ನ.1ರಿಂದ ಕನ್ನಡ ನಾಮಫಲಕ ಕಡ್ಡಾಯ: ಆದೇಶ ಪಾಲಿಸದಿದ್ದರೆ ಲೈಸೆನ್ಸ್‌ ರದ್ದು!

By Web DeskFirst Published Oct 10, 2019, 7:59 AM IST
Highlights

ನ.1ರಿಂದ ಕನ್ನಡ ನಾಮಫಲಕ ಕಡ್ಡಾಯ!| ಬಿಬಿಎಂಪಿ ವ್ಯಾಪ್ತಿಯ ಉದ್ದಿಮೆ, ಮಾಲ್‌, ಹೋಟೆಲ್‌, ಮಳಿಗೆಗಳು ಎಲ್ಲ ರೀತಿಯ ವಾಣಿಜ್ಯ ಕೇಂದ್ರಗಳಿಗೆ ಅನ್ವಯ: ಮೇಯರ್‌| ನಾಮಫಲಕದಲ್ಲಿ ಶೇ.60 ಕನ್ನಡ ಇರಬೇಕು| ಕನ್ನಡ ದೊಡ್ಡ ಅಕ್ಷರದಲ್ಲಿ ಕಾಣುವಂತಿರಬೇಕು| ಆದೇಶ ಪಾಲಿಸದಿದ್ದರೆ ಲೈಸೆನ್ಸ್‌ ರದ್ದು| ಜಾಹೀರಾತು ಬೈಲಾದಲ್ಲಿ ಕನ್ನಡ ಕಡ್ಡಾಯ ನಿಯಮ

ಬೆಂಗಳೂರು[ಅ.10]: ಬಿಬಿಎಂಪಿ ವ್ಯಾಪ್ತಿಯ ಉದ್ದಿಮೆ, ಮಾಲ್‌, ಹೋಟೆಲ್‌, ಮಳಿಗೆಗಳು ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಕೇಂದ್ರಗಳಲ್ಲಿ ನವೆಂಬರ್‌ 1ರ ಕನ್ನಡ ರಾಜ್ಯೋತ್ಸವ ದಿನದಿಂದ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಮೇಯರ್‌ ಗೌತಮ್ ಕುಮಾರ್‌ ತಿಳಿಸಿದ್ದಾರೆ.

ಈ ಸಂಬಂಧ ಬುಧವಾರ ಪಾಲಿಕೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.1ರಿಂದಲೇ ನಗರಾದ್ಯಾಂತ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಕನ್ನಡ ನಾಮಫಲಕ ಹಾಕಲು ನಿರಾಕರಿಸುವ ಮಳಿಗೆಗಳಿಗೆ ಮುಲಾಜಿಲ್ಲದೆ ಉದ್ಯಮ ಪರವಾನಗಿ ನೀಡದಿರಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆರೋಪಕ್ಕೆಲ್ಲ ಉತ್ತರ; ಕನ್ನಡ ಫಲಕ ಇರದ ಮಳಿಗೆಗೆ ಬೆಂಗಳೂರಲ್ಲಿ ಸ್ಥಾನವಿಲ್ಲ

ಈ ಸಂಬಂಧ ಸಂಬಂಧಪಟ್ಟಅಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಲಾಗಿದೆ. ನವೆಂಬರ್‌ ತಿಂಗಳಾದ್ಯಂತ ನಗರದಲ್ಲಿರುವ ಎಲ್ಲ ಮಳಿಗೆಗಳ ಮೇಲೆ ಕನ್ನಡ ನಾಮಫಲಕ ಹಾಕಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಹಿಂದೆಯೂ ಪಾಲಿಕೆಯಲ್ಲಿ ಸುತ್ತೋಲೆ ಹೊರಡಿಸಿ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಕೆಲವರು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರಿಂದ ತಾತ್ಕಾಲಿಕವಾಗಿ ತಡೆ ನೀಡಲಾಗಿತ್ತು. ಆದರೆ, ಕಾನೂನಿನ ತೊಡಕು ನಿವಾರಿಸಿಕೊಂಡು ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಈಗಾಗಲೇ ಬಿಬಿಎಂಪಿಯ ಸಿದ್ಧಪಡಿಸಿರುವ ಹೊಸ ‘ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶಗಳ ಬೈಲಾ-2018’ರಲ್ಲಿ ನಾಮಫಲಕದ ಶೇ.60ರಷ್ಟುಜಾಗದಲ್ಲಿ ಕನ್ನಡ ಕಡ್ಡಾಯದ ನಿಯಮ ಅಳವಡಿಸಲಾಗಿದೆ. ಪ್ರಥಮ ಆದ್ಯತೆಯಲ್ಲಿ ದಪ್ಪ ಅಕ್ಷರಗಳಲ್ಲಿ ಕನ್ನಡದಲ್ಲಿ ನಾಮಫಲಕ ಅಳವಡಿಸಬೇಕು. ಉಳಿದ ಶೇ.40ರಷ್ಟುಜಾಗದಲ್ಲಿ ಅಂಗಡಿ, ಮಳಿಗೆ, ಮಾಲ್‌ ಯಾವುದೇ ವಾಣಿಜ್ಯ ಕೇಂದ್ರಗಳ ಮಾಲಿಕರು ಇತರೆ ಭಾಷೆಯಲ್ಲಿ ತಮ್ಮ ನಾಮಫಲಕ ಪ್ರದರ್ಶಿಸಿಕೊಳ್ಳಬಹುದು. ಆದರೆ, ಎಲ್ಲ ಭಾಷೆಗಳಿಗಿಂತ ಕನ್ನಡದಲ್ಲಿ ದೊಡ್ಡ ಅಕ್ಷರಗಳಲ್ಲಿ ನಾಮಫಲಕ ಇರುವಂತೆ ನೋಡಿಕೊಳ್ಳಬೇಕು. ಈ ನೂತನ ಬೈಲಾ ಜಾರಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ, ಶೀಘ್ರದಲ್ಲೇ ಪಾಲಿಕೆಯಲ್ಲಿ ಅನುಮೋದನೆ ಪಡೆದು ಸರ್ಕಾರದಿಂದಲೂ ಒಪ್ಪಿಗೆ ಪಡೆದು ಜಾರಿಗೆ ತರುತ್ತೇವೆ. ನ.1ರಿಂದ ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸಿ ನಗರದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುತ್ತೇವೆ ಎಂದು ವಿವರಿಸಿದರು.

ಒಂದು ವೇಳೆ ಕನ್ನಡ ನಾಮಫಲಕವಿಲ್ಲದಿದ್ದರೆ ಅಂತಹ ಮಳಿಗೆಗಳಿಗೆ ಉದ್ದಿಮೆ ಪರವಾನಗಿಯನ್ನು ಮುಲಾಜಿಲ್ಲದೆ ರದ್ದುಪಡಿಸಲಾಗುವುದು. ಹೊಸ ಪರವಾನಗಿ ನೀಡುವಾಗಲೂ ಹೊಸ ಬೈಲಾ ನಿಯಮಗಳಿಗೆ ಬದ್ಧವಾಗಿರುವ ಷರತ್ತು ಮೂಲಕವೇ ನೀಡಲಾಗುವುದು. ಆದಷ್ಟುಬೇಗ ಬೈಲಾ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾರೇ ಅಡ್ಡ ಬಂದರೂ ಕನ್ನಡ ಕಡ್ಡಾಯ ನಿಲ್ಲಿಸುವುದಿಲ್ಲ ಎಂದು ಹೇಳಿದರು.

2017ರಲ್ಲೇ ಜಾರಿ: ನಾಮಫಲಕದಲ್ಲಿ ಶೇ.60ರಷ್ಟುಜಾಗವನ್ನು ಕನ್ನಡಕ್ಕೆ ಮೀಸಲಿಡಬೇಕೆಂದು 2017ರಲ್ಲಿ ಬಿಬಿಎಂಪಿ ಸುತ್ತೋಲೆ ಹೊರಡಿಸಿತ್ತು. ಕನ್ನಡಕ್ಕೆ ಆದ್ಯತೆ ನೀಡದ ಅಂಗಡಿಗಳಿಗೆ ಪರವಾನಗಿಯನ್ನು ರದ್ದುಪಡಿಸುವುದಾಗಿಯೂ ಆದೇಶದಲ್ಲಿ ತಿಳಿಸಿತ್ತು. ಆದರೆ, ಈ ಸುತ್ತೋಲೆಯನ್ನು ಪ್ರಶ್ನಿಸಿ ಕೆಲವು ಅಂಗಡಿ ಮಾಲಿಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಬಿಬಿಎಂಪಿ ಆದೇಶಕ್ಕೆ ತಡೆ ನೀಡಿತ್ತು. ಅಲ್ಲದೆ, ಈ ರೀತಿಯ ಆದೇಶ ಮಾಡಲು ಕಾನೂನಲ್ಲಿ ಅವಕಾಶವಿಲ್ಲ,

'ಅಟ್ಟಹಾಸ'ದಲ್ಲಿ ಡಾ. ರಾಜ್‌‌ರಂತೆ ಮಿಂಚಿದ ನಟನಿಗೆ ಬೇಕು ಸಹಾಯ ಹಸ್ತ!

ಹಾಗಾಗಿ ಆದೇಶ ಅಸಂವಿಧಾನಿಕ ಎಂದು ಅಭಿಪ್ರಾಯಪಟ್ಟಿತ್ತು. ಇದರ ಬೆನ್ನಲ್ಲೇ ಬಿಬಿಎಂಪಿ ತನ್ನ ಸುತ್ತೋಲೆಯನ್ನು ವಾಪಸ್‌ ಪಡೆದುಕೊಂಡಿತ್ತು. ನಂತರ ನಾಮಫಲಕದಲ್ಲಿ ಕನ್ನಡ ಕಡ್ಡಾಯಕ್ಕೆ ಕಾನೂನಾತ್ಮಕವಾಗಿ ಅವಕಾಶ ತರಲು 2018ರಲ್ಲಿ ನೂತನ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶಗಳ ಬೈಲಾ ಸಿದ್ಧಪಡಿಸಿದೆ. ಇದೀಗ ಅದನ್ನು ಕೌನ್ಸಿಲ್‌ನಲ್ಲಿ ಒಪ್ಪಿಗೆ ಪಡೆದು ಸರ್ಕಾರದ ಅನುಮೋದನೆಗೆ ಕಳುಹಿಸಬೇಕಾಗಿದೆ.

click me!