
ಬೆಂಗಳೂರು: ಬೆಟ್ಟಹಲಸೂರು ಗ್ರಾಮ ಸಭೆಯಲ್ಲಿ ಇತ್ತೀಚಿಗೆ ಪಂಚಾಯತಿ ವ್ಯಾಪ್ತಿಯ ಸರ್ವೆ ನಂ.223/3ರ 5 ಎಕರೆ ಸರ್ಕಾರಿ ಜಾಗವನ್ನು ಅಚಾತುರ್ಯದಿಂದಲೋ ಅಥವಾ ಕಣ್ತಪ್ಪಿನಿಂದಲೋ ಎಂಬೆಸ್ಸಿ ಸಂಸ್ಥೆಗೆ 99 ವರ್ಷಗಳ ಲೀಸ್ ನೀಡಲು ಪಿಡಿಒ ಲೋಕನಾಥ್ ಮುಂದಾಗಿದ್ದರು ಎನ್ನಲಾಗಿದ್ದ ಆರೋಪ ಕುರಿತು ಗ್ರಾಮಸ್ಥರು ಪಿಡಿಒಗೆ ಗ್ರಾಮ ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಸುಗ್ಗಟ್ಟ ಗ್ರಾಮದಲ್ಲಿ ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ, ಆಗಿರುವ ಲೋಪದೋಷಕ್ಕೆ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದರು. ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬೆಟ್ಟಹಲಸೂರು ನಂಜುಂಡಪ್ಪ, ಸರ್ಕಾರಿ ಭೂಮಿಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ಗ್ರಾಪಂ ಸದಸ್ಯರ ಹಾಗೂ ಗ್ರಾಮಸ್ಥರ ಗಮನಕ್ಕೆ ತರದೇ 99 ವರ್ಷಗಳ ಲೀಸ್ ನೀಡುವುದು ಅಕ್ಷಮ್ಯ, ಭೂಮಾಫಿಯಾಗಳಿಂದ ಸರ್ಕಾರಿ ಜಮೀನನ್ನು ರಕ್ಷಿಸಬೇಕಾದ ಅಧಿಕಾರಿಗಳೇ, ಈ ರೀತಿ ಯಾರ ಗಮನಕ್ಕೂ ತರದೆ ಖಾಸಗಿ ಸಂಸ್ಥೆಗಳಿಗೆ 99 ವರ್ಷಗಳ ಕಾಲ ಲೀಸ್ ನೀಡಲು ಮುಂದಾಗಿದ್ದರೆನ್ನಲಾದ ಪಿಡಿಒ ತಮ್ಮಿಂದಾದ ತಪ್ಪಿಗೆ ಬಹಿರಂಗ ಕ್ಷಮೆ ಯಾಚಿಸಬೇಕು ಎಂದರು.
ಈ ಕುರಿತು ಸ್ಪಷ್ಟನೆ ನೀಡಿದ ಪಿಡಿಒ ಲೋಕನಾಥ್, ಎಂಬೆಸ್ಸಿ ಸಂಸ್ಥೆಗೆ ಸರ್ಕಾರಿ ಜಾಗವನ್ನು ಲೀಸ್ ನೀಡಬೇಕೆಂಬ ಮನವಿ ಬಂದಿತ್ತು. ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಸಮಕ್ಷಮ ಓದಿ ತಿಳಿಸಲಾಗಿತ್ತು ಎಂದರು.
ಇದನ್ನೂ ಓದಿ: ತಂದೆಯನ್ನು ಕಳೆದುಕೊಂಡ ಬೆಂಗಳೂರು ಉದ್ಯೋಗಿಗೆ ಧೈರ್ಯ ತುಂಬಿದ ಸಂಸ್ಥೆ: 4 ವಾರ ರಜೆ, ಚಿಕಿತ್ಸಾ ವೆಚ್ಚ ಭರಿಸಿ ಮಾನವೀಯತೆ!
ಗ್ರಾಪಂ ಅಧ್ಯಕ್ಷೆ ಹೇಮಾವತಿ ನಾಗರಾಜ್, ಲೀಸ್‌ಗೆ ಮನವಿ ಮಾಡಿದ್ದಾರೆ ಎಂದಷ್ಟೇ ತಿಳಿಸಲಾಗಿತ್ತು, ಗ್ರಾಪಂಗೆ ಆದಾಯ ಬರುತ್ತದೆ ಎಂಬ ನಿರೀಕ್ಷೆಯಿಂದ ಅನುಮೋದನೆಗೆ ಸಹಿ ಹಾಕಿದ್ದೆವು, ನಂತರ ನಮ್ಮ ಗಮನಕ್ಕೆ ಬಾರದಂತೆ 99 ವರ್ಷ ಲೀಸ್ ಎಂದು ನಮೂದಾಗಿದೆ, ಈ ಬಗ್ಗೆ ಸದಸ್ಯರಿಗಾಗಲಿ, ನನಗಾಗಲಿ ಮಾಹಿತಿ ಇರಲಿಲ್ಲ, ಅನುಮೋದನೆ ಪತ್ರ ಪುನರ್ ಪರಿಶೀಲಿಸಿದಾಗಲೇ 99 ವರ್ಷಗಳ ಕಾಲ ಲೀಸ್ ನೀಡಲು ಮುಂದಾಗಿದ್ದ ವಿಷಯ ಬಯಲಾಗಿದೆ. ಕೂಡಲೇ ಎಂಬೆಸ್ಸಿ ಸಂಸ್ಥೆಯ ಮನವಿಯನ್ನು ತಿರಸ್ಕರಿಸಿದ್ದೇವೆ. ಈ ಕುರಿತು ಪಿಡಿಒ ಸೂಕ್ತ ಉತ್ತರ ನೀಡಬೇಕು ಎಂದರು.
ಇದನ್ನೂ ಓದಿ: ಸಂಪೂರ್ಣವಾಗಿ ಬದಲಾಗಲಿದೆ ಬೆಂಗಳೂರಿನ ಮೊಟ್ಟಮೊದಲ ಫ್ಲೈಓವರ್, 10 ಕೋಟಿ ವೆಚ್ಚ ಮಾಡಲಿರುವ GBA