
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆಯಾಗಿದೆ. ತಮ್ಮನ್ನು ವಿಚಾರಣೆಯ ವೇಳೆ ಖುದ್ದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಾಧೀಶರಾದ ಸುಜಾತ ಎಂ. ಸಂಬ್ರಾಣಿ ಅವರು ಈ ಆದೇಶವನ್ನು ಹೊರಡಿಸಿದ್ದು, ದರ್ಶನ್ ಅವರನ್ನು ಭೌತಿಕವಾಗಿ (ಖುದ್ದು) ಹಾಜರುಪಡಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಆರೋಪಿಗಳ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ಜೈಲು ಅಧಿಕಾರಿಗಳಿಗೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಮೊದಲನೇಯದು ಆರೋಪಿಗಳು ತಮ್ಮ ವಕೀಲರನ್ನು ಭೇಟಿ ಮಾಡಲು ಮತ್ತು ರಹಸ್ಯವಾಗಿ ಮಾತುಕತೆ ನಡೆಸಲು ಸೂಕ್ತ ಅವಕಾಶ ಕಲ್ಪಿಸಬೇಕು. ಎರಡನೇಯದು ವಿಡಿಯೋ ಕಾನ್ಫರೆನ್ಸ್ (VC) ಮೂಲಕ ವಿಚಾರಣೆ ನಡೆಸುವಾಗ ಆಡಿಯೋ ಮತ್ತು ವಿಡಿಯೋ ಗುಣಮಟ್ಟ ಅತ್ಯಂತ ಸ್ಪಷ್ಟವಾಗಿರಬೇಕು. ಇದರಲ್ಲಿ ಯಾವುದೇ ತಾಂತ್ರಿಕ ಅಡಚಣೆ ಇರಬಾರದು. ಮೂರನೇಯದರು ಈ ಆದೇಶ ಪಾಲನೆಯಾಗುತ್ತಿದೆಯೇ ಎಂಬ ಬಗ್ಗೆ ನಿಗಾ ವಹಿಸಲು ಸಿಟಿ ಸಿವಿಲ್ ಕೋರ್ಟ್ ರಿಜಿಸ್ಟ್ರಾರ್‌ಗೆ ಜವಾಬ್ದಾರಿ ನೀಡಲಾಗಿದೆ.
ವಿಚಾರಣೆಯ ವೇಳೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಬಲವಾದ ವಾದ ಮಂಡಿಸಿದ್ದರು. ಈ ಹಿಂದೆ ದರ್ಶನ್ ಅವರನ್ನು ಕೋರ್ಟ್‌ಗೆ ಕರೆತಂದಾಗ ಉಂಟಾದ ಅಸ್ತವ್ಯಸ್ತ ಪರಿಸ್ಥಿತಿಯನ್ನು ಅವರು ವಿವರಿಸಿದ್ದರು. ದರ್ಶನ್ ಅವರನ್ನು ನೋಡಲು ಸಾವಿರಾರು ಜನ ಜಮಾಯಿಸುವುದರಿಂದ ಕೋರ್ಟ್ ಆವರಣದಲ್ಲಿ ಉಸಿರಾಡಲು ಕಷ್ಟವಾಗುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ವರಮಹಾಲಕ್ಷ್ಮಿ, ಈದ್-ಮಿಲಾದ್ ಮತ್ತು ಗಣೇಶ ಹಬ್ಬಗಳ ಕಾರಣ ಪೊಲೀಸರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಹೆಚ್ಚಿನ ಬಂದೋಬಸ್ತ್ ಒದಗಿಸುವುದು ಕಷ್ಟ.
ಹೊಸ ಕಾನೂನು (BNSS) ಮತ್ತು ಹೈಕೋರ್ಟ್ ನಿಯಮಗಳ ಪ್ರಕಾರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಅವಕಾಶವಿದೆ ಎಂದು ಅವರು ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು, ಸಾಕ್ಷಿಗಳ ವಿಚಾರಣೆ ವೇಳೆ ವಕೀಲರಿಗೆ ಮಾಹಿತಿ ನೀಡಲು ಆರೋಪಿ ಪಕ್ಕದಲ್ಲಿರುವುದು ಅಗತ್ಯ. ಜೈಲಿನಲ್ಲಿ ಭೇಟಿಯಾದಾಗ ಎಲ್ಲವನ್ನೂ ಚರ್ಚಿಸಲು ಸಾಧ್ಯವಾಗುವುದಿಲ್ಲ ಎಂದು ವಾದಿಸಿದರೂ ಕೋರ್ಟ್ ಅದನ್ನು ಪುರಸ್ಕರಿಸಲಿಲ್ಲ.
ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೂಷ್ (A14) ತಾನು 'ಮಾಫಿ ಸಾಕ್ಷಿ' (Approver) ಆಗುವುದಾಗಿ ಅರ್ಜಿ ಸಲ್ಲಿಸಿದ್ದಾರೆ. ತನಗೆ ಪ್ರಕರಣದ ಸಂಪೂರ್ಣ ಮಾಹಿತಿ ಇದ್ದು, ಸ್ವಯಂಪ್ರೇರಿತವಾಗಿ ಕ್ಷಮಾದಾನ ಕೋರುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಎಲ್ಲರೊಂದಿಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗುತ್ತಿದ್ದ ಪ್ರದೂಷ್ ಅವರನ್ನು ಈಗ ಕೋರ್ಟ್ ಸೂಚನೆಯಂತೆ ಪ್ರತ್ಯೇಕವಾಗಿ ಹಾಜರುಪಡಿಸಲಾಯಿತು. ಇನ್ನುಳಿದಂತೆ A12 ಆರೋಪಿ ಲಕ್ಷ್ಮಣ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ಒಟ್ಟಾರೆಯಾಗಿ ಜೈಲಿನಿಂದ ಹೊರಬಂದು ಕೋರ್ಟ್ ಕಟಕಟೆಯಲ್ಲಿ ನಿಂತು ವಿಚಾರಣೆ ಎದುರಿಸಬೇಕೆಂಬ ದರ್ಶನ್ ಆಸೆಗೆ ಈಗ ತಣ್ಣೀರು ಸುರಿದಂತಾಗಿದೆ.