ತಂದೆಯನ್ನು ಕಳೆದುಕೊಂಡ ಬೆಂಗಳೂರು ಉದ್ಯೋಗಿಗೆ ಧೈರ್ಯ ತುಂಬಿದ ಸಂಸ್ಥೆ: 4 ವಾರ ರಜೆ, ಚಿಕಿತ್ಸಾ ವೆಚ್ಚ ಭರಿಸಿ ಮಾನವೀಯತೆ!

Published : Aug 14, 2026, 01:09 PM ISTUpdated : Aug 14, 2026, 01:10 PM IST
Coimbatore company has earned praise for putting humanity before work

ಸಾರಾಂಶ

ತಂದೆಯನ್ನು ಕಳೆದುಕೊಂಡ ಉದ್ಯೋಗಿಗೆ ಕೊಯಮತ್ತೂರಿನ ಖಾಸಗಿ ಸಂಸ್ಥೆಯೊಂದು ಚಿಕಿತ್ಸಾ ವೆಚ್ಚ ಭರಿಸಿ, 4 ವಾರಗಳ ಸುದೀರ್ಘ ರಜೆ ನೀಡಿದೆ. ಸಂಸ್ಥೆಯ ಅಧ್ಯಕ್ಷರು ವೈಯಕ್ತಿಕವಾಗಿ ಸಾಂತ್ವನ ಹೇಳಿದ್ದು, ಈ ಮಾನವೀಯ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಬೆಂಗಳೂರು (ಆ.14): ಉದ್ಯೋಗಿ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದಾಗ, ಆಕೆಗೆ ಸಾಂತ್ವನ ಹೇಳಿ, ಚಿಕಿತ್ಸಾ ವೆಚ್ಚ ಭರಿಸುವುದರ ಜೊತೆಗೆ ದುಃಖದಿಂದ ಹೊರಬರಲು 4 ವಾರಗಳ ಸುದೀರ್ಘ ರಜೆ ನೀಡುವ ಮೂಲಕ ಕೊಯಮತ್ತೂರು ಮೂಲದ ಖಾಸಗಿ ಸಂಸ್ಥೆಯೊಂದು ಮಾನವೀಯತೆ ಮೆರೆದಿದೆ. ಸಂಸ್ಥೆಯ ಈ ಅದ್ಭುತ ಮಾನವೀಯ ನಡೆಗೆ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉದ್ಯೋಗಿಯ ಸಹೋದರ ಹಾಗೂ ಬೆಂಗಳೂರು ಮೂಲದ ಉದ್ಯಮಿ ವಿಬಿನ್ ಬಾಬುರಾಜನ್ ಎಂಬುವವರು ತಮ್ಮ ತಂಗಿ ಕೆಲಸ ಮಾಡುತ್ತಿರುವ ಸಂಸ್ಥೆಯ ಮಾನವೀಯ ನಡೆಯನ್ನು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ವಿಬಿನ್ ಬಾಬುರಾಜನ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಅವರ ತಂಗಿ ಕೊಯಮತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸುದೀರ್ಘ ಇತಿಹಾಸವಿರುವ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಅವರ ತಂದೆ ನಿಧನರಾದಾಗ ಸಂಸ್ಥೆಯು ಉದ್ಯೋಗಿಯ ತಂದೆ ನಿಧನರಾಗುವ ಮುನ್ನ ಅವರಿಗಾದ ಒಟ್ಟು ವೈದ್ಯಕೀಯ ವೆಚ್ಚದಲ್ಲಿ ಶೇ. 20ರಷ್ಟು ಭಾಗವನ್ನು ಕಂಪನಿಯೇ ಭರಿಸಿದೆ. ತಂದೆಯ ಅಗಲಿಕೆಯ ನೋವಿನಿಂದ ಚೇತರಿಸಿಕೊಳ್ಳಲು ಹಾಗೂ ಕುಟುಂಬದ ಜೊತೆ ಇರಲು ಉದ್ಯೋಗಿಗೆ 4 ವಾರಗಳಿಗೂ ಹೆಚ್ಚು ಕಾಲ ರಜೆ ನೀಡಿದೆ. ಇವೆಲ್ಲಕ್ಕಿಂತ ಮಿಗಿಲಾಗಿ, ಕಂಪನಿಯ ಅಧ್ಯಕ್ಷರು (Chairman) ಸ್ವತಃ ಉದ್ಯೋಗಿಗೆ ವೈಯಕ್ತಿಕವಾಗಿ ಸಂದೇಶ ಕಳುಹಿಸಿ, ಆಕೆಯ ಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ.

4000ಕ್ಕೂ ಹೆಚ್ಚು ಉದ್ಯೋಗಿಗಳಿರುವ ಬೃಹತ್ ಸಂಸ್ಥೆ!

ಇಲ್ಲಿ ಮತ್ತೊಂದು ಗಮನಾರ್ಹ ವಿಚಾರವೆಂದರೆ, ಈ ಸಂಸ್ಥೆಯು ಸಣ್ಣ ಪ್ರಮಾಣದ ಉದ್ಯಮವೇನಲ್ಲ. ಇದು 50 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿದ್ದು, 4,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ ಹಾಗೂ ವಿಶ್ವದ 40ಕ್ಕೂ ಹೆಚ್ಚು ದೇಶಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಸಾಮಾನ್ಯ ಸಣ್ಣ ಉದ್ಯಮಗಳಲ್ಲಿ ಮಾಲೀಕರಿಗೆ ಪ್ರತಿಯೊಬ್ಬ ಉದ್ಯೋಗಿಯ ಪರಿಚಯವಿರುತ್ತದೆ. ಆದರೆ ಇಷ್ಟೊಂದು ಬೃಹತ್ ಮಟ್ಟದಲ್ಲಿ ಬೆಳೆದಿದ್ದರೂ ಸಂಸ್ಥೆಯು ಪ್ರತಿಯೊಬ್ಬ ಉದ್ಯೋಗಿಯ ಕಷ್ಟಕ್ಕೆ ಮಿಡಿಯುವ ಗುಣವನ್ನು ಇಟ್ಟುಕೊಂಡಿರುವುದು ವಿಶೇಷ.

ಈ ಕುರಿತು ಬರೆದುಕೊಂಡಿರುವ ವಿಬಿನ್, "ನಮ್ಮ ಪೋಷಕರು ತಮ್ಮ ಸಂಸ್ಥೆಗಳಿಗೆ ಏಕೆ ಅಷ್ಟೊಂದು ನಿಷ್ಠೆಯಿಂದ (Loyal) ಇರುತ್ತಿದ್ದರು ಎಂಬುದು ಈಗ ಅರ್ಥವಾಗುತ್ತಿದೆ. ದೊಡ್ಡ ಮಟ್ಟಕ್ಕೆ ಬೆಳೆದ ಮೇಲೆಯೂ ಕುಟುಂಬ ನಿರ್ವಹಣೆಯ ಮಾದರಿಯ ಉದ್ಯಮಗಳು (Family-run businesses) ತಮ್ಮ ಸಿಬ್ಬಂದಿಯನ್ನು ಹೇಗೆ ಕಾಳಜಿಯಿಂದ ನೋಡಿಕೊಳ್ಳುತ್ತವೆ ಎಂಬುದಕ್ಕೆ ಇದೇ ಸಾಕ್ಷಿ" ಎಂದಿದ್ದಾರೆ.

ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ

ವಿಬಿನ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕಾರ್ಪೊರೇಟ್ ಜಗತ್ತಿಗೆ ಮಾದರಿಯಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಲವು ನೆಟ್ಟಿಗರು ಕಾರ್ಪೊರೇಟ್ ಕಂಪನಿಗಳು ಮತ್ತು ಇಂತಹ ಸಾಂಪ್ರದಾಯಿಕ ಕುಟುಂಬ ಆಧಾರಿತ ಸಂಸ್ಥೆಗಳ ನಡುವಿನ ವ್ಯತ್ಯಾಸವನ್ನು ಬೊಟ್ಟು ಮಾಡಿದ್ದಾರೆ. ದೊಡ್ಡ ಕಾರ್ಪೊರೇಟ್ ಕಂಪನಿಗಳಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದರೂ ಸಿಗದ ಮಾನವೀಯ ಸ್ಪಂದನೆ ಇಂತಹ ಸಂಸ್ಥೆಗಳಲ್ಲಿ ಸಿಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಕೆಲವರು ಹಳೆಯ ಕಾಲದ ಕಂಪನಿ ಸಂಸ್ಕೃತಿಯನ್ನು ನೆನಪಿಸಿಕೊಂಡಿದ್ದಾರೆ. ಹಿಂದೆ ಕಂಪನಿಗಳು ಪೆನ್ಷನ್, ಅಗ್ಗದ ದರದ ಗೆಸ್ಟ್ ಹೌಸ್ ಹಾಗೂ ಕ್ಯಾಂಟೀನ್ ಸೌಲಭ್ಯಗಳನ್ನು ನೀಡುತ್ತಿದ್ದವು. ಇಂದಿನ ಆಫೀಸುಗಳು ಆಧುನಿಕ ಹಾಗೂ ಹೈಟೆಕ್ ಆಗಿರಬಹುದು, ಆದರೆ ಉದ್ಯೋಗಿಗಳ ಜೊತೆಗಿನ ವೈಯಕ್ತಿಕ ಭಾವನಾತ್ಮಕ ಬಾಂಧವ್ಯ ಕಡಿಮೆಯಾಗಿದೆ. ಮಾಸ್ ಲೇಆಫ್‌ಗಳ (ಸಾಮೂಹಿಕ ವಜಾ) ಈ ದಿನಗಳಲ್ಲಿ ಉದ್ಯೋಗ ಭದ್ರತೆ ಮತ್ತು ಕಷ್ಟಕ್ಕೆ ಮಿಡಿಯುವ ಗುಣವೇ ನಿಜವಾದ ಮೌಲ್ಯ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಏಕೆ ಈ ಸುದ್ದಿ ಮುಖ್ಯವಾಗುತ್ತದೆ?

ಸಾಮಾನ್ಯವಾಗಿ ಉದ್ಯೋಗಸ್ಥರ ಕುಟುಂಬದಲ್ಲಿ ಸಾವು ಸಂಭವಿಸಿದಾಗ ಕಂಪನಿಗಳು ಕೇವಲ 2 ರಿಂದ 3 ದಿನಗಳ ರಜೆ ನೀಡುವುದು ವಾಡಿಕೆ. ಆದರೆ, 4 ವಾರಗಳ ರಜೆ ನೀಡಿ, ಚಿಕಿತ್ಸಾ ವೆಚ್ಚವನ್ನೂ ಭರಿಸಿ, ಕಂಪನಿಯ ಉನ್ನತ ಅಧಿಕಾರಿಯೇ ಧೈರ್ಯ ತುಂಬುವುದು ಅಪರೂಪದಲ್ಲಿ ಅಪರೂಪದ ಸಂಗತಿ. ಸಂಬಳದ ಅಂಕಿ-ಅಂಶಗಳು ಅಥವಾ ಆಫೀಸಿನ ಜಾಲಿ ಆಫರ್‌ಗಳಿಗಿಂತ, ಜೀವನದ ಕಷ್ಟದ ಹಂತದಲ್ಲಿ ಸಂಸ್ಥೆಯು ತಮ್ಮನ್ನು ಹೇಗೆ ನಡೆಸಿಕೊಂಡಿತು ಎಂಬುದೇ ಉದ್ಯೋಗಿಯ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಈ ಕೊಯಮತ್ತೂರು ಮೂಲದ ಸಂಸ್ಥೆಯು ಪ್ರತಿಯೊಂದು ಕಂಪನಿಗೂ ಮಾದರಿಯಾಗಿದೆ.

PREV
Read more Articles on
click me!

Recommended Stories

ನಾಗಸಂದ್ರ ಮೆಟ್ರೋ ಸಮೀಪದ ಐಕಿಯಾ ಭೂ ಒಪ್ಪಂದದಲ್ಲಿ ಎಡವಿದ BMRCL: 104 ಕೋಟಿ ರೂಪಾಯಿ ನಷ್ಟ ಎಂದ ಸಿಎಜಿ!
ಆಗಸ್ಟ್ 15: ನಾಳೆ ವಿಧಾನಸೌಧದಲ್ಲಿ ನಡೆಯುವ ಫ್ರೀಡಂ ಹಬ್ಬಕ್ಕೆ ಹೋಗಬೇಕಾ? ನಿಮಗೆ ಪ್ರವೇಶ ಸಿಗಬೇಕು ಅಂದ್ರೆ ಈ ವಿಷಯ ತಿಳ್ಕೊಳ್ಳಿ!