
ಬೆಂಗಳೂರು (ಜು.15) ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಒಂದೆರೆಡಲ್ಲ. ಒಂದೊಂದು ಏರಿಯಾ, ವಲಯದಲ್ಲಿ ಪ್ರತಿ ದಿನ ಸವಾರರು ಪರದಾಡುತ್ತಿದ್ದಾರೆ. ಎಐ ಕ್ಯಾಮೆರಾ, ಎಐ ತಂತ್ರಜ್ಞಾನಗಳನ್ನು ಜಾರಿಗೊಳಿಸಿದರೂ, ಹಲವು ಭಾಗದಲ್ಲಿ ಬಾಟಲ್ ನೆಕ್ ರೀತಿಯ ರಸ್ತೆಗಳಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಇದೇ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಈಸ್ ಮೈ ಟ್ರಿಪ್ ಸಂಸ್ಥೆಯ ಸಹ ಸಂಸ್ಥಾಪಕ ಪ್ರಶಾಂತ್ ಪಿಟ್ಟಿ ಸಿಲುಕಿ ಒದ್ದಾಡಿದ್ದಾರೆ. ಬರೋಬ್ಬರಿ 2 ಗಂಟೆ ಕಾಲ ಒಂದೇ ಕಡೆ ಜಾಮ್ ಆಗಿ ಪರಿತಪಿಸಿದ್ದಾರೆ. ಕೊನೆಗೂ ದಡ ಸೇರಿದ ಪ್ರಶಾಂತ್ ಪಿಟ್ಟಿ ಮಹತ್ವದ ನಿರ್ಧಾರ ಮಾಡಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ಪ್ರಾಜೆಕ್ಟ್ ಘೋಷಿಸಿದ್ದಾರೆ.
ಟ್ರಾಫಿಕ್ ಸಮಸ್ಯೆಗೆ ಪರಿಹಾರ ಹುಡುಕಲು ಮುಂದಾದ ಉದ್ಯಮಿ
ಪ್ರಶಾಂತ್ ಪಿಟ್ಟಿ ಬರೋಬ್ಬರಿ 100 ನಿಮಿಷಕ್ಕೂ ಹೆಚ್ಚು ಕಾಲ ಬೆಂಗಳೂರು ರಸ್ತೆಯಲ್ಲಿ ಸಿಲುಕಿದ್ದಾರೆ. ಟ್ರಾಫಿಕ್ ಕಿರಿಕಿರಿ, ತಕ್ಕ ಸಮಯಕ್ಕೆ ತಲುಪಲು ಸಾಧ್ಯವಾಗದೇ ಅಸಾಹಯಕರಾಗಿ ರಸ್ತೆಯಲ್ಲೇ ಕಳೆಯಬೇಕಾಗಿ ಬಂದಿದೆ.ಈ ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತೆ ಉದ್ಯಮಿ ಪ್ರಶಾಂತ್ ಪಿಟ್ಟಿ ಪರಿಹಾರಕ್ಕೆ ನಿರ್ಧರಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಅತ್ಯಾಧುನಿಕ ಎಐ ತಂತ್ರಜ್ಞಾಾನ ಬಳಸಿ ತಕ್ಕ ಮಟ್ಟಿನ ಪರಿಹಾರ ಮಾಡುವುದಾಗಿ ಘೋಷಿಸಿದ್ದಾರೆ. ಇದಕ್ಕಾಗಿ 1 ಕೋಟಿ ರೂಪಾಯಿ ತೆಗೆದಿಡುವುದಾಗಿ ಹೇಳಿದ್ದಾರೆ.
ಒಂದೇ ಕಡೆ 100 ನಿಮಿಷ ಜಾಮ್
ಬೆಂಗಳೂರು ಒಆರ್‌ಆರ್ ಜಂಕ್ಷನ್ ಬಳಿ ನಾನು ಸಿಲುಕಿಕೊಂಡಿದ್ದೆ. ಬರೋಬ್ಬರಿ 100 ನಿಮಿಷಕ್ಕೂ ಹೆಚ್ಚು ಕಾಲ ಒಂದೇ ಕಡೆ ಟ್ರಾಫಿಕ್‌ನಲ್ಲಿ ಸಿಲುಕಿದ್ದೆ. ಜಾಮ್ ರಸ್ತೆಯಲ್ಲಿ ಆಮೆಯಂತೆ ಸಾಗಿ ಬಂದಾಗಲೇ ಗೊತ್ತಾಗಿದ್ದು, ಇಲ್ಲಿ ಸಿಗ್ನಲ್ ಇಲ್ಲ, ಪೊಲೀಸ್ ಇಲ್ಲ. ಎಲ್ಲರಂತೆ ಬೆಂಗಳೂರು ಟ್ರಾಫಿಕ್‌ನ್ನು ಮೀಮ್ಸ್ ಮೂಲಕ ಅಥವಾ ಟ್ರೋಲ್ ಮಾಡಲು ನಾನು ಇಷ್ಟಪಡುವುದಿಲ್ಲ. ಇದರ ಬದಲಾಗಿ, ಇದಕ್ಕೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಪ್ರಶಾಂತ್ ಪಿಟ್ಟಿ ಹೇಳಿದ್ದಾರೆ.
ಟ್ರಾಫಿಕ್ ಪ್ರಾಜೆಕ್ಟ್ ಆರಂಭ
ಬೆಂಗಳೂರು ಟ್ರಾಫಿಕ್ ಮೀಮ್ಸ್, ಟ್ರೋಲ್ ಪಟ್ಟಿಗೆ ನಾನು ಒಂದು ಸೇರಿಸಲು ಬಯಸುವುದಿಲ್ಲ. ಆದರೆ ಈ ಸಮಸ್ಯೆಗೆ ಪರಿಹಾರ ಸೂಚಿಸಲು ನಾನು ಬಯಸುತ್ತೇನೆ. ಎಪ್ರಿಲ್ 2025ರಲ್ಲಿ ಗೂಗಲ್ ಮ್ಯಾಪ್ ರೋಡ್ ಮ್ಯಾನೇಜ್ಮೆಂಟ್ ಇನ್‌ಸೈಟ್ ಟೂಲ್ ಆರಂಭಿಸಿದೆ. ಈ ಮೂಲಕ ನಗರದ ಟ್ರಾಫಿಕ್ ಮಟ್ಟವನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಈ ಡೇಟಾ, ಸ್ಯಾಟಲೈಟ್ ಚಿತ್ರಗಳನ್ನು ಬಳಸಿ ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಇದೆ, ಎಲ್ಲಿ ಬಾಟಲ್ ನೆಕ್ ಸಮಸ್ಯೆಯಿಂದ ಟ್ರಾಫಿಕ್ ಹೆಚ್ಚಾಗುತ್ತಿದೆ ಅನ್ನೋದು ಪತ್ತೆ ಹಚ್ಚಲಾಗುತ್ತದೆ. ಬಳಿಕ ಎಐ ತಂತ್ರಜ್ಞಾನ ಬಳಸಿ ಈ ರಸ್ತೆಗಳಲ್ಲಿ ಅದಕ್ಕೆ ತಕ್ಕಂತೆ ಸಿಗ್ನಲ್ ಸೇರಿದಂತೆ ಇತರ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ 1 ಕೋಟಿ ರೂಪಾಯಿ ಮೀಸಲಿಡುವುದಾಗಿ ಪ್ರಶಾಂತ್ ಪಿಟ್ಟಿ ಘೋಷಿಸಿದ್ದಾರೆ.
ಎಐ ಎಂಜಿನೀಯರ್ಸ್ ನೇಮಕ ಮಾಡಿ ಪ್ರಾಜೆಕ್ಟ್ ಆರಂಭ
ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹರಿಸಲು ಎಐ ಎಂಜಿನೀಯರ್ಸ್, ಗೂಗಲ್ ಮ್ಯಾಪ್ ಡೇಟಾ, ಸ್ಯಾಟಲೈಟ್ ಚಿತ್ರ ಸೇರಿದಂತೆ ಎಲ್ಲಾ ತಂತ್ರಜ್ಞಾನ ಮೂಲ ಬಳಸಿಸಿಕೊಳ್ಳಲಾಗುತ್ತಿದೆ. ಇದೇ ವೇಳೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಕಿ ಅಂಶಗಳನ್ನು ಬಳಸಿಸಕೊಳ್ಳಲಾಗುತ್ತದೆ ಎಂದು ಪ್ರಶಾಂತ್ ಪಿಟ್ಟಿ ಹೇಳಿದ್ದಾರೆ.
ಬೆಂಗಳೂರು ಭವಿಷ್ಯದ ಟೆಕ್ ಸಿಟಿ
ಬೆಂಗಳೂರು ಭವಿಷ್ಯದ ಟೆಕ್ ಸಿಟಿಯಾಗಿದೆ. ಇಲ್ಲಿನ ಜನರು ಇದಕ್ಕಿಂತ ಉತ್ತಮ ಟ್ರಾಫಿಕ್ ಅರ್ಹರಾಗಿದ್ದಾರೆ. ಆದರೆ ನಿರ್ಲಕ್ಷ್ಯ, ಸಿಬ್ಬಂದಿಗಳ ಕೊರತೆ ಕೆಲ ರಸ್ತೆಗ ವಿನ್ಯಾಸಗಳ ಸಮಸ್ಯೆಗಳಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇದನ್ನು ತಂತ್ರಜ್ಞಾನದ ಮೂಲಕ ತಕ್ಕ ಮಟ್ಟಿಗೆ ಪರಿಹರಿಸಲು ಸಾಧ್ಯವಿದೆ ಎಂದು ಪ್ರಶಾಂತ್ ಪಿಟ್ಟಿ ಹೇಳಿದ್ದಾರೆ.