ಬೆಂಗಳೂರಲ್ಲಿ ಮನಮಿಡಿದ ಒಂದು ಬೆಕ್ಕಿನ ಅಪರೂಪದ ಕತೆ.. ಪೊಲೀಸರಿಗಾಗಿ 112ಕ್ಕೆ ಕರೆ ಮಾಡಿದಾಗ ಏನಾಯಿತು?

Published : Aug 17, 2026, 07:38 PM IST
cate rescue bangaluru

ಸಾರಾಂಶ

ಬೆಂಗಳೂರಿನ ಕಾಮರಾಜ ರಸ್ತೆಯಲ್ಲಿ ಮೂರು ದಿನಗಳಿಂದ ಬೀಗ ಹಾಕಿದ್ದ ಮನೆಯೊಳಗೆ ಸಿಲುಕಿದ್ದ ಬೆಕ್ಕನ್ನು ಭಾರತೀನಗರ ಪೊಲೀಸರು 112 ಗೆ ಕರೆ ಬಂದ 7 ನಿಮಿಷದಲ್ಲಿ ಸ್ಥಳಕ್ಕೆ ಬಂದು ರಕ್ಷಿಸಿದ್ದಾರೆ. ಪೊಲೀಸರ ಈ ಮಾನವೀಯ ಕಾರ್ಯವನ್ನು ಕಂಡು ಅಲ್ಲಿದ್ದ ಪುಟ್ಟ ಬಾಲಕನೊಬ್ಬ ಭಾವುಕನಾಗಿ ಕಣ್ಣೀರು ಹಾಕಿದ್ದಾನೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಅಂದ್ರೆ ಬರೀ ಟ್ರಾಫಿಕ್, ಐಟಿ ಕಂಪನಿಗಳಷ್ಟೇ ಅಲ್ಲ, ಇಲ್ಲಿ ಮಾನವೀಯತೆ ಇಂದಿಗೂ ಜೀವಂತವಾಗಿದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ. ಕಳೆದ ಮೂರು ದಿನಗಳಿಂದ ಬೀಗ ಹಾಕಿದ ಮನೆಯೊಳಗೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪುಟ್ಟ ಬೆಕ್ಕನ್ನ ನಮ್ಮ ಬೆಂಗಳೂರು ಪೊಲೀಸರು ಅತ್ಯಂತ ಜಾಣ್ಮೆಯಿಂದ ರಕ್ಷಿಸಿದ್ದಾರೆ.

ನಡೆದಿದ್ದೇನು?

ನಗರದ ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮರಾಜ ರಸ್ತೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಆ ಮನೆಯ ಮಾಲೀಕರು ಊರಿಗೆ ಹೋಗುವಾಗ ಮನೆಗೆ ಬೀಗ ಹಾಕಿದ್ದರು. ಆದರೆ, ಮಾಲೀಕರು ಬೀಗ ಹಾಕುವ ಮುನ್ನ ಕಿಟಕಿ ಮೂಲಕ ಬೆಕ್ಕೊಂದು ಮನೆಯೊಳಗೆ ನುಗ್ಗಿತ್ತು. ಬೆಕ್ಕು ಒಳಗೆ ಹೋದ ಬಳಿಕ ಗಾಳಿಗೆ ಕಿಟಕಿಯ ಬಾಗಿಲು ಕೂಡ ಮುಚ್ಚಿಕೊಂಡಿತ್ತು. ಪರಿಣಾಮ, ಹೊರಬರಲಾಗದೆ ಆ ಬೆಕ್ಕು ಕಳೆದ ಮೂರು ದಿನಗಳಿಂದ ಮನೆಯೊಳಗೆ ಲಾಕ್ ಆಗಿತ್ತು.

7 ನಿಮಿಷದಲ್ಲಿ ಪೊಲೀಸರು ಪ್ರತ್ಯಕ್ಷ!

ಮೂರು ದಿನಗಳಿಂದ ಆಹಾರ, ನೀರಿಲ್ಲದೆ ಬೆಕ್ಕು ಮನೆಯೊಳಗೆ ಅಸಹಾಯಕವಾಗಿ ಕೂಗುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿದರು. ಕರೆ ಬಂದ ಕೇವಲ 7 ನಿಮಿಷದಲ್ಲಿ ಸ್ಥಳಕ್ಕೆ ಧಾವಿಸಿದ ಭಾರತೀನಗರ ಪೊಲೀಸರು, ಸಮಯಪ್ರಜ್ಞೆ ಮೆರೆದು ಮನೆಯ ಕಿಟಕಿ ಮೂಲಕವೇ ಬೆಕ್ಕನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ.

ಪುಟ್ಟ ಬಾಲಕನ ಕಣ್ಣಲ್ಲಿ ಆನಂದಬಾಷ್ಪ!

ಪೊಲೀಸರು ಬೆಕ್ಕನ್ನು ರಕ್ಷಿಸಿದ ಕ್ಷಣ ಅಲ್ಲಿ ನೆರೆದಿದ್ದವರ ಮನ ಕರಗುವಂತಿತ್ತು. ಅದರಲ್ಲೂ ವಿಶೇಷವಾಗಿ ಬೆಕ್ಕನ್ನು ನೋಡುತ್ತಿದ್ದಂತೆ ಅಲ್ಲಿಯೇ ಇದ್ದ ಪುಟ್ಟ ಬಾಲಕನ ಕಣ್ಣಲ್ಲಿ ನೀರು ಜಿನುಗಿದೆ. ಅಸಹಾಯಕ ಮೂಕ ಪ್ರಾಣಿಯ ಜೀವ ಉಳಿಸಿದ ಪೊಲೀಸರ ಕಾಳಜಿಯನ್ನು ಕಂಡು ಬಾಲಕ ಭಾವುಕನಾಗಿದ್ದಾನೆ. ಸಾಮಾನ್ಯವಾಗಿ ಪೊಲೀಸರು ಅಂದ್ರೆ ಕೇವಲ ಕ್ರೈಂ, ಕೇಸ್ ಅಂತ ಅಂದುಕೊಳ್ಳುವವರ ನಡುವೆ, ಒಂದು ಸಣ್ಣ ಜೀವದ ರಕ್ಷಣೆಗಾಗಿ ಇಷ್ಟು ವೇಗವಾಗಿ ಸ್ಪಂದಿಸಿದ ಬೆಂಗಳೂರು ಪೊಲೀಸರ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ನಮ್ಮ ಪೊಲೀಸರು' ಕೇವಲ ಜನರಿಗಷ್ಟೇ ಅಲ್ಲ, ಮೂಕ ಪ್ರಾಣಿಗಳಿಗೂ ಆಪತ್ಬಾಂಧವರು ಅನ್ನೋದನ್ನ ಸಾಬೀತುಪಡಿಸಿದ್ದಾರೆ.

PREV
Read more Articles on
click me!

Recommended Stories

ಫ್ಯಾನ್ಸಿ ನಂಬರ್‌ ಕ್ರೇಜ್‌ನಿಂದ ಸಾರಿಗೆ ಇಲಾಖೆಗೆ ಹರಿದುಬಂತು ಕೋಟಿ ಕೋಟಿ ಹಣ, ಯಾವ ನಂಬರ್‌ಗೆ ಎಷ್ಟು ದುಡ್ಡು? ಇಲ್ಲಿದೆ ಡೀಟೇಲ್ಸ್‌..
ದರ್ಶನ್‌ಗೆ ಮತ್ತೆ ಹಿನ್ನಡೆ.. ಕೋರ್ಟ್‌ನಿಂದ ಮೂರು ಪ್ರಮುಖ ಆದೇಶ..!