
ಬೆಂಗಳೂರು (ನ.25): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಗಿನ ಆಸ್ಪತ್ರೆಯಲ್ಲಿ ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಅವಕಾಶ ಕೋರಿ ಆರೋಪಿ ದರ್ಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು 59ನೇ ಸಿಸಿಹೆಚ್ (CCH) ಕೋರ್ಟ್ ಸಂಜೆ 5 ಗಂಟೆಗೆ ಮುಂದೂಡಿದೆ.
ಬೆನ್ನುನೋವಿನ ಚಿಕಿತ್ಸೆಗೆ ಹೊರಗಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಕೋರಿರುವ ದರ್ಶನ್, ಬಿಜಿಎಸ್ (BGS) ಅಥವಾ ಹಾಸ್ಮಟ್ (Hosmat) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡುವಂತೆ ಅರ್ಜಿಯಲ್ಲಿ ಕೋರಿದ್ದಾರೆ.
ವಿಚಾರಣೆ ವೇಳೆ ಆರೋಪಿ ದರ್ಶನ್ ಅವರ ಆರೋಗ್ಯದ ಕುರಿತ ವರದಿಯನ್ನು ಜೈಲಾಧಿಕಾರಿಗಳು ಇನ್ನೂ ಸಲ್ಲಿಸಿಲ್ಲ ಎಂಬ ಅಂಶ ಗಮನಕ್ಕೆ ಬಂದಿದೆ. ಕೋರ್ಟ್‌ಗೆ ಇಮೇಲ್ ಮೂಲಕ ಜೈಲಿನ ವರದಿ ಬರುವುದಾಗಿ ವಿಶೇಷ ಸರ್ಕಾರಿ ಅಭಿಯೋಜಕರು (SPP) ತಿಳಿಸಿದ್ದಾರೆ. ಆದರೆ, ಯಾವುದೇ ವರದಿ ಬಂದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದು, ವರದಿ ಬಂದಲ್ಲಿ ಸಂಜೆ 5 ಗಂಟೆಗೆ ವಿಚಾರಣೆ ನಡೆಸುವುದಾಗಿ ತಿಳಿಸಿ ಕಲಾಪವನ್ನು ಮುಂದೂಡಿದ್ದಾರೆ.