
ಬೆಂಗಳೂರು (ನ.03): ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳನ್ನು (Footpath) ಅತಿಕ್ರಮಿಸಿಕೊಂಡು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುವ ಅಂಗಡಿಕಾರರು ಹಾಗೂ ಬೀದಿಬದಿ ಒತ್ತುವರಿದಾರರಿಗೆ ನಗರ ಪಾಲಿಕೆ ಬಿಸಿ ಮುಟ್ಟಿಸಿದೆ. ಪಾದಚಾರಿ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಮೂವರಿಗೆ ಬರೋಬ್ಬರಿ ₹25,000 ದಂಡ ವಿಧಿಸುವ ಮೂಲಕ ಪಾಲಿಕೆ ಅಧಿಕಾರಿಗಳು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಜೀವನ್ ಭೀಮಾ ನಗರ (ಜೆ.ಬಿ. ನಗರ) ವಾರ್ಡ್ ಪ್ರದೇಶದಲ್ಲಿ ಪಾದಚಾರಿಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಡ್ಡಿಯಾಗಿದ್ದ ಒತ್ತುವರಿಗಳ ವಿರುದ್ಧ ಅಧಿಕಾರಿಗಳು ಹಠಾತ್ ವಿಶೇಷ ಕಾರ್ಯಾಚರಣೆ ನಡೆಸಿದರು.
ಸಾರ್ವಜನಿಕರ ಓಡಾಟಕ್ಕೆ ಮೀಸಲಾದ ಜಾಗವನ್ನು ಕಬಳಿಸಿ ವ್ಯಾಪಾರ ನಡೆಸುತ್ತಿದ್ದ ಹಾಗೂ ನಿಯಮ ಉಲ್ಲಂಘಿಸಿದ್ದ ಮೂವರು ಪ್ರಮುಖ ಒತ್ತುವರಿದಾರರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು:
ಹೀಗೆ ಒಟ್ಟು ಮೂವರಿಂದ ₹25,000 ದಂಡ ವಸೂಲಿ ಮಾಡಿ, ಅಕ್ರಮ ಶೆಡ್ ಮತ್ತು ವಸ್ತುಗಳನ್ನು ತೆರವುಗೊಳಿಸಲಾಗಿದೆ.
ಕಾರ್ಯಾಚರಣೆ ಕುರಿತು ಮಾಹಿತಿ ನೀಡಿರುವ ಕೇಂದ್ರ ನಗರ ಪಾಲಿಕೆ ಆಯುಕ್ತರಾದ ಜಗದೀಶ್.ಜಿ, "ಪಾದಚಾರಿ ಮಾರ್ಗಗಳು ಸಾರ್ವಜನಿಕರ, ವಿಶೇಷವಾಗಿ ಹಿರಿಯ ನಾಗರಿಕರು, ಪುಟ್ಟ ಮಕ್ಕಳು ಮತ್ತು ವಿಕಲಚೇತನರ ಸುರಕ್ಷಿತ ಸಂಚಾರಕ್ಕಾಗಿ ಇವೆ. ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಂಡರೆ ಜನ ಅನಿವಾರ್ಯವಾಗಿ ವಾಹನಗಳು ಓಡಾಡುವ ಮುಖ್ಯರಸ್ತೆಯಲ್ಲೇ ನಡೆಯಬೇಕಾಗುತ್ತದೆ. ಇದು ಅಪಘಾತಗಳಿಗೆ ಕಾರಣವಾಗುತ್ತದೆ" ಎಂದು ಕಳವಳ ವ್ಯಕ್ತಪಡಿಸಿದರು.
ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮುಂದಿನ ದಿನಗಳಲ್ಲಿ ಕೇವಲ ಜೆ.ಬಿ. ನಗರ ಮಾತ್ರವಲ್ಲದೆ ಕೇಂದ್ರ ಪಾಲಿಕೆಯ ಪ್ರತಿಯೊಂದು ವಾರ್ಡ್‌ನಲ್ಲೂ ಇಂತಹ ಹಠಾತ್ ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ಯಾವುದೇ ಪ್ರಭಾವಕ್ಕೂ ಮಣಿಯದೆ, ನಿಯಮ ಉಲ್ಲಂಘಿಸುವವರ ವಿರುದ್ಧ ಭಾರಿ ಮೊತ್ತದ ದಂಡ ಮತ್ತು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.