ಈದ್ಗಾ ಮೈದಾನದಲ್ಲಿ ಧಾರ್ಮಿಕ ಆಚರಣೆಗಿಲ್ಲ ಅವಕಾಶ, ಜಮೀರ್ ಮಾತಿಗೆ ಹಿಂದೂ ಸಂಘಟನೆ ಆಕ್ರೋಶ!

By Suvarna NewsFirst Published Aug 8, 2022, 1:49 PM IST
Highlights

ಈದ್ಗಾ ಮೈದಾನ ತಲೆನೋವಾಗಿ ಶಾಸಕ ಜಮೀರ್ ಅಹಮ್ಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಮೈದಾನದಲ್ಲಿ ಗಣೇಶೋತ್ಸವ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆಗೆ ಅನುಮತಿ ಇಲ್ಲ ಎಂದಿದ್ದಾರೆ.
 

ಬೆಂಗಳೂರು (ಆ8);  ಈದ್ಗಾ ಮೈದಾನ ವಿವಾದ ದಿನದಿಂದ ದಿನಕ್ಕೆ ತಲೆನೋವು ಹೆಚ್ಚಿಸುತ್ತಿದೆ. ಬಿಬಿಎಂಪಿ ಮೇಲೆ ತೂಗುಗತ್ತಿಯಂತೆ ತೂಗುತ್ತಿದ್ದ ಈದ್ಗಾ ಮೈದಾನ ವಿವಾದ ಈಗ ಕಂದಾಯವಿಲಾಖೆ ಮುಂದಿದೆ. ಇದು ವಕ್ಫ್ ಬೋರ್ಡ್ ಹಾಗೂ ಬಿಬಿಎಂಪಿ ಆಸ್ತಿಯಲ್ಲ ಎಂದು ಬಿಬಿಎಂಪಿ ಟ್ವಿಸ್ಟ್ ನೀಡಿತ್ತು. ಆದರೂ ಚಾಮರಾಜಪೇಟೆ ಆಟದ ಮೈದಾನ ಬಗೆ ಹರಿಯುವ ಲಕ್ಷಣಗಳು ಕಾಣುತ್ತಿಲ್ಲ.  ಒಂದೆಡೆ ವಿವಾದ ಜೋರಾಗುತ್ತಿದ್ದಂತೆ ಇತ್ತ ಶಾಸಕ ಜಮೀರ್ ಅಹಮ್ಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಮಾತ್ರ ಅನುಮತಿ. ಆದರೆ ಈ ಆಟದ ಮೈದಾನದಲ್ಲಿ ಗಣೇಶೋತ್ಸವ ಸೇರಿದಂತೆ ಯಾವುದೇ ಧಾರ್ಮಿಕ ಆಚರಣೆಗೆ ಅನುಮತಿ ಇಲ್ಲ ಎಂದು ಜಮೀರ್ ಹೇಳಿದ್ದಾರೆ.  ಇದೀಗ ಮತ್ತೊಂದು ವಿವಾದ ಸೃಷ್ಟಿಸಿದೆ. 

ಕಳೆದ ಮೂರು ತಿಂಗಳಿಂದ ಭಾರಿ ವಿವಾದಕ್ಕೆ ಕಾರಣವಾಗಿದ್ದ ಚಾಮರಾಜಪೇಟೆ ಈದ್ಗಾ ಮೈದಾನ ವಿಚಾರ ಅಂತ್ಯ ಕಂಡಿದೆ ಅನ್ನುವಷ್ಟರಲ್ಲಿ‌ಮತ್ತೊಂದು ವಿವಾದ ಈದ್ದಾ ಮೈದಾನಕ್ಕೆ ಸುತ್ತಿಕೊಂಡಿದೆ . ಮೊನ್ನೆಯಷ್ಟೆ ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್ ಸರಿಯಾದ ದಾಖಲೆ ಯಾರ ಬಳಿಯೂ ಇಲ್ಲದಿರುವ ಹಿನ್ನಲೆ ಸರ್ಕಾರದ ಸ್ವತ್ತು ಎಂದು ಘೋಷಣೆ ಮಾಡಿತ್ತು. ಹೀಗಾಗಿ ಹಲವು ದಿನಗಳ ವಿವಾದಕ್ಕೆ ತೆರೆ ಬಿತ್ತು ಅನ್ನುವಷ್ಟರಲ್ಲಿ ಶಾಸಕ ಜಮೀರ್ ಅಹಮದ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ರಾಜ್ಯದಲ್ಲಿ ಮಸೀದಿ ಮಂದಿರ ವಿವಾದಗಳ ಬೆನ್ನಲ್ಲೆ ಈದ್ಗಾ ಮೈದಾನ ವಿಚಾರ ಇನ್ನಷ್ಟು ತಾರಕಕ್ಕೇರಿದೆ. ಇಂದು ಶಾಸಕ ಜಮೀರ್ ಅಹಮದ್ ಖಾನ್ ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ದಿಢೀರ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಈದ್ಗಾ ಮೈದಾನ: ಬಿಬಿಎಂಪಿ ಸ್ವತ್ತು ಎಂದು ಘೋಷಿಸದೇ ಕಂದಾಯ ಇಲಾಖೆಗೆ ವರ್ಗಾಯಿಸಿದ್ದೇಕೆ.?

 ಕಳೆದ ಮೂರು ತಿಂಗಳಿಂದ ಚಾಮರಜಾಪೇಟೆ ನಾಗರಿಕರ ಒಕ್ಕೂಟ ಹಾಗೂ ಹಿಂದೂಪರ ಸಂಘಟನೆಗಳು ಹಿಂದೂ ಧಾರ್ಮಿಕ ಹಬ್ಬ, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಸಭೆ ಸಮಾರಂಭಗಳಿಗೆ ಅನುಮತಿ ನೀಡುವಂತೆ ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ ಸರಿಯಾದ ದಾಖಲಾತಿಗಳು ಇಲ್ಲದ ಕಾರಣ ಬಿಬಿಎಂಪಿ ಕಂದಾಯ ಇಲಾಖೆಗೆ ವರ್ಗಾವಣೆ ಬೆನ್ನಲ್ಲೆ ದಿಢೀರ್ ಅಂತಾ ಮೈದಾನದಲ್ಲಿ ಜಮೀರ್ ಕಾಣಿಸಿಕೊಂಡಿದ್ದಾರೆ.  ಆಗಸ್ಟ್ 15 ರಂದು ಮೈದಾನದಲ್ಲಿ ಧ್ವಜಾರೋಹಣ ಮಾಡುವ ನಿಟ್ಟಿನಲ್ಲಿ ಹೇಗೆ ಸಿದ್ದತೆ ಮಾಡಿಕೊಳ್ಳಬೇಕು ರೂಪುರೇಷೆಗಳೇನು ಎಂಬುದಾಗಿ ಮೈದಾನದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಜಮೀರ್ ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ ಮಾತ್ರ ಆಚರಣೆ ಮಾಡಲು ಅವಕಾಶ. ಗಣೇಶೋತ್ಸವ ಸೇರಿದಂತೆ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸಲು ಅನುಮತಿ ಇಲ್ಲ ಎಂಬ ಹೇಳಿಕೆ ಮೂಲಕ ವಿವಾದಕ್ಕೆ ಸೃಷ್ಟಿಸಿದ್ದಾರೆ. 

ಜಮೀರ್ ಹೇಳಿಕೆಯ ಬೆನ್ನಲ್ಲೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಹಾಗೂ ಹಿಂದೂಪರ ಸಂಘಟನೆ ಕೆಂಡಕಾರಿದೆ. ನಿನ್ನೆಯಷ್ಟೆ ಸಂಭ್ರಮಾಚರಣೆ ಮಾಡಿದ್ದ ನಾಗರಿಕರ ಒಕ್ಕೂಟಕ್ಕೆ ಜಮೀರ್ ಹೇಳಿಕೆ ಕಣ್ಣು ಕೆಂಪಗಾಗಿಸಿದೆ. ಗಣೇಶೋತ್ಸವಕ್ಕೆ ಅನುಮತಿ ನೀಡಲು ಇವರು ಯಾರು? ಈ ಬಾರಿ ನಾವು ಅದ್ದೂರಿಯಾಗಿ ಗಣೇಶೋತ್ಸವನ್ನು ಮಾಡೇ ಮಾಡುತ್ತೇವೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.  ಅಲ್ಲದೆ ಜಮೀರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈದ್ಗಾ ವಿವಾದ: ಮೈದಾನದಲ್ಲಿರುವ ಈದ್ಗಾ ವಾಲ್ ತೆರವಿಗೆ ಹಿಂದೂ ಸಂಘಟನೆಗಳ ಆಗ್ರಹ

ಹಲವು ದಿನಗಳಿಂದ ಒಂದಲ್ಲ ಒಂದು ವಿವಾದವನ್ನು ಸೃಷ್ಟಿ ಮಾಡಿ ಜನರ ನೆಮ್ಮದಿ ಕೆಡಿಸಿದ್ದ ಮೈದಾನ ಈಗ ಮತ್ತೊಂದ ಸ್ವರೂಪ ಪಡೆದಿದೆ. ಬಿಬಿಎಂಪಿ ಹೆಗಲ ಮೇಲಿದ್ದ ಜವಾಬ್ದಾರಿ ಈಗ ಸರ್ಕಾರದ ಮೇಲಿದೆ. ಇವೆಲ್ಲದರ ಮಧ್ಯೆ ಮೈದಾನದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸುತ್ತೇವೆ ಅಂತಾ ಹೇಳ್ತಿದ್ದಾರೆ. ಇತ್ತ ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ ಎಂಬ ಜಮೀರ್ ಹೇಳಿಕೆ ಒಂದಷ್ಟು ಗೊಂದಲ ಸೃಷ್ಟಿ ಮಾಡಿದೆ. 

ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್

click me!