
ಬೆಂಗಳೂರು (ನ.03) ಬೆಂಗಳೂರಿನ ರಸ್ತೆ ಗುಂಡಿಗಳಿಂದ ಅವಘಡಗಳು ಸಂಭವಿಸಿದೆ, ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಬೆಂಗಳೂರಿಗರೂ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸುತ್ತಾ ಹಿಡಿ ಶಾಪ ಹಾಕುತ್ತಿದ್ದಾರೆ. ಭಾರಿ ಆಕ್ರೋಶದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ನವೆಂಬರ್ 3ರ ಗಡುವು ನೀಡಿದ್ದರು. ಆದರೆ ಸಿಎಂ ಹಾಗೂ ಡಿಸಿಎಂ ಡೆಡ್‌ಲೈನ್ ಮಾತಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅವಮಾನ ಮಾಡಿದೆ. ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಸಿಎಂ, ಡಿಸಿಎಂ ಡೆಡ್ಲೈನ್‌ಗೂ ಬೆಲೆ ನೀಡಿಲ್ಲ. ನವೆಂಬರ್ 3ರ ಅಂತಿಮ ಗಡುವುದು ಇದೀಗ ನವೆಂಬರ್ 10ಕ್ಕೆ ವಿಸ್ತರಣೆಯಾಗಿದೆ.
ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಕೂಡ ನವೆಂಬರ್ 3ರೊಳಗೆ ಬೆಂಗಳೂರಿನ ರಸ್ತೆ ಗುಂಡಿಗಳ ಮುಚ್ಚಲು ಆದೇಶ ನೀಡಿದ್ದರು. ಆದರೆ ಬಹುತೇಕ ಬೆಂಗಳೂರಿನ ರಸ್ತೆ ಗುಂಡಿಗಳು ಹಾಗೇ ಇದೆ. ಗಡುವು ಮುಗಿದರೂ ಗುಂಡಿಗಳು ಮುಚ್ಚಿಲ್ಲ. ಹೀಗಾಗಿ ಮಹೇಶ್ವರ್ ರಾವ್ ಕೊನೆಗೆ ತಮ್ಮ ಡೆಡ್‌ಲೈನ್ ಮುಂದೂಡಿದ್ದಾರೆ. ನವೆಂಬರ್ 10ರೊಳಗೆ ಎಲ್ಲಾ ಗುಂಡಿ ಮುಚ್ಚುವ ಹೊಸ ಆದೇಶ ನೀಡಲಾಗಿದೆ.ಜಿಬಿಎ ಆಯುಕ್ತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಹೊಸ ಡೆಡ್ ಲೈನ್ ನೀಡಿಲಾಗಿದೆ.
ನವೆಂಬರ್ 10ರ ಒಳಗೆ ಮುಖ್ಯ ರಸ್ತೆ, ಉಪ ಮುಖ್ಯ ರಸ್ತೆ ಹಾಗೂ ವಾರ್ಡ್ ರಸ್ತೆ ಗುಂಡಿ ಮುಚ್ಚಲು ಸೂಚನೆ ನೀಡಲಾಗಿದೆ. ಆದರೆ ನವೆಂಬರ್ 3ರ ಗಡುವು ಪಾಲಿಸದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಇದೀಗ ನವೆಂಬರ್ 10ರ ಗಡುವು ಪಾಲಿಸುತ್ತಾರ ಅನ್ನೋ ಪ್ರಶ್ನೆ ಎದುರಾಗಿದೆ.
ರಸ್ತೆ ಗುಂಡಿ ಮುಚ್ಚಲು ಒಪ್ಪದ ಗುತ್ತಿಗೆದಾರರಿಗೆ ದಂಡ ವಿಧಿಸಲು ಸೂಚನೆ ನೀಡಲಾಗಿದೆ. ಜಿಬಿಎ ವ್ಯಾಪ್ತಿಯ ಐದು ಪಾಲಿಕೆ ಆಯುಕ್ತರು, ಅಧಿಕಾರಿಗಳ ಸಭೆಯಲ್ಲಿ ಮುಖ್ಯ ಆಯಕ್ತ ಮಹೇಶ್ವರ ರಾವ್ ಸೂಚನೆ ನೀಡಿದ್ದಾರೆ. ಬೆಂಗಳೂರು ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 44 ಸಿಸಿ ರೋಡ್ ಕಾಮಗಾರಿಗಳ ಪ್ರಸ್ತಾಪವಿದೆ. ಆ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಗುತ್ತಿಗೆದಾರರು ಕ್ರಮ ವಹಿಸುತ್ತಿಲ್ಲ ಎಂದು ಕೇಂದ್ರ ಪಾಲಿಕೆ ಆಯುಕ್ತರು ಸಭೆಯ ಗಮನಕ್ಕೆ ತಂದಿದ್ದಾರೆ. ರಸ್ತೆ ಗುಂಡಿ ಮುಚ್ಚಲು ಒಪ್ಪದ ಗುತ್ತಿಗೆದಾರರ ವಿರುದ್ಧ ದಂಡ ವಿಧಿಸಿ, ಅವರ ಬಿಲ್‌ನಲ್ಲಿ ದಂಡ ವಸೂಲು ಮಾಡಲು ಮುಖ್ಯ ಆಯುಕ್ತರ ಆದೇಶ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ರಸ್ತೆ ಅಗೆಯುವವರ ವಿರುದ್ದ ಕಠಿಣ ಕ್ರಮಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಹಲವರು ರಸ್ತೆ ಅಗೆಯಲು ಅನುಮತಿ ಪಡೆಯುತ್ತಿಲ್ಲ. ತಮಗೆ ಬೇಕಾದಲ್ಲಿ ರಸ್ತೆ ಅಗೆದು ಹಾಳು ಮಾಡುತ್ತಿದ್ದಾರೆ. ರಸ್ತೆ ಅಗೆಯುವಾಗ ಅನುಮತಿ ಪಡೆಯಲು ಸಾರ್ವಜನಿಕರು, ಗುತ್ತಿಗೆದಾರರು ಮರೆಯುತ್ತಿದ್ದಾರೆ. ಕೂಡಲೇ ರಸ್ತೆ ಕತ್ತರಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾಚ್ ಸೂಚನೆ ನೀಡಿದ್ದಾರೆ. ರಸ್ತೆ ಅಗೆಯುವವರು ಅನುಮತಿ ಪಡೆವ ಪೋರ್ಟಲ್ ಅನ್ನು ಜಿಬಿಎಗೆ ತಕ್ಕಂತೆ ಮರು ವಿನ್ಯಾಸಗೊಳಿಸಲು ಆದೇಶ ನೀಡಿದ್ದಾರೆ. ಜಿಬಿಎಗೆ ತಕ್ಕಂತೆ ಪೋರ್ಟಲ್ ಮರು ವಿನ್ಯಾಸ ಆಗುವವರೆಗೆ ನೇರ ಪರಿಶೀಲನೆಗೆಸೂಚಿಸಿದ್ದಾರೆ. ಇಷ್ಟೇ ಅಲ್ಲ ದಂಡ ವಿಧಿಸಲು ಸೂಚನೆ ನೀಡಲಾಗಿದೆ.