
ಬೆಂಗಳೂರು: ಹೋಟೆಲ್‌ಗಳಲ್ಲಿ ಊಟ ಅಥವಾ ತಿಂಡಿ ಆರ್ಡರ್ ಮಾಡಿದಾಗ ಅದನ್ನು ಪ್ಯಾಕ್ ಮಾಡಿ ಕೊಡುವ ಕ್ಯಾರಿ ಬ್ಯಾಗ್‌ಗೂ ಹಣ ಪಡೆಯುವುದು ಸಾಮಾನ್ಯವಾಗಿದೆ. ಆದರೆ, ತನ್ನದೇ ಬ್ರ್ಯಾಂಡ್ ಹೆಸರು ಮತ್ತು ಲೋಗೋ ಇರುವ ಬ್ಯಾಗ್‌ಗೆ ಗ್ರಾಹಕರಿಂದ ಹಣ ವಸೂಲಿ ಮಾಡಿದ ಮೆಘನಾ ಫುಡ್ಸ್‌ಗೆ ಈಗ ಸಂಕಷ್ಟ ಎದುರಾಗಿದೆ. ಕೇವಲ ₹15ರ ಕ್ಯಾರಿ ಬ್ಯಾಗ್ ವಿಚಾರವಾಗಿ ಗ್ರಾಹಕ ಆಯೋಗವು ರೆಸ್ಟೋರೆಂಟ್‌ಗೆ ₹10,000 ದಂಡ ಹಾಗೂ ಪರಿಹಾರ ನೀಡುವಂತೆ ಆದೇಶಿಸಿದೆ.
ಬೆಂಗಳೂರಿನ ಗಿರಿನಗರ ನಿವಾಸಿ 25 ವರ್ಷದ ಪ್ರಣವ್ ಕೆ.ಎನ್. ಅವರು ಮೆಘನಾ ಫುಡ್ಸ್ ವಿರುದ್ಧ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರು ನಗರ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು, ರೆಸ್ಟೋರೆಂಟ್‌ನ ನಡೆ ಅನ್ಯಾಯದ ವ್ಯಾಪಾರ ಪದ್ಧತಿ (Unfair Trade Practice) ಮತ್ತು ಸೇವಾ ನ್ಯೂನತೆ ಎಂದು ತೀರ್ಪು ನೀಡಿದೆ.
2026ರ ಮೇ 8ರಂದು ಪ್ರಣವ್ ಅವರು ಜೊಮ್ಯಾಟೊ ಮೂಲಕ ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಮೆಘನಾ ಫುಡ್ಸ್‌ನಿಂದ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದರು. ಈ ಆರ್ಡರ್‌ನ ಬಿಲ್‌ನಲ್ಲಿ ಆಹಾರದ ಬೆಲೆಯ ಜೊತೆಗೆ ಪ್ರತ್ಯೇಕವಾಗಿ 'ರೆಸ್ಟೋರೆಂಟ್ ಪ್ಯಾಕೇಜಿಂಗ್ ಚಾರ್ಜ್' ಎಂದು ₹15 ವಿಧಿಸಲಾಗಿತ್ತು.
ಇದಕ್ಕೆ CGST ಮತ್ತು SGST ಸೇರಿ ಒಟ್ಟು ₹15.75 ಆಗಿತ್ತು. ಹೀಗಾಗಿ ರೆಸ್ಟೋರೆಂಟ್‌ನ ಬಿಲ್ ಮೊತ್ತ ₹451.50 ಆಗಿತ್ತು. ಇದಲ್ಲದೆ, ಜೊಮ್ಯಾಟೊ ಪ್ಲಾಟ್‌ಫಾರ್ಮ್ ಶುಲ್ಕವಾಗಿ ಪ್ರತ್ಯೇಕವಾಗಿ ₹17.58 ಪಾವತಿಸಿರುವುದಾಗಿಯೂ ಪ್ರಣವ್ ತಿಳಿಸಿದ್ದಾರೆ. ಆದರೆ, ಅವರಿಗೆ ಬಂದಿದ್ದ ಪಾರ್ಸೆಲ್‌ನ ಕ್ಯಾರಿ ಬ್ಯಾಗ್ ಮತ್ತು ಇತರ ಪ್ಯಾಕೇಜಿಂಗ್‌ಗಳ ಮೇಲೆ ಮೆಘನಾ ಫುಡ್ಸ್‌ನ ಹೆಸರು, ಲೋಗೋ ಹಾಗೂ ಬ್ರ್ಯಾಂಡ್ ಗುರುತು ಸ್ಪಷ್ಟವಾಗಿ ಮುದ್ರಿಸಲಾಗಿತ್ತು.
ಇದೇ ವಿಚಾರವನ್ನು ಪ್ರಶ್ನಿಸಿದ ಪ್ರಣವ್, ರೆಸ್ಟೋರೆಂಟ್ ತನ್ನದೇ ಬ್ರ್ಯಾಂಡ್ ಹೆಸರು ಮತ್ತು ಲೋಗೋ ಹೊಂದಿರುವ ಬ್ಯಾಗ್‌ಗೆ ಗ್ರಾಹಕರಿಂದ ಹಣ ಪಡೆಯುವುದು ಸರಿಯಲ್ಲ ಎಂದು ವಾದಿಸಿದ್ದರು. ಬ್ಯಾಗ್ ಕೇವಲ ಆಹಾರ ಸಾಗಿಸುವ ಪ್ಯಾಕೇಜಿಂಗ್ ಆಗಿರದೆ, ರೆಸ್ಟೋರೆಂಟ್‌ನ ಜಾಹೀರಾತು ಮಾಧ್ಯಮವಾಗಿಯೂ ಕೆಲಸ ಮಾಡುತ್ತದೆ. ಆ ಬ್ಯಾಗ್ ಹೊರಗೆ ಹೋದಾಗ ಇತರರಿಗೂ ರೆಸ್ಟೋರೆಂಟ್‌ನ ಹೆಸರು ಕಾಣಿಸುತ್ತದೆ. ಹೀಗಾಗಿ ಗ್ರಾಹಕರೇ ಹಣ ಕೊಟ್ಟು ರೆಸ್ಟೋರೆಂಟ್‌ಗೆ ಉಚಿತ ಪ್ರಚಾರ ಮಾಡಿಕೊಟ್ಟಂತಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ರೆಸ್ಟೋರೆಂಟ್‌ಗೆ ಒಂದೆಡೆ ಪ್ಯಾಕೇಜಿಂಗ್ ಹೆಸರಿನಲ್ಲಿ ಹಣ ಸಿಗುತ್ತದೆ. ಮತ್ತೊಂದೆಡೆ ಅದೇ ಬ್ಯಾಗ್ ಮೂಲಕ ಉಚಿತ ಬ್ರ್ಯಾಂಡ್ ಪ್ರಚಾರವೂ ದೊರೆಯುತ್ತದೆ. ಗ್ರಾಹಕರ ಮೇಲೆ ಜಾಹೀರಾತಿನ ವೆಚ್ಚವನ್ನು ಹೊರಿಸುವುದು ಅನ್ಯಾಯದ ವ್ಯಾಪಾರ ಪದ್ಧತಿ ಎಂಬುದು ಅವರ ವಾದವಾಗಿತ್ತು.
ಈ ಕುರಿತು ಪ್ರಣವ್ ಅವರು ಜೊಮ್ಯಾಟೊ ಮತ್ತು ಮೆಘನಾ ಫುಡ್ಸ್‌ಗೆ ಇಮೇಲ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ 2026ರ ಆಗಸ್ಟ್ 5ರಂದು ಕಾನೂನು ನೋಟಿಸ್ ಕೂಡ ಕಳುಹಿಸಿದ್ದರು. ಆದರೆ, ಯಾರಿಂದಲೂ ಉತ್ತರ ಬಂದಿರಲಿಲ್ಲ. ಹೀಗಾಗಿ ಆಗಸ್ಟ್ 27ರಂದು ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ₹15.75 ಮರುಪಾವತಿ, ಅನ್ಯಾಯದ ವ್ಯಾಪಾರ ಪದ್ಧತಿ ಮತ್ತು ಸೇವಾ ನ್ಯೂನತೆಗೆ ಪರಿಹಾರ, ಮಾನಸಿಕ ಹಿಂಸೆ ಹಾಗೂ ಕಿರುಕುಳಕ್ಕೆ ಪರಿಹಾರ, ಕಾನೂನು ವೆಚ್ಚ ಮತ್ತು ಬ್ರ್ಯಾಂಡ್ ಪ್ರಚಾರದ ಪ್ಯಾಕೇಜಿಂಗ್‌ಗೆ ಹಣ ಪಡೆಯುವುದನ್ನು ನಿಲ್ಲಿಸುವಂತೆ ಆದೇಶಿಸಬೇಕೆಂದು ಮನವಿ ಮಾಡಿದ್ದರು.
ಆಯೋಗದಿಂದ ನೋಟಿಸ್ ಜಾರಿಯಾದರೂ ಮೆಘನಾ ಫುಡ್ಸ್ ವಿಚಾರಣೆಗೆ ಹಾಜರಾಗಲಿಲ್ಲ. ತನ್ನ ಪರವಾಗಿ ಯಾವುದೇ ಉತ್ತರ ಅಥವಾ ದಾಖಲೆಗಳನ್ನೂ ಸಲ್ಲಿಸಲಿಲ್ಲ. ಹೀಗಾಗಿ ಆಯೋಗವು ರೆಸ್ಟೋರೆಂಟ್ ವಿರುದ್ಧ ಏಕಪಕ್ಷೀಯವಾಗಿ (Ex Parte) ವಿಚಾರಣೆ ಮುಂದುವರಿಸಿತು. ಜೊಮ್ಯಾಟೊಗೆ ಕಳುಹಿಸಿದ್ದ ನೋಟಿಸ್ ತಲುಪದ ಹಿನ್ನೆಲೆಯಲ್ಲಿ, ಅದರ ವಿರುದ್ಧದ ದೂರನ್ನು ಮುಂದುವರಿಸಲು ತಮಗೆ ಇಷ್ಟವಿಲ್ಲ ಎಂದು ಪ್ರಣವ್ ತಿಳಿಸಿದ್ದರು. ಹೀಗಾಗಿ ಜೊಮ್ಯಾಟೊ ವಿರುದ್ಧದ ದೂರನ್ನು ಕೈಬಿಡಲಾಯಿತು.
ಪ್ರಕರಣದ ದಾಖಲೆಗಳು, ಬಿಲ್, ಬ್ರ್ಯಾಂಡ್ ಲೋಗೋ ಹೊಂದಿರುವ ಬ್ಯಾಗ್‌ನ ಫೋಟೋಗಳು ಮತ್ತು ಕಾನೂನು ನೋಟಿಸ್ ಸೇರಿದಂತೆ ನಾಲ್ಕು ದಾಖಲೆಗಳನ್ನು ಆಯೋಗ ಪರಿಶೀಲಿಸಿತು. ಆಯೋಗದ ಅಧ್ಯಕ್ಷ ವಿಜಯಕುಮಾರ್ ಎಂ. ಪಾವಳೆ ಹಾಗೂ ಸದಸ್ಯರಾದ ಚಂದ್ರಶೇಖರ್ ಎಸ್. ನೂಲಾ ಮತ್ತು ಕೆ. ಅನಿತಾ ಶಿವಕುಮಾರ್ ಅವರನ್ನೊಳಗೊಂಡ ಪೀಠವು, ರೆಸ್ಟೋರೆಂಟ್ ನಿಜವಾಗಿಯೂ ಗ್ರಾಹಕರಿಗೆ ಪ್ಯಾಕೇಜಿಂಗ್ ಒದಗಿಸುವ ಉದ್ದೇಶ ಹೊಂದಿದ್ದರೆ ತನ್ನ ಹೆಸರು ಮತ್ತು ಲೋಗೋ ಇಲ್ಲದ ಸಾಮಾನ್ಯ ಬ್ಯಾಗ್ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ, ಇಂತಹ ಪದ್ಧತಿ ಇನ್ನು ಮುಂದೆ ಮುಂದುವರಿಯಬಾರದು ಎಂದು ಆಯೋಗ ಸ್ಪಷ್ಟಪಡಿಸಿತು. ಮೆಘನಾ ಫುಡ್ಸ್ ಗ್ರಾಹಕನಿಗೆ ಒಟ್ಟು ₹10,000 ಪಾವತಿಸಬೇಕು ಎಂದು ಆದೇಶಿಸಿದ್ದು, ಇದರಲ್ಲಿ ₹5,000 ದಂಡನಾತ್ಮಕ ಪರಿಹಾರ (Punitive Damages) ಸೇರಿದೆ.