ನಿನ್ನೆ ನಮ್ಮ ಮೆಟ್ರೋದಲ್ಲಿ ಎಂದಿಗಿಂತ ಅಧಿಕ ಸಂಖ್ಯೆಯಲ್ಲಿ ಜನ ಸಂಚಾರ ಮಾಡಿದರು. ಒಂದೇ ದಿನ ಬರೋಬ್ಬರಿ 5.74 ಲಕ್ಷ ಜನ ಮೆಟ್ರೋದಲ್ಲಿ ಸಂಚಾರ ಮಾಡಿದ್ದು ಇತಿಹಾಸ ಸೃಷ್ಟಿಯಾಗಿದೆ.
ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಿಎಂಟಿಸಿ ರಜತ ಮಹೋತ್ಸವ ಹಿನ್ನೆಲೆ ಮೆಟ್ರೋದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚಾರ ಮಾಡಿದ್ರು. ಒಂದೆಡೆ ಬಿಎಂಟಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ರೆ ಇತ್ತ ನಮ್ಮ ಮೆಟ್ರೋದಲ್ಲಿ ಎಂದಿಗಿಂತ ಅಧಿಕ ಸಂಖ್ಯೆಯಲ್ಲಿ ಜನ ಸಂಚಾರ ಮಾಡಿದರು. ಒಂದೇ ದಿನ ಬರೋಬ್ಬರಿ 5.74 ಲಕ್ಷ ಜನ ಮೆಟ್ರೋದಲ್ಲಿ ಸಂಚಾರ ಮಾಡಿದ್ದು ಇತಿಹಾಸ ಸೃಷ್ಟಿಯಾಗಿದೆ. ಮಾಮೂಲಿ ದಿನದಲ್ಲಿ ಮೂರೂವರೆ ಲಕ್ಷ ಜನ ಪ್ರಯಾಣ ಮಾಡ್ತಾರೆ. ಆದ್ರೆ ನಿನ್ನೆ ರಜಾದಿನವಾದ್ರೂ ಕೂಡ ಲಾಲ್ಬಾಗ್, ಕಬ್ಬನ ಪಾರ್ಕ್, ವಿಧಾನಸೌಧ ಸೇರಿದಂತೆ ವಿವಿಧ ಕಡೆಗಳಲ್ಲಿ ಅಮೃತ ಮಹೋತ್ಸವ ಹಿನ್ನಲೆ ಅಲಂಕಾರ ಮಾಡಿರುವ ವಿದ್ಯುತ್ ದೀಪಾಲಂಕಾರ ವೀಕ್ಷಿಸಲು ಜನ ಮೆಟ್ರೋ ಪ್ರಯಾಣ ಬೆಳೆಸಿದ್ದಾರೆ.
ಇನ್ನು ನಿನ್ನೆ ನಡೆದ ಕಾಂಗ್ರೆಸ್ ನಡಿಗೆ ಪಾದಯಾತ್ರೆಗೂ ನಮ್ಮ ಮೆಟ್ರೋದಿಂದ ಟಿಕೆಟ್ ಬುಕಿಂಗ್ ಮಾಡಲಾಗಿತ್ತು. ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ನಡಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಕಾರ್ಯಕರ್ತರ ಅನುಕೂಲಕ್ಕಾಗಿ ಕೆಪಿಸಿಸಿ bmrcl ನಿಂದ ಸುಮಾರು 80 ಸಾವಿರ ಟಿಕೆಟ್ ಖರೀದಿ ಮಾಡಿತ್ತು. ಒಂದು ಟಿಕೆಟ್‌ಗೆ 30 ರೂಪಾಯಿಯಂತೆ ಕಾಂಗ್ರೆಸ್ 80 ಸಾವಿರ ಪೇಪರ್ ಟಿಕೆಟ್ ಖರೀದಿ ಮಾಡಿತ್ತು. ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೆಂಗೇರಿಯಿಂದ ಮೆಟ್ರೋ ಮೂಲಕ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ರು. ಇತ್ತ ನಾಗಸಂದ್ರ, ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಮೆಟ್ರೋದಲ್ಲಿ ಸಂಚಾರ ಮಾಡಿದರು.
ಪ್ರಯಾಣಿಕರ ಸಂಖ್ಯೆಯಲ್ಲಿ ಇತಿಹಾಸ ಸೃಷ್ಟಿಸಿದ ನಮ್ಮ ಮೆಟ್ರೋ
ಕೋವಿಡ್ ಗಿಂತ ಮುಂಚೆ 6.1 ಲಕ್ಷ ಜನ ಸಂಚಾರ ಮಾಡಿದ್ದರು. ಆದ್ರೆ ಅದಾದ ಬಳಿಕ ನಿನ್ನೆ ಮೊದಲ ಬಾರಿ 6.30 ಲಕ್ಷ ಜನ ಮೆಟ್ರೋ ಪ್ರಯಾಣ ಮಾಡಿದ್ದು ಇತಿಹಾಸ ಸೃಷ್ಟಿಸಿದೆ ಅಂತಿದ್ದಾರೆ ಮೆಟ್ರೋ ಎಂ.ಡಿ ಅಂಜುಂ ಪರ್ವೇಜ್. ದಿನದ ಪಾಸ್ ಇದೇ ಮೊದಲ ಬಾರಿ 500ಕ್ಕೂ ಹೆಚ್ಚು ಮಾರಾಟವಾಗಿದೆ. ರಜಾದಿನವಾದ್ದರಿಂದ ಇಷ್ಟೊಂದು ಸಂಖ್ಯೆಯಲ್ಲಿ ಪ್ರಯಾಣಿಕರು ಮೆಟ್ರೋ ಅವಲಂಬಿಸ್ತಾರೆ ಅನ್ನೋ ನಿರೀಕ್ಷೆ ಇರಲಿಲ್ಲ. ಕಾಂಗ್ರೆಸ್ ಖರೀದಿ ಮಾಡಿದ ಟಿಕೆಟ್ ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಟಿಕೆಟ್ ಪಡೆದು ಪ್ರಯಾಣ ಮಾಡಿದ್ದಾರೆ. ಒಟ್ಟಾರೆಯಾಗಿ ಮೆಟ್ರೋ ನಿಗಮಕ್ಕೆ 1.67 ಕೋಟಿ ರೂಪಾಯಿ ಮೊದಲ ಬಾರಿ ಕಲೆಕ್ಷನ್ ಆಗಿದೆ. ಕೋವಿಡ್ ನಿಂದ ಕೊಂಚ ಆರ್ಥಿಕ ಸಂಕಷ್ಟಕ್ಕೆ ಹೋಗಿದ್ದ bmrcl ಈಗ ಯಥಾಸ್ಥಿತಿಯತ್ತ ಮರಳುತ್ತಿದೆ ಎಂದರು.