
ಬೆಂಗಳೂರು (ಆ.13): ರಾಜಧಾನಿ ಬೆಂಗಳೂರಿನ ವಾಹನ ದಟ್ಟಣೆ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹೊರವರ್ತುಲ ರಸ್ತೆಯ (ORR) ನವೀಕರಣ ಕಾಮಗಾರಿಯನ್ನು ವೇಗಗೊಳಿಸಲು ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಯೋಜನೆಯಂತೆ ಅಕ್ಟೋಬರ್‌ನಲ್ಲಿ ವೈಟ್‌ಟಾಪಿಂಗ್ (White-topping) ಕಾಮಗಾರಿ ಆರಂಭವಾಗಲಿದ್ದು, ಜನವರಿ ವೇಳೆಗೆ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ.
ಈ ಕಾಮಗಾರಿ ನಡೆಯುವ ಅವಧಿಯಲ್ಲಿ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಕಿರಿಕಿರಿ ಉಂಟಾಗುವುದನ್ನು ತಡೆಯಲು ಮತ್ತು ನಿರ್ಮಾಣ ಕಾರ್ಯಕ್ಕೆ ಯಾವುದೇ ಅಡೆತಡೆ ಉಂಟಾಗದಂತೆ ನೋಡಿಕೊಳ್ಳಲು, ಹೊರವರ್ತುಲ ರಸ್ತೆಯ ಪಕ್ಕದಲ್ಲಿರುವ ಐಟಿ-ಬಿಟಿ ಕಂಪನಿಗಳಲ್ಲಿ ಶೇಕಡಾ 50ರಷ್ಟು ಸಿಬ್ಬಂದಿಗೆ 'ವರ್ಕ್ ಫ್ರಮ್ ಹೋಮ್' (WFH - ಮನೆಯಿಂದಲೇ ಕೆಲಸ) ಸೌಲಭ್ಯ ಒದಗಿಸುವಂತೆ ಕಂಪನಿಗಳ ಜೊತೆ ಮಾತುಕತೆ ನಡೆಸಲು ಸಚಿವರೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೊರವರ್ತುಲ ರಸ್ತೆಯುದ್ದಕ್ಕೂ ಕನಿಷ್ಠ 3 ಮೀಟರ್ ಅಗಲದ ತಡೆರಹಿತ ಪಾದಚಾರಿ ಮಾರ್ಗಗಳನ್ನು (ಫುಟ್‌ಪಾತ್) ನಿರ್ಮಿಸಲು ಸಚಿವರು ಆದೇಶಿಸಿದ್ದಾರೆ. ಸ್ಲಿಪ್ ರಸ್ತೆಗಳಲ್ಲಿ (Slip roads) ಫುಟ್‌ಪಾತ್‌ಗಳು 1.8 ಮೀಟರ್‌ವರೆಗೆ ಇರಲಿವೆ. ರಸ್ತೆಬದಿಯ ಎಲ್ಲಾ ಅತಿಕ್ರಮಣಗಳನ್ನು ತಕ್ಷಣ ತೆರವುಗೊಳಿಸಲು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳು ಅಳವಡಿಸಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಗುರುತಿಸಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸರ್ವಿಸ್ ರಸ್ತೆಗಳಲ್ಲಿ ಬಫರ್ ಜಾಗ ಲಭ್ಯವಿರುವ ಕಡೆಗಳಲ್ಲಿ ಬಸ್ ಮತ್ತು ಟ್ಯಾಕ್ಸಿಗಳ ಪಿಕ್-ಅಪ್ ಹಾಗೂ ಡ್ರಾಪ್-ಆಫ್ ಪಾಯಿಂಟ್‌ಗಳನ್ನು ಗುರುತಿಸಲಾಗುವುದು. ಇವುಗಳನ್ನು ಗುರುತಿಸಲು ನಿರ್ದಿಷ್ಟ ಬಣ್ಣಗಳ ಸಂಕೇತಗಳನ್ನು (Colour coding) ಬಳಸಲಾಗುತ್ತದೆ. ಜೊತೆಗೆ ಮುಖ್ಯ ರಸ್ತೆಯಲ್ಲೂ ಬಸ್ ಬೇಗಳನ್ನು ನಿರ್ಮಿಸಲಾಗುವುದು.
ವೈಟ್‌ಟಾಪಿಂಗ್ ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಆಂತರಿಕ ರಸ್ತೆಗಳನ್ನು (Internal roads) ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಂಡು ಟ್ರಾಫಿಕ್ ಡೈವರ್ಷನ್ ಮಾಡಲು ಸಚಿವರು ಸೂಚಿಸಿದ್ದಾರೆ. ಈ ಟ್ರಾಫಿಕ್ ನಿರ್ವಹಣಾ ಯೋಜನೆಯನ್ನು 'ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಷನ್' (ORRCA) ಹಾಗೂ ಸಂಚಾರ ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಲಾಗುವುದು.
ಸುಮಾರು ₹450 ಕೋಟಿ ಅಂದಾಜು ವೆಚ್ಚದ ಈ ಯೋಜನೆಯಡಿ ಡೆಲಿವರಿ ಬಾಯ್‌ಗಳಿಗೆ ನೆರವಾಗಲು ನೆರಳಿನ ಆಸನ, ಫೋನ್ ಚಾರ್ಜಿಂಗ್, ವೈ-ಫೈ ಮತ್ತು ಕುಡಿಯುವ ನೀರಿನ ಸೌಲಭ್ಯವಿರುವ 'ಗಿಗ್ ಹಬ್'ಗಳನ್ನು (Gig hubs) ನಿರ್ಮಿಸಲಾಗುವುದು. ಇದರ ಜೊತೆಗೆ ಸೌರಶಕ್ತಿ ಚಾಲಿತ ಇ-ಸ್ಕೂಟರ್ ಹಾಗೂ ಸೈಕಲ್ ಚಾರ್ಜಿಂಗ್ ಡಾಕ್‌ಗಳು ಮತ್ತು ಆಟೋ ರಿಕ್ಷಾ ಲೇ-ಬೈಗಳನ್ನು ರೂಪಿಸಲಾಗುತ್ತಿದೆ.
ಅಲ್ಲದೆ, ರೇಷ್ಮೆ ಮಂಡಳಿ (Silk Board) ಯಿಂದ ಕೆ.ಆರ್. ಪುರಂವರೆಗಿನ 17 ಕಿಲೋಮೀಟರ್ ಕಾರಿಡಾರ್ ಅನ್ನು 'ಬಹುಮಾದರಿ ಸಂಚಾರ ಕಾರಿಡಾರ್' (Multimodal mobility corridor) ಆಗಿ ಪರಿವರ್ತಿಸಲಾಗುತ್ತಿದ್ದು, ಅಗಲವಾದ ಫುಟ್‌ಪಾತ್, ಸೈಕಲ್ ಟ್ರ್ಯಾಕ್, ಹೈಟೆಕ್ ಬಸ್ ತಂಗುದಾಣಗಳು, ಚರಂಡಿ ವ್ಯವಸ್ಥೆ ಹಾಗೂ ಜಂಕ್ಷನ್‌ಗಳ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
ಹೊರವರ್ತುಲ ರಸ್ತೆಯಲ್ಲಿ ಮೆಟ್ರೋ ಸೇವೆ ಆರಂಭವಾದ ನಂತರವೇ ವೈಟ್‌ಟಾಪಿಂಗ್ ಕೆಲಸ ಕೈಗೆತ್ತಿಕೊಳ್ಳಬೇಕು ಎಂದು ಹಲವು ನಿವಾಸಿಗಳು ಹಾಗೂ ಸವಾರರು ಸರ್ಕಾರಕ್ಕೆ ಮನವಿ ಮಾಡಿದ್ದರು. ಬಿಎಂಆರ್‌ಸಿಎಲ್ ಅಧಿಕಾರಿಗಳೊಂದಿಗೆ ಇತ್ತೀಚೆಗೆ ನಡೆದ ಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು, ಹೊರವರ್ತುಲ ರಸ್ತೆಯ ಬ್ಲೂ ಲೈನ್ (Blue Line) ಮೆಟ್ರೋ ಮಾರ್ಗದಲ್ಲಿ ಅಕ್ಟೋಬರ್ 2026ರ ವೇಳೆಗೆ ಪ್ರಾಯೋಗಿಕ ಸಂಚಾರ (Trial runs) ಆರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದರು. ಆದರೆ, ಈ ಮಾರ್ಗದಲ್ಲಿ ಪೂರ್ಣ ಪ್ರಮಾಣದ ವಾಣಿಜ್ಯ ಮೆಟ್ರೋ ಸಂಚಾರ ಮುಂದಿನ ವರ್ಷವಷ್ಟೇ ಸಾರ್ವಜನಿಕರಿಗೆ ಲಭ್ಯವಾಗಲಿದೆ.