
ಬೆಂಗಳೂರು (ನ.17): ಜಾಗತಿಕ ಏರೋಸ್ಪೇಸ್ ದಿಗ್ಗಜ ಕಾಲಿನ್ಸ್ ಏರೋಸ್ಪೇಸ್ (Collins Aerospace) ಸಂಸ್ಥೆಯು ಭಾರತದ ತನ್ನ ಮೊದಲ ಪ್ರೊಪೆಲ್ಲರ್ ದುರಸ್ತಿ ಮತ್ತು ನಿರ್ವಹಣಾ ಕೇಂದ್ರವನ್ನು (Maintenance, Repair and Overhaul - MRO) ಬೆಂಗಳೂರಿನ ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ನಲ್ಲಿ ನಿರ್ಮಿಸುತ್ತಿದೆ. ಮಂಗಳವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಈ ಮಹತ್ವಾಕಾಂಕ್ಷಿ ಯೋಜನೆಗೆ ಭೂಮಿಪೂಜೆ ನೆರವೇರಿಸಿದ್ದು, ಇದರಿಂದ 2,100 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ.
ರಾಜ್ಯ ಸರ್ಕಾರ ಮಂಜೂರು ಮಾಡಿರುವ 26 ಎಕರೆ ವಿಶಾಲ ಪ್ರದೇಶದಲ್ಲಿ ಈ ಅತ್ಯಾಧುನಿಕ ಘಟಕ ತಲೆ ಎತ್ತಲಿದೆ. ಜಾಗತಿಕ ಮೂಲ ಉಪಕರಣ ತಯಾರಕ ಸಂಸ್ಥೆಯೊಂದು (OEM) ಭಾರತದಲ್ಲಿ ಸ್ಥಾಪಿಸುತ್ತಿರುವ ಇಂತಹ ಮೊದಲ ಘಟಕ ಇದಾಗಿದ್ದು, ಜಾಗತಿಕ ಏರೋಸ್ಪೇಸ್ ಉದ್ಯಮದಲ್ಲಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.
ಸಚಿವ ಎಂ.ಬಿ. ಪಾಟೀಲ್ ಅವರು ಈ ಯೋಜನೆಯ ತಾಂತ್ರಿಕ ಮಹತ್ವವನ್ನು ವಿವರಿಸಿದ್ದು, ಈ ಕೇಂದ್ರವು ನಾಗರಿಕ ಮತ್ತು ರಕ್ಷಣಾ ವಿಮಾನಯಾನ ಕ್ಷೇತ್ರಗಳಿಗೆ ದೊಡ್ಡ ಶಕ್ತಿ ನೀಡಲಿದೆ. ನಾಗರಿಕ ವಿಮಾನಗಳಾದ ATR 42 ಮತ್ತು ATR 72 ಹಾಗೂ ಭಾರತೀಯ ಸೇನೆಯ C295 ಮಿಲಿಟರಿ ವಿಮಾನಗಳಲ್ಲಿ ಬಳಸಲಾಗುವ ಅತ್ಯಾಧುನಿಕ 568F-ಕ್ಲಾಸ್ ಪ್ರೊಪೆಲ್ಲರ್ಗಳ ದುರಸ್ತಿ ಮತ್ತು ನಿರ್ವಹಣಾ ಸೇವೆಗಳನ್ನು ಈ ಘಟಕ ಒದಗಿಸಲಿದೆ.
ಏಷ್ಯಾ-ಪೆಸಿಫಿಕ್ ಮಾರುಕಟ್ಟೆಯಲ್ಲಿ ಕಾಲಿನ್ಸ್ ಏರೋಸ್ಪೇಸ್ ಅಸ್ತಿತ್ವವನ್ನು ಬಲಪಡಿಸುವುದರ ಜೊತೆಗೆ, ಕರ್ನಾಟಕದಿಂದ ರಫ್ತು ಹೆಚ್ಚಿಸಲು ಮತ್ತು ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ಏರೋಸ್ಪೇಸ್ ಪೂರೈಕೆ ಸರಪಳಿಯಲ್ಲಿ (Supply chain) ಭಾಗಿಯಾಗಲು ಇದು ನೆರವಾಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, 'ಭಾರತದ ಒಟ್ಟಾರೆ ಏರೋಸ್ಪೇಸ್ ವಲಯದಲ್ಲಿ ಕರ್ನಾಟಕವೊಂದೇ ಸುಮಾರು ಶೇ. 65ರಷ್ಟು ಪಾಲನ್ನು ಹೊಂದಿದೆ. ಕಳೆದ ಐದು ವರ್ಷಗಳಲ್ಲಿ ಕಾಲಿನ್ಸ್ ಏರೋಸ್ಪೇಸ್ ಭಾರತದಲ್ಲಿ 200 ಮಿಲಿಯನ್ ಅಮೆರಿಕನ್ ಡಾಲರ್ (USD 200 million) ಹೂಡಿಕೆ ಮಾಡಿದೆ. ಕಳೆದ ವರ್ಷ ನವೆಂಬರ್ನಲ್ಲಿ ದೇವನಹಳ್ಳಿಯಲ್ಲಿ ಕಂಪನಿಯ ಉತ್ಪಾದನಾ ಘಟಕವನ್ನು ಉದ್ಘಾಟಿಸಲಾಗಿತ್ತು ಎಂದು ಸ್ಮರಿಸಿದರು.
ಕರ್ನಾಟಕ ಸರ್ಕಾರವು ನೂತನ 'ಏರೋಸ್ಪೇಸ್ ಮತ್ತು ರಕ್ಷಣಾ ನೀತಿ' (Aerospace and Defence Policy) ಜಾರಿಗೆ ತಂದಿದ್ದು, 2031ರ ವೇಳೆಗೆ ₹60,000 ಕೋಟಿ ಬಂಡವಾಳ ಆಕರ್ಷಿಸುವ ಮತ್ತು 60,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. MRO ಮೂಲಸೌಕರ್ಯ, ಸಮಗ್ರ ವಿಮಾನ ತಯಾರಿಕಾ ವ್ಯವಸ್ಥೆ, ರಕ್ಷಣಾ ತಂತ್ರಜ್ಞಾನ ಮತ್ತು ನಾವೀನ್ಯತೆ ಸೇರಿದಂತೆ ಏಳು ಪ್ರಮುಖ ಕ್ಷೇತ್ರಗಳಿಗೆ ಈ ನೀತಿಯಲ್ಲಿ ಆದ್ಯತೆ ನೀಡಲಾಗಿದೆ.
ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಾದ 'ಉಡಾನ್' (UDAN) ಯೋಜನೆಗೆ ಪೂರಕವಾಗಿ ರಾಜ್ಯ ಸರ್ಕಾರವು ಪ್ರತ್ಯೇಕ 'ನಾಗರಿಕ ವಿಮಾನಯಾನ ನೀತಿ' (Civil Aviation Policy) ರೂಪಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದನ್ನು ಮಂಡಿಸಲಾಗುವುದು ಎಂದು ಸಚಿವರು ತಿಳಿಸಿದರು. ಮುಂದಿನ ವರ್ಷ ಏಪ್ರಿಲ್ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ (Global Investors’ Meet) ಮುನ್ನ, ಜಾಗತಿಕ OEM ಕಂಪನಿಗಳು, ಟಯರ್-1 ಕಂಪನಿಗಳು ಮತ್ತು ಸಣ್ಣ-ಮಧ್ಯಮ ಉದ್ಯಮಗಳನ್ನು ಒಂದೇ ವೇದಿಕೆಗೆ ತರುವ ವಿಶೇಷ ಸಮಾವೇಳನ ಆಯೋಜಿಸಲು ಸರ್ಕಾರ ಯೋಜಿಸಿದೆ.