
ಬೆಂಗಳೂರು (ಜೂ.23): ಉತ್ತರ ಕನ್ನಡ ಜಿಲ್ಲೆಯ ಮಾಜಿ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರು ಅಪಘಾತಕ್ಕೆ ಈಡಾಗಿದೆ. ಕಾರವಾರದಿಂದ ಬೆಂಗಳೂರಿಗೆ ಬರುವ ಹಾದಿಯಲ್ಲಿ ನೆಲಮಂಗಲದ ನಿಜಗಲ್ ತಾಲೂಕಿನಲ್ಲಿ ಘಟನೆ ನಡೆದಿದೆ. ಕಾರು ಓವರ್‌ಟೇಕ್ ಬೆನ್ನಲ್ಲಿಯೇ ಅಪಘಾತ ಸಂಭವಿಸಿದ್ದು, ಇದೇ ವಿಚಾರವಾಗಿ ಗಲಾಟೆ ನಡೆದಿದೆ. ಅನಂತ್ ಕುಮಾರ್ ಅವರ ಗನ್‌ಮ್ಯಾನ್ ಹಾಗೂ ಡ್ರೈವರ್, ತುಮಕೂರು ಮೂಲದ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಇನೋವಾ ಕಾರು ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರನ್ನ ಓವರ್‌ಟೇಕ್ ಮಾಡಿದ ವಿಚಾರದಲ್ಲಿ ಗಲಾಟೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. ಅನಂತ್ ಕುಮಾರ್ ಕಾರ್‌ನಲ್ಲಿದ್ದ ಡ್ರೈವರ್ ಮಹೇಶ್, ಗನ್‌ಮ್ಯಾನ್ ಶ್ರೀಧರ್, ಹಾಗೂ ಆಶುತೋಷ್ (ಅನಂತ್ ಕುಮಾರ್ ಹೆಗಡೆ ಮಗ) ಎನ್ನುವವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಾಗಿದ್ದು, ದಾಬಸ್ ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ, ನೆಲಮಂಗಲ ಡಿವೈಎಸ್ ಪಿ ಕಚೇರಿಗೆ ಅನಂತ್ ಕುಮಾರ್ ಹೆಗಡೆ ಆಗಮಿಸಿದ್ದು, ಅವರ ವಿಚಾರಣೆ ನಡೆಯುತ್ತಿದೆ.
ನೆಲಮಂಗಲ ಗ್ರಾಮಾಂತರ ಠಾಣಾ ಕಛೇರಿಯಲ್ಲಿ ಡಿವೈಎಸ್ಪಿ ಜಗದೀಶ್ ಅನಂತ್ ಕುಮಾರ್ ಹೆಗಡೆ ವಿಚಾರಣೆ ನಡೆಸಿದ್ದಾರೆ.ಈ ವೇಳೆ ಕಾರವಾರದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗಿ ಮಾಹಿತಿ ನೀಡಿದ್ದು, ಬರುವಾಗ ಹಿಂದಿನಿಂದ ಬಂದ ಇನ್ನೊವಾ ಕಾರು ಓವರ್ ಟೇಕ್ ಮಾಡಿತ್ತು. ಓವರ್ ಟೇಕ್ ಕಾರಿಗೆ ಟಚ್ ಆಗುವ ಸಂದರ್ಭದಲ್ಲಿ ಡ್ರೈವರ್ ಇದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರೂ ಕೂಡಾ ಬೈದಿದ್ದಾರೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಹಲ್ಲೆಯ ಮಟ್ಟಕ್ಕೆ ಹೋಗಿದೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.
ಘಟನೆ ಸಂಬಂಧ ಹಲ್ಲೆ ಮಾಡಿರೋದಾಗಿ ಗನ್‌ಮ್ಯಾನ್ ಹಾಗೂ ಡ್ರೈವರ್ ಒಪ್ಪಿಕೊಂಡಿದ್ದಾರೆ.ಅನಂತ ಕುಮಾರ್ ಹೆಗಡೆ ನಾನು ಕಾರಿನಲ್ಲೆ ಇದ್ದೆ ಹಲ್ಲೆ ಮಾಡಿಲ್ಲ ಎಂದಿದ್ದಾರೆ. ಘಟನೆ ಸಂಬಂಧ ದಾಬಸ್ ಪೇಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನ ಅನ್ವಯ ಪ್ರಕರಣ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಸಲ್ಮಾನ್, ಸೈಪ್, ಇಲಿಯಾಜ್ ಖಾನ್, ಗುಲಷಿರ್ ಉನ್ನಿಸಾ ಅವರ ಮೇಲೆ ಹಲ್ಲೆ ಮಾಡಲಾಗಿದ್ದು, ಗಾಯಾಳುಗಳು ತುಮಕೂರು ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ. ಹೆಚ್ಚಿನ ಚಿಕಿತ್ಸೆಗೆ ಆಂಬ್ಯುಲೆನ್ಸ್ ಮೂಲಕ ಶಿಫ್ಟ್ ಮಾಡಲಾಗಿದೆ. ತುಮಕೂರಿನಲ್ಲಿ ಮದುವೆ ಮುಗಿಸಿ ಬರುತ್ತಿರುವಾಗ ಇವರ ಮೇಲೆ ಹಲ್ಲೆಯಾಗಿದ್ದು, ಇನೋವಾ ಕಾರಿನಲ್ಲಿ ಒಟ್ಟು 7 ಮಂದಿ ಪ್ರಯಾಣ ಮಾಡುತ್ತಿದ್ದರು.. ನಾಲ್ವರು ಮಹಿಳೆಯರು ಮೂವರು ಪುರುಷರು ಇದ್ದರು. ಹಲ್ಲೆಗೊಳಗಾದ ಕುಟುಂಬ ದಾಬಸ್ ಪೇಟೆಯ ಹಾಲೇನಹಳ್ಳಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಮಹಿಳೆ ಅಂತಲೂ ನೋಡದೆ ಹಲ್ಲೆ ಮಾಡಲಾಗಿದ್ದು, ವೃದ್ಧೆ ಗುಲಷಿರ್ ಉನ್ನಿಸಾ ಮೇಲೂ ದಾಳಿ ಮಾಡಲಾಗಿದೆ.
ಪ್ರಕರಣದಲ್ಲಿ ಎರಡೂ ಕಡೆಯವರು ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ತುಮಕೂರಿನ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ FIR ದಾಖಲಾಗಿದೆ. ಅನಂತ್ ಕುಮಾರ್ ಹೆಗಡೆ A1, ಗನ್ ಮ್ಯಾನ್ A2, ಕಾರು ಚಾಲಕ A3 ಆಗಿದ್ದಾರೆ. ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಇನ್ನೊಂದೆಡೆ ಗನ್‌ಮ್ಯಾನ್, ಮಾಜಿ ಸಂಸದರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ತಮ್ಮ ಕರ್ತವ್ಯ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.