
ಬೆಂಗಳೂರು (ಸೆ.08) ಬೆಂಗಳೂರಿನಲ್ಲಿ ಸುಗಮ ಸಂಚಾರ, ಟ್ರಾಫಿಕ್ ದಟ್ಟಣೆ ಕಡಿತಗೊಳಿಸಲು ಕೆಲ ಬದಲಾವಣೆ ಮಾಡಲಾಗಿದೆ. ಇತ್ತೀಚೆಗೆ ಬೆಂಗಳೂರಿನ ಕೆಲ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನ, ಆಟೋ, ಸರಕು ಸಾಗಣೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಕುರಿತು ಮಹತ್ವದ ಬದಲಾವಣೆ ಮಾಡಲಾಗಿದೆ. ನಿರ್ಬಂಧಗಳ ಪೈಕಿ ಎರಡು ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧ ಆದೇಶ ಹಿಂಪಡೆಯಲಾಗಿದೆ. ಈ ಮೂಲಕ ಬೈಕ್ ಸವಾರರು ನಿಟ್ಟುಸಿರು ಬಿಡುವಂತಾಗಿದೆ.
ಹಲವು ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದೀಗ ಆದೇಶ ಪರಿಷ್ಕರಣೆ ಮಾಡಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಹಾಗೂ ಏರ್‌ಪೋರ್ಟ್ ಫ್ಲೈ ಓವರ್ ಮೇಲಿನ ಸಂಚಾರ ನಿರ್ಬಂಧ ವಾಪಸ್ ಪಡೆಯಲಾಗಿದೆ. ಸದ್ಯ ಬೈಕ್‌ಗಳಿಗೆ ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ. ಇನ್ನುಳಿದ ವಾಹನಗಳ ನಿರ್ಬಂಧ ಮುಂದುವರಿಯಲಿದೆ. ಸರಕು ಸಾಗಾಣೆ ವಾಹನ, ಆಟೋ ರಿಕ್ಷಾಗಳಿಗೆ ನಿರ್ಬಂಧ ಮುಂದುವರಿಯಲಿದೆ. ಏರ್ ಪೋರ್ಟ್ ಫ್ಲೈ ಓವರ್ ಮೇಲೆ ಬೈಕ್ ಜತೆ ಆಟೋಗಳಿಗೂ ಅನುಮತಿ ನೀಡಲಾಗಿದೆ. ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6ರಿಂದ 10ರವರೆಗೆ ನಿರ್ಬಂಧ ಹೇರಲಾಗಿದೆ.
ಎರಡು ಫ್ಲೈ ಓವರ್ ಮೇಲೆ ದ್ವಿಚತ್ರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ದ್ವಿಚಕ್ರ ವಾಹನ ಸವಾರರು ಎಡ ಭಾಗದ ಲೇನ್ ಬಳಸಬೇಕು. ಜೊತೆಗೆ ಲೇನ್ ಶಿಸ್ತು ಕಡ್ಡಾಯವಾಗಿ ಪಾಲಿಸಬೇಕು. ಇನ್ನು ಅಪಾಯಕಾರಿ, ವೇಗದ ಓವರ್ ಟೇಕ್ ನಿಯಮ ಉಲ್ಲಂಘನೆಯಾಗಿದೆ. ವೇಗದ ಮಿತಿ ಗಂಟೆಗೆ 60 ಕಿಲೋಮೀಟರ್ ಒಳಗಿರಬೇಕು ಎಂದು ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.
ಬದಲಾವಣೆಗೆ ಕಾರಣವೇನು?
ಇತ್ತೀಚೆಗೆ ಬೆಂಗಲೂರಿನ ಐದು ಫ್ಲೈಓವರ್ ಪೈಕಿ ನಾಲ್ಕು ಕಡೆಗಗಳಲ್ಲಿ ನಿರ್ಬಂಧ ಜಾರಿಗೊಳಿಸಲಾಗಿತ್ತು. ವಾಹನ ಸಂಚಾರ ನಿರ್ಬಂಧ ಬಳಿಕ ಬಿಜಿಎಸ್ ಮೇಲ್ಸೇತುವೆ, ಪೀಣ್ಯ ಮೇಲ್ಸೇತುವೆ ಮತ್ತು ಡಬಲ್ ಡೆಕ್ಕರ್ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರವು ಸುಗಮವಾಗಿ ಸಾಗುತ್ತಿದೆ. ಆದರೆ ಏರ್‌ಪೋರ್ಟ್ ರಸ್ತೆಯ ಎಲಿವೇಟೆಡ್ ಕಾರಿಡಾರ್‌ನಲ್ಲಿ (ಸಂಜೀವ್ ನಗರ ಕ್ರಾಸ್ - ವಿದ್ಯಾಶಿಲ್ಪ ಜಂಕ್ಷನ್) ಕಾರಿಡಾರ್‌ನಲ್ಲಿ ನಿರ್ಬಂಧಗಳಿಂದ ಇತರ ಕೆಲ ಸಂಚಾರ ಸಮಸ್ಯೆಗಳು ಎದುರಾಗಿದೆ. ಸಂಚಾರ ಬದಲಾವಣೆಯಿಂದ ರಸ್ತೆ ಮಾರ್ಗದಲ್ಲಿ ಭಾರಿ ಸಂಚಾರ ದಟ್ಟಣೆ ಸೃಷ್ಟಿಯಾಗಿದೆ. ಹೀಗಾಗಿ ಆದೇಶ ಪರಿಷ್ಕರಣೆಗೊಳಿಸಲಾಗಿದೆ.