೀಡಿದ ಈ ಮಾಹಿತಿಯು ಉತ್ತರ ಬೆಂಗಳೂರಿನ ಅತ್ಯಂತ ಪ್ರಮುಖ ಹಸಿರು ವಲಯದ ಮೇಲೆ ಬೀರಲಿರುವ ಪರಿಣಾಮದ ಕುರಿತು ಪರಿಸರ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಈ ಕುರಿತು ಮಾಹಿತಿ ನೀಡಿದ ಬಿಡಿಎ ಅಧಿಕಾರಿಯೊಬ್ಬರು, ತೊಂದರೆಗೊಳಗಾಗುವ 893 ಮರಗಳ ಪೈಕಿ ಶೇಕಡಾ 85 ರಷ್ಟು ಮರಗಳನ್ನು ಪಶುವೈದ್ಯಕೀಯ ವಿಶ್ವವಿದ್ಯಾಲಯದ ಆವರಣ ಹಾಗೂ ಬಿಡಿಎಗೆ ಸೇರಿದ ಆಸ್ತಿಗಳಿಗೆ ಟ್ರಾನ್ಸ್‌ಪ್ಲಾಂಟೇಷನ್ ಮಾಡಲು ಯೋಜಿಸಲಾಗಿದೆ ಎಂದಿದ್ದಾರೆ. ಆದರೆ, ಬೃಹತ್ ಬೆಂಗಳೂರು ಪ್ರಾಧಿಕಾರದ (GBA) ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಸುದರ್ಶನ್ ಪ್ರತಿಕ್ರಿಯಿಸಿ, "ಬಿಡಿಎ ಇನ್ನು ಸಂಪೂರ್ಣ 'ಫಾರ್ಮ್-1' ಅರ್ಜಿಯನ್ನು ನಮಗೆ ಸಲ್ಲಿಸಿಲ್ಲ. ಅರ್ಜಿ ಸಲ್ಲಿಕೆಯಾದ ನಂತರವೇ ಇಲಾಖೆಯು ಪ್ರಸ್ತಾಪವನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ," ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸುರಂಗ ಮಾರ್ಗವು ಪಶುವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ ಟ್ರೀ ಪಾರ್ಕ್, ಹೆಬ್ಬಾಳ ಕೆರೆಯ ಬಫರ್ ಝೋನ್ ಹಾಗೂ ಸುತ್ತಮುತ್ತಲಿನ ಶೈಕ್ಷಣಿಕ ಸಂಸ್ಥೆಗಳ ಹಸಿರು ಆವರಣಗಳ ಮೂಲಕ ಹಾದುಹೋಗುತ್ತದೆ. ಇವೆಲ್ಲವೂ ನಗರದ ಜೀವವೈವಿಧ್ಯತೆಗೆ ಪ್ರಮುಖ ಆಸರೆಯಾಗಿವೆ.
ಸಂಶೋಧಕ ಹಾಗೂ ಪರಿಸರ ಶಿಕ್ಷಣತಜ್ಞ ಹರೀಶ ಎ.ಎಸ್. ಮಾತನಾಡಿ, "ಈ ಯೋಜನಾ ಮಾರ್ಗದಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ಆವರಣಗಳು ಹಾಗೂ ಕೆರೆಗಳು ಜೀವವೈವಿಧ್ಯತೆಯ ದ್ವೀಪಗಳಂತೆ ಕಾರ್ಯನಿರ್ವಹಿಸುತ್ತಿದ್ದವು. ಇವು ಹಕ್ಕಿಗಳು, ಚಿಟ್ಟೆಗಳು ಮತ್ತು ಇತರ ವನ್ಯಜೀವಿಗಳನ್ನು ಬೆಸೆಯುವ ಸುಮಾರು 10 ಕಿ.ಮೀ ಉದ್ದದ 'ಹಸಿರು ಕಾರಿಡಾರ್' ಆಗಿದ್ದವು. ಆದರೆ, ಸರಣಿ ಮೂಲಸೌಕರ್ಯ ಯೋಜನೆಗಳಿಂದಾಗಿ ಈ ನೈಸರ್ಗಿಕ ಸಂಪರ್ಕ ಈಗಾಗಲೇ ದುರ್ಬಲಗೊಂಡಿದೆ," ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅಶೋಕಾ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಅಂಡ್ ದಿ ಎನ್ವಿರಾನ್‌ಮೆಂಟ್ (ATREE) ಸಂಸ್ಥೆಯ ಸಸ್ಯವಿಜ್ಞಾನಿ ಗಣೇಶನ್ ಅವರು ಮಾತನಾಡಿ, ಕಟ್ಟುನಿಟ್ಟಾದ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸದಿದ್ದರೆ ಹಳೆಯ ಮರಗಳ ಮರುನೆಡುವಿಕೆ ಯಶಸ್ವಿಯಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
"ಮರುನೆಡುವಿಕೆಯನ್ನು ಹೆಚ್ಚಾಗಿ ಹೆಸರಿಗಷ್ಟೇ ಮಾಡಲಾಗುತ್ತದೆ. ಇಲ್ಲಿರುವ ಹೆಚ್ಚಿನ ಮರಗಳು ದಶಕಗಳಷ್ಟು ಹಳೆಯದಾಗಿದ್ದು, ಮರುನೆಡುವಿಕೆಗೆ ಸೂಕ್ತವಲ್ಲ. ಇಂತಹ ಮರಗಳಿಗೆ ತಳಿ ಆಧಾರಿತ ಪರಿಶೀಲನೆ, ಬೇರುಗಳ ಸಿದ್ಧತೆ ಹಾಗೂ ತಿಂಗಳುಗಳ ಕಾಲ ವೈಜ್ಞಾನಿಕ ಉಪಚಾರ ಬೇಕಾಗುತ್ತದೆ. ಆದರೆ, ಇದನ್ನು ಯಾರೂ ಅನುಸರಿಸುವುದಿಲ್ಲ," ಎಂದು ಗಣೇಶನ್ ಆರೋಪಿಸಿದ್ದಾರೆ. ಭಾರೀ ಯಂತ್ರೋಪಕರಣಗಳಿಂದ ಮರಗಳನ್ನು ಬುಡಮೇಲು ಮಾಡುವುದರಿಂದ ಬೇರು ಮತ್ತು ಕೊಂಬೆಗಳು ಹಾನಿಗೊಳಗಾಗಿ ಮರಗಳು ಬದುಕುಳಿಯುವ ಪ್ರಮಾಣ ಕ್ಷೀಣಿಸುತ್ತದೆ. ಅಲ್ಲದೆ, ಬದಲಿ ಸಸಿ ನೆಡುವ ಕಾರ್ಯಕ್ರಮಗಳನ್ನು ಬೆಂಗಳೂರಿನಿಂದ ಎಲ್ಲೋ ದೂರದಲ್ಲಿ ಮಾಡಲಾಗುತ್ತದೆಯೇ ವಿನಃ, ನಗರದಲ್ಲಿದ್ದ ಹಳೆಯ ಮರಗಳು ನೀಡುತ್ತಿದ್ದ ನೈಸರ್ಗಿಕ ಸೇವೆಯನ್ನು ಅವು ಸರಿದೂಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಹಳೆಯ ಮರಗಳನ್ನು ಕಳೆದುಕೊಳ್ಳುವುದರಿಂದ ಬೆಂಗಳೂರಿನಲ್ಲಿ 'ಅರ್ಬನ್ ಹೀಟ್ ಐಲ್ಯಾಂಡ್' (ನಗರದ ಉಷ್ಣತೆ ಹೆಚ್ಚಳ) ಪರಿಣಾಮ ತೀವ್ರಗೊಳ್ಳಲಿದೆ ಎಂದು ಹರೀಶ ಎಚ್ಚರಿಸಿದ್ದಾರೆ. "ಹೆಬ್ಬಾಳ ಸುತ್ತಮುತ್ತಲಿನ ಹಸಿರು ಆವರಣಗಳು ಇತರ ಸಿಮೆಂಟ್ ಕಟ್ಟಡಗಳ ಪ್ರದೇಶಗಳಿಗಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್ ತಂಪಾಗಿರುತ್ತವೆ. ಮರಗಳು ಇಂಗಾಲವನ್ನು ಹೀರಿಕೊಂಡು ನೈಸರ್ಗಿಕ ಕೂಲಿಂಗ್ ವ್ಯವಸ್ಥೆಯಂತೆ ಕೆಲಸ ಮಾಡುತ್ತವೆ. ನೂರಾರು ಮರಗಳನ್ನು ಕಡಿಯುವುದರಿಂದ ಈ ಸಾಮರ್ಥ್ಯ ಕುಸಿಯಲಿದೆ," ಎಂದಿದ್ದಾರೆ.
ಪರಿಸರ ಶಿಕ್ಷಣತಜ್ಞೆ ಹಾಗೂ ಹೆಬ್ಬಾಳದ ನಿವಾಸಿ ಎಲಿಜಬೆತ್ ಎಸ್. ಮಾತನಾಡಿ, "ಸಾಮಾನ್ಯವಾಗಿ ಬೆಂಗಳೂರಿನ 2 ಕಿ.ಮೀ ರಸ್ತೆಯಲ್ಲಿ ಸುಮಾರು 900 ಮರಗಳು ಸಿಗುವುದಿಲ್ಲ. ಪ್ರಸ್ತಾಪಿತ ಮಾರ್ಗವು ಶೈಕ್ಷಣಿಕ ಆವರಣಗಳು, ಕೆರೆಯ ಬಫರ್ ಝೋನ್ ಹಾಗೂ ಟ್ರೀ ಪಾರ್ಕ್ ಮೂಲಕ ಹಾದುಹೋಗುತ್ತಿರುವುದೇ ಇಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮರಗಳಿರಲು ಕಾರಣ. ಇದು ಈ ಪ್ರದೇಶದ ಪರಿಸರ ಸೂಕ್ಷ್ಮತೆಯನ್ನು ಎತ್ತಿಹಿಡಿಯುತ್ತದೆ," ಎಂದು ಹೇಳಿದ್ದಾರೆ.