
ಬೆಂಗಳೂರು (ಜು.14): ಗ್ಯಾರಂಟಿ ಕೊಟ್ಟು ಜನರನ್ನು ಅಕ್ಷರಶಃ ದರ ಏರಿಕೆ ಕೂಪದಲ್ಲಿ ತಳ್ಳಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮತ್ತೊಮ್ಮೆ ಬೆಂಗಳೂರಿಗರು ಬಲಿಯಾಗಿದ್ದಾರೆ. ಸಾಲು ಸಾಲು ದರ ಏರಿಕೆ ಗಿಫ್ಟ್ ಕೊಟ್ಟಿದ್ದ ರಾಜ್ಯ ಸರ್ಕಾರ ಈಗ ಬೆಂಗಳೂರಿನಲ್ಲಿ ಆಟೋ ಮೀಟರ್‌ನ ಕನಿಷ್ಠ ದರ ಏರಿಕೆ ಮಾಡಿ ಅದೇಶ ಹೊರಡಿಸಿದ್ದು, ಆಗಸ್ಟ್1 ರಿಂದಲೇ ಅದು ಜಾರಿಗೆ ಬರಲಿದೆ.
ಬೆಂಗಳೂರಿನಲ್ಲಿ ಪ್ರಸ್ತುತ ಎರಡು ಕಿಲೋಮೀಟರ್ ಪ್ರಯಾಣಕ್ಕೆ ಕನಿಷ್ಠ 30 ರೂಪಾಯಿ ದರ ಇದೆ (ಇದನ್ನ ಯಾರೂ ಪಾಲಿಸೋದಿಲ್ಲ ಅನ್ನೋದು ಸರ್ಕಾರಕ್ಕೆ ಗೊತ್ತಿದ್ದರೂ ಜಾಣ ಕುರುಡು ತೋರಿಸುತ್ತಿದೆ). ಆದರೆ, ಈಗ ಈ ದರವನ್ನು 36 ರೂಪಾಯಿಗೆ ಏರಿಕೆ ಮಾಡಲಾಗಿದೆ. ಕನಿಷ್ಠ ಪ್ರಯಾಣ ದರ ಬಳಿಕ ಪ್ರತಿ ಕಿಮೀ.ಗೆ 15 ರೂ.ನಿಂದ 18 ರೂ.ಗೆ ಏರಿಕೆ ಮಾಡಲಾಗಿದೆ. ಇವೆಲ್ಲವೂ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
36 ರೂಪಾಯಿಯ ಕನಿಷ್ಠ ದರದ ಬಳಿಕ ಪ್ರತಿ ಕಿಲೋಮೀಟರ್‌ಗೆ 18 ರೂಪಾಯಿ ದರ ನಿಗದಿ ಮಾಡಲಾಗಿದೆ. ಆರಂಭಿಕ ಎರಡು ಕಿ.ಮೀಯ ಕನಿಷ್ಠ ದರವನ್ನು 6 ರೂಪಾಯಿ ಏರಿಕೆ ಮಾಡಲಾಗಿದೆ. 36 ರುಪಾಯಿಗೆ ಮೂರು ಜನ ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಬಹುದು. ರಾತ್ರಿ 10 ರಿಂದ ಬೆಳಿಗ್ಗೆ 5 ವರೆಗೆ ಒಂದೂವರೆ ಪಟ್ಟು (ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು ) ಚಾರ್ಜ್ ಮಾಡಬಹುದು ಎಂದು ತಿಳಿಸಲಾಗಿದೆ. ಅದರೊಂದಿಗೆ ಕಾಯುವಿಕೆ ದರ ಮೊದಲ ಐದು ನಿಮಿಷ ಉಚಿತವಾಗಿರಲಿದೆ.
ಪ್ರಯಾಣಿಕರ ಲಗೇಜು ದರ: ಮೊದಲ 20 ಕೆ.ಜಿ.ವರೆಗೆ ಲಗೇಜು ಉಚಿತ. 20 ಕೆ.ಜಿ.ಗಿಂತ ಹೆಚ್ಚು ಭಾರವಿದ್ದರೆ, ಪ್ರತಿ 20 ಕೆ.ಜಿ. ಅಥವಾ ಅದರ ಭಾಗಕ್ಕೆ ಹೆಚ್ಚುವರಿ ಶುಲ್ಕ ತೆರಬೇಕಾಗುತ್ತದೆ. ಗರಿಷ್ಠ 50 ಕೆ.ಜಿ.ವರೆಗೆ ಲಗೇಜು ಸಾಗಿಸಲು ಅನುಮತಿ ಇದೆ
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟಿರುವ ಈ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಪ್ರತಿಯೊಂದು ಆಟೋರಿಕ್ಷಾದಲ್ಲಿ ಪ್ರಮುಖ ಸ್ಥಾನದಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಪರಿಷ್ಕೃತ ದರಗಳು ಮೀಟರಿನಲ್ಲಿ ಪ್ರದರ್ಶನವಾಗುವಂತೆ ಮೀಟರ್‌ಗಳನ್ನು ಅಕ್ಟೋಬರ್ 31, 2025 (90 ದಿನಗಳ ಒಳಗೆ) ರೊಳಗಾಗಿ ಪುನಃ ಸತ್ಯಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ದರ ಪರಿಷ್ಕರಣೆಯಿಂದ ಬೆಂಗಳೂರಿನ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದ್ದು, ಆಗಸ್ಟ್ 1ರಿಂದಲೇ ಹೊಸ ದರಗಳು ಜಾರಿಗೆ ಬರಲಿವೆ.