
ಬೆಂಗಳೂರು (ಆ.04): ಬೆಂಗಳೂರಿನ ಸೈಬರ್ ಅಪರಾಧಿಗಳು ಹಾಗೂ ವಂಚಕರು ದಿನಕ್ಕೊಂದು ಹೊಸ ದಾರಿ ಹುಡುಕುತ್ತಿದ್ದಾರೆ. ಮನೆಗಳಲ್ಲಿ ಒಂಟಿಯಾಗಿ ಇರುವವರು, ಮನೆಯಿಂದಲೇ ಕೆಲಸ (Work From Home) ಮಾಡುವ ಮಹಿಳೆಯರು ಹಾಗೂ ಹಿರಿಯ ನಾಗರಿಕರನ್ನೇ ಟಾರ್ಗೆಟ್ ಮಾಡಿ ಹೊಸ ರೀತಿಯ 'ಕ್ಯಾಶ್ ಆನ್ ಡೆಲಿವರಿ' (Cash on Delivery - COD) ವಂಚನೆ ಜಾಲ ಸಕ್ರಿಯವಾಗಿದೆ. ಇತ್ತೀಚೆಗೆ ಬೆಂಗಳೂರಿನ ನಿವಾಸಿಯೊಬ್ಬರು ತಮಗೆ ಎದುರಾದ ಬೆಚ್ಚಿಬೀಳಿಸುವ ಘಟನೆಯನ್ನು ಹಂಚಿಕೊಂಡಿದ್ದು, ಸಾರ್ವಜನಿಕರು ತಕ್ಷಣ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ.
ಬೆಂಗಳೂರಿನ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ 'ವರ್ಕ್ ಫ್ರಮ್ ಹೋಮ್' (WFH) ಮಾಡುತ್ತಿದ್ದ ವೇಳೆ ಡೆಲಿವರಿ ಬಾಯ್ ಒಬ್ಬ ಮನೆ ಬಾಗಿಲಿಗೆ ಬಂದಿದ್ದಾನೆ. ಆತನ ಕೈಯಲ್ಲಿದ್ದ ಸಣ್ಣ ಪಾರ್ಸೆಲ್ ಮೇಲೆ ಮಹಿಳೆಯ ಹೆಸರು ಮತ್ತು ವಿಳಾಸ ಸರಿಯಾಗಿಯೇ ಇತ್ತು. ಪಾರ್ಸೆಲ್ ನೀಡಿದ ಡೆಲಿವರಿ ಏಜೆಂಟ್, 'ಇದಕ್ಕೆ ₹500 ಕ್ಯಾಶ್ ಆನ್ ಡೆಲಿವರಿ (COD) ನೀಡಬೇಕು' ಎಂದು ತಕ್ಷಣ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಆದರೆ, ಮಹಿಳೆ ತಾನು ಯಾವುದೇ ವಸ್ತುವನ್ನು ಆರ್ಡರ್ ಮಾಡಿಲ್ಲ ಹಾಗೂ ತಾನು ಎಂದಿಗೂ ಆನ್‌ಲೈನ್‌ನಲ್ಲಿ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಬಳಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿ, ಹಣ ಪಾವತಿಸಲು ನಿರಾಕರಿಸಿದ್ದಾರೆ.
ಅನುಮಾನಗೊಂಡು ಪಾರ್ಸೆಲ್ ಪರಿಶೀಲಿಸಿದಾಗ, ಒಳಗಡೆ ಮತ್ತೊಂದು ಸಣ್ಣ ಪ್ಯಾಕೇಜ್ ಇರುವುದು ಕಂಡುಬಂದಿದೆ. ಅದರಲ್ಲಿ ಬೇರೊಬ್ಬರ ವಿವರಗಳಿದ್ದವು! ಇನ್ನು ಆ ಬಾಕ್ಸ್ ತೆರೆದು (Unboxing) ನೋಡಿದಾಗ, ಒಳಗಡೆ ಒಂದು ತುಂಡಾದ ಬಟ್ಟೆ ಒಗೆಯುವ ‘ರಿನ್' ಸಾಬೂನಿನ (Rin Washing Soap) ಅರ್ಧ ಭಾಗ ಮಾತ್ರ ಇತ್ತು. ಅಂದರೆ, ಇದು ಸಂಪೂರ್ಣವಾಗಿ ಜನರನ್ನು ಮೂರ್ಖರನ್ನಾಗಿಸಿ ಹಣ ಕಸಿಯುವ 'ಫೇಕ್ COD ಸ್ಕಾಮ್' (Fake COD Scam) ಆಗಿತ್ತು.
ವಂಚನೆಯ ಜೊತೆಗೆ ಮಹಿಳೆಯನ್ನು ಮತ್ತಷ್ಟು ಆತಂಕಕ್ಕೀಡುಮಾಡಿದ್ದು ಆ ಡೆಲಿವರಿ ವ್ಯಕ್ತಿಯ ವರ್ತನೆ. ಆತ ಹಣಕ್ಕಾಗಿ ಒತ್ತಾಯಿಸುತ್ತಾ ಮನೆ ಬಾಗಿಲಿನ ಅತ್ಯಂತ ಹತ್ತಿರಕ್ಕೆ ಬಂದಿದ್ದನು. ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆ, ಸಮಯಪ್ರಜ್ಞೆ ಮೆರೆದು ಆತನಿಗೆ ಗಟ್ಟಿಯಾಗಿ ಧ್ವನಿಯಲ್ಲಿ ಹೊರಗೆ ನಿಲ್ಲುವಂತೆ ಸೂಚಿಸಿದ್ದಾರೆ. ಸದ್ಯ ಮಹಿಳೆ ಆ ಪಾರ್ಸೆಲ್, ಅನ್‌ಬಾಕ್ಸಿಂಗ್ ಹಾಗೂ ಡೆಲಿವರಿ ವ್ಯಕ್ತಿಯ ಜೊತೆಗಿನ ಸಂಭಾಷಣೆಯ ಸಂಪೂರ್ಣ ವಿಡಿಯೋ ರೆಕಾರ್ಡ್ (Video Recording) ಮಾಡಿಕೊಂಡಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು, ನಿಮ್ಮ ಜಾಗರೂಕತೆಯೇ ನಿಮ್ಮ ಶಕ್ತಿ! ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಹಂಚಿಕೊಳ್ಳಿ.
⚠️ Bengaluru, please be alert. This happened to a resident of Bengaluru today while she is working from home.
According to her A delivery person arrived at her doorstep with a small parcel that had her name and address on it. He insisted that I pay ₹500 immediately. The… pic.twitter.com/Ob5HlDlYpS— Karnataka Portfolio (@karnatakaportf) August 4, 2026