ಸೆಪ್ಟೆಂಬರ್ ಅಂತ್ಯದಿಂದ ಓಲಾ, ಉಬರ್‌ಗಳಲ್ಲೂ BMTC ಟಿಕೆಟ್ ಬುಕಿಂಗ್ ಹಾಗೂ ಲೈವ್ ಟ್ರ್ಯಾಕಿಂಗ್ ಲಭ್ಯ

Published : Sep 09, 2026, 07:55 PM IST
BMTC

ಸಾರಾಂಶ

ಬೆಂಗಳೂರಿನ ಪ್ರಯಾಣಿಕರು ಇನ್ನು ಮುಂದೆ ಓಲಾ, ಉಬರ್‌ನಂತಹ ಖಾಸಗಿ ಆ್ಯಪ್‌ಗಳ ಮೂಲಕವೇ ಬಿಎಂಟಿಸಿ ಬಸ್‌ಗಳ ಲೈವ್ ಲೋಕೇಶನ್ ಟ್ರ್ಯಾಕ್ ಮಾಡಿ ಟಿಕೆಟ್ ಬುಕ್ ಮಾಡಬಹುದು. ಈ ಸೌಲಭ್ಯ ಸೆಪ್ಟೆಂಬರ್ ಅಂತ್ಯದೊಳಗೆ ಲಭ್ಯವಾಗಲಿದ್ದು, ಜೊತೆಗೆ 'ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0' ಕೂಡಾ ಬಿಡುಗಡೆಯಾಗಲಿದೆ.

ಬೆಂಗಳೂರು (ಸೆ.9): ನಗರದ ಪ್ರಯಾಣಿಕರಿಗೆ ಬಿಎಂಟಿಸಿ (BMTC) ಭಾರಿ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ಖಾಸಗಿ ರೈಡ್-ಹೇಲಿಂಗ್ ಆ್ಯಪ್‌ಗಳಾದ ಓಲಾ, ಉಬರ್ ಮುಂತಾದವುಗಳ ಮೂಲಕವೇ ಬಿಎಂಟಿಸಿ ಬಸ್‌ಗಳ ಲೈವ್ ಲೋಕೇಶನ್‌ ಟ್ರ್ಯಾಕ್ ಮಾಡಲು ಹಾಗೂ ಟಿಕೆಟ್ ಬುಕ್ ಮಾಡಲು ಅವಕಾಶ ಸಿಗಲಿದೆ. ಈ ಸೇವೆಯು ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ಜೊತೆಗೆ, ಬಿಎಂಟಿಸಿ ತನ್ನ ಸ್ವಂತ ಮೊಬೈಲ್ ಅಪ್ಲಿಕೇಶನ್ ಅನ್ನು ಮೇಲ್ದರ್ಜೆಗೇರಿಸುತ್ತಿದ್ದು, 'ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0' (Namma BMTC Mobile App 2.0) ಅನ್ನು ಮುಂದಿನ ವಾರದ ಅಂತ್ಯದೊಳಗೆ ಲೋಕಾರ್ಪಣೆಗೊಳಿಸಲಿದೆ.

ಸಾಮಾನ್ಯ ಒಪ್ಪಂದ ಹಾಗೂ ಉಚಿತ ಮಾಹಿತಿ ಹಂಚಿಕೆ

ಈ ಕುರಿತು ಮಾಹಿತಿ ನೀಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ (MD) ರಘುನಂದನ್ ಮೂರ್ತಿ, ನಾವು ಖಾಸಗಿ ರೈಡ್ ಅಗ್ರಿಗೇಟರ್‌ಗಳ ಜೊತೆ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಒಂದು ಸಾಮಾನ್ಯ ಮಾನದಂಡದ ಒಪ್ಪಂದವನ್ನು (Standard Agreement) ಜಾರಿಗೆ ತರಲಿದ್ದೇವೆ. ಈ ನಿಯಮಗಳಿಗೆ ಬದ್ಧರಾಗುವ ಯಾವುದೇ ಕಂಪನಿಯು ನಮ್ಮ ಡೇಟಾವನ್ನು ಬಳಸಿಕೊಳ್ಳಬಹುದು. ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗದಂತೆ ಈ ಸೌಲಭ್ಯ ಒದಗಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.

ಅಪ್‌ಗ್ರೇಡ್ ಆಗಲಿರುವ 'ನಮ್ಮ ಬಿಎಂಟಿಸಿ ಆ್ಯಪ್ 2.0' ಕುರಿತು ಮಾತನಾಡಿ, ಪ್ರಯಾಣಿಕರು ಈ ಹಿಂದೆ ನೀಡಿದ್ದ ದೂರು ಹಾಗೂ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದ್ದು, ಹೊಸ ಫೀಚರ್‌ಗಳನ್ನು ಸೇರಿಸಲಾಗಿದೆ. ಬಿಎಂಟಿಸಿ ನೆಟ್‌ವರ್ಕ್‌ನಲ್ಲಿ ಸಂಚರಿಸುವ ಪ್ರತಿಯೊಂದು ಬಸ್‌ನ ಲೈವ್ ಲೋಕೇಶನ್ ಸಹ ಇನ್ಮುಂದೆ ಆ್ಯಪ್‌ನಲ್ಲಿ ನಿಖರವಾಗಿ ಸಿಗಲಿದೆ ಎಂದರು. ಪ್ರಸ್ತುತ ಬಿಎಂಟಿಸಿ 1,771 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಒಟ್ಟು 6,938 ಬಸ್‌ಗಳನ್ನು ಹೊಂದಿದ್ದು, ಪ್ರತಿದಿನ ಸುಮಾರು 6,200 ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ.

ಸಾರಿಗೆ ಸಚಿವ ಬೈರತಿ ಸುರೇಶ್ ಮಹತ್ವದ ನಿರ್ದೇಶನ

ವಿಧಾನಸೌಧದಲ್ಲಿ ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಸಾರಿಗೆ ಸಚಿವ ಬೈರತಿ ಸುರೇಶ್, ಖಾಸಗಿ ಆ್ಯಪ್‌ಗಳ ಜೊತೆ ಬಿಎಂಟಿಸಿ ಡೇಟಾ ಹಂಚಿಕೊಳ್ಳುವುದರಿಂದ ಕ್ಯಾಬ್ ಅಥವಾ ಆಟೋಗಳಿಂದ ಇಳಿಯುವ ಪ್ರಯಾಣಿಕರಿಗೆ ಮುಂದಿನ ಪ್ರಯಾಣಕ್ಕಾಗಿ ಬಸ್‌ಗಳ ಸಮಯ ಮತ್ತು ಮಾರ್ಗದ ಮಾಹಿತಿ ಪಡೆಯಲು ಸುಲಭವಾಗುತ್ತದೆ ಎಂದರು.

200 ಮಿನಿ ಡೀಸೆಲ್ ಬಸ್‌ಗಳ ಖರೀದಿ

ಮೆಟ್ರೋ ಫೀಡರ್ ಹಾಗೂ ಸಣ್ಣ ರಸ್ತೆಗಳ ಮಾರ್ಗಗಳಿಗಾಗಿ 200 ಹೊಸ ಡೀಸೆಲ್ ಬಸ್‌ಗಳನ್ನು (ಪ್ರತಿಯೊಂದೂ 7 ಮೀಟರ್ ಉದ್ದ) ಖರೀದಿಸಲು ಬಿಎಂಟಿಸಿ ಯೋಜನೆ ರೂಪಿಸಿದೆ. "ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಕಿರಿದಾದ ರಸ್ತೆಗಳಲ್ಲಿ ಸುಲಭವಾಗಿ ಸಂಚರಿಸಲು ಈ 7 ಮೀಟರ್ ಬಸ್‌ಗಳು ಹೆಚ್ಚು ಸೂಕ್ತವಾಗಿವೆ. ಸದ್ಯ ನಾವು 9 ಮತ್ತು 12 ಮೀಟರ್ ಉದ್ದದ 255 ಬಸ್‌ಗಳನ್ನು ಮೆಟ್ರೋ ಫೀಡರ್ ಆಗಿ ಓಡಿಸುತ್ತಿದ್ದೇವೆ" ಎಂದು ಮೂರ್ತಿ ತಿಳಿಸಿದರು.

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ಒಟ್ಟು 1,000 ಬಸ್‌ಗಳನ್ನು ಖರೀದಿಸುವ ಬಜೆಟ್ ಘೋಷಣೆಯ ಭಾಗವಾಗಿ ಈ 200 ಬಸ್‌ಗಳನ್ನು ಖರೀದಿಸಲಾಗುತ್ತಿದೆ. ಟೆಂಡರ್ ಕರೆಯಲು ಸರ್ಕಾರದ ಅನುಮೋದನೆಗೆ ಕಾಯಲಾಗುತ್ತಿದ್ದು, ಮುಂದಿನ 6 ತಿಂಗಳೊಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಬರಲಿರುವ 'ಪಿಂಕ್ ಲೈನ್' ನ 6 ನಿಲ್ದಾಣಗಳು ಸೇರಿದಂತೆ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೌಲಭ್ಯ ವಿಸ್ತರಿಸಲಾಗುವುದು. ಬಿಎಂಆರ್‌ಸಿಎಲ್ ಹಾಗೂ ಸಂಚಾರ ಪೊಲೀಸರ ಜೊತೆಗೂಡಿ ಪಿಂಕ್, ಗ್ರೀನ್ ಮತ್ತು ಯೆಲ್ಲೋ ಲೈನ್‌ಗಳಿಗೆ ಸೂಕ್ತ ಫೀಡರ್ ಮಾರ್ಗ ಗುರುತಿಸಲು ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ.

ಎಸಿ ಬಸ್‌ಗಳ ಸಂಖ್ಯೆ ಹೆಚ್ಚಳ ಹಾಗೂ ಆದಾಯ ಸೋರಿಕೆ ತಡೆಗೆ ಸೂಚನೆ

ಪಿಎಂ ಇ-ಡ್ರೈವ್ (PM E-Drive) ಯೋಜನೆಯಡಿ ಖರೀದಿಸಲಾಗುತ್ತಿರುವ 4,500 ಎಲೆಕ್ಟ್ರಿಕ್ ಬಸ್‌ಗಳ ಪೈಕಿ, ಎಲ್ಲಾ ಮೆಟ್ರೋ ನಿಲ್ದಾಣಗಳ 5 ಕಿ.ಮೀ ವ್ಯಾಪ್ತಿಯಲ್ಲಿ 200 ಮಿನಿ ಎಸಿ ಇ-ಬಸ್‌ಗಳನ್ನು ಕಾರ್ಯಾಚರಣೆಗೊಳಿಸುವಂತೆ ಸಚಿವರು ಸೂಚಿಸಿದರು.

ಅಲ್ಲದೆ, ತಂತ್ರಜ್ಞಾನ ಕಂಪನಿಗಳು/ಐಟಿ ಸಂಸ್ಥೆಗಳ ನೌಕರರು ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಪ್ರೇರೇಪಿಸುವಂತೆ, ಆ ಸಂಸ್ಥೆಗಳಿಗೆ ಎಸಿ ಬಸ್ ಸೇವೆಗಳನ್ನು ಹೆಚ್ಚಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಕುರಿತು ಐಟಿ ಕಂಪನಿಗಳೊಂದಿಗೆ ಮಾತುಕತೆ ನಡೆಸುವಂತೆ ತಿಳಿಸಲಾಯಿತು. ಸಭೆಯಲ್ಲಿ ಬಿಎಂಟಿಸಿ ಸೇರಿದಂತೆ ಎಲ್ಲಾ ಸಾರಿಗೆ ನಿಗಮಗಳಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿತಗೊಳಿಸಿ, ಆದಾಯ ಸೋರಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.

PREV
Read more Articles on
click me!

Recommended Stories

ನೈಸ್ ರಸ್ತೆಗೆ ಪರ್ಯಾಯವಾಗಿ ಬಿಡಿಎಯಿಂದ 'PRR-2' ಯೋಜನೆಗೆ ಮರುಜೀವ: 1,126 ಭೂಮಾಲೀಕರಿಗೆ ಆಸ್ತಿ ಕಳೆದುಕೊಳ್ಳುವ ಭೀತಿ!
Belagavi: ಸಾಹುಕಾರ್ ಕುಟುಂಬಕ್ಕೆ ಆಫ್ರಿಕಾ ಲಿಂಕ್: ಕೊನೆಗೂ ಇಡಿ ದಾಖಲಿಸಿದ ಆ ಬಿಗ್ ಕೇಸ್ ಯಾವುದು? ಬಯಲಾಗುತ್ತಾ ಅಸಲಿ ಸತ್ಯ?