ಬಿಎಂಟಿಸಿಯಲ್ಲಿ ಲಂಚ ಕೊಟ್ಟರಷ್ಟೇ ರಜೆ!

By Kannadaprabha NewsFirst Published Oct 27, 2019, 8:41 AM IST
Highlights

ಬಿಎಂಟಿಸಿಯಲ್ಲಿ ಸಿಬ್ಬಂದಿ ರಜೆ ಬೇಕೆಂದಲ್ಲಿ ಲಂಚ ಕೊಡುವುದು ಒಂದು ರೀತಿಯಲ್ಲಿ ಕಡ್ಡಾಯ ಎನ್ನುವಂತಾಗಿದೆ. ಇದು ಒಂದು ಡಿಪೋದ ಕತೆಯಲ್ಲ. ಇದು ಎಲ್ಲಾ ಡಿಪೋದ ಕಥೆ. 

ಮೋಹನ ಹಂಡ್ರಂಗಿ

ಬೆಂಗಳೂರು [ಅ.27]:  ರಜೆ ನಿರ್ವಹಣೆ ಯಂತ್ರದ ಮೂಲಕ ಸಿಬ್ಬಂದಿಗೆ ರಜೆ ನೀಡುವ ವ್ಯವಸ್ಥೆಯೊಂದು ಬಿಎಂಟಿಸಿಯಲ್ಲಿ ಇತ್ತು. ಈ ವ್ಯವಸ್ಥೆಯಡಿ ಮೇಲಧಿಕಾರಿಗಳ ಮರ್ಜಿ ಇಲ್ಲದೆಯೂ ಸಿಬ್ಬಂದಿ ಸುಲಲಿತವಾಗಿ ರಜೆ ಪಡೆಯಬಹುದಿತ್ತು.

ಆದರೆ, ಈ ರಜೆ ನೀಡುವ ಯಂತ್ರಗಳು ಕೆಟ್ಟು ಹೋಗಿವೆ. ಇದಾಗಿ ಒಂದು ವರ್ಷವೇ ಕಳೆದಿದೆ. ಆದರೂ, ಮೇಲಧಿಕಾರಿಗಳು ಈ ಯಂತ್ರಗಳ ದುರಸ್ತಿಗೆ ಮುಂದಾಗುತ್ತಿಲ್ಲ. ಇದಕ್ಕೆ ಸಿಬ್ಬಂದಿ ತಮ್ಮ ಮರ್ಜಿಯ ವ್ಯಾಪ್ತಿಗೆ ಬರಲಿ ಹಾಗೂ ಕೊಂಚ ‘ಮಾಮೂಲಿ’ ದೊರೆಯಲಿ ಎಂಬ ಮೇಲಧಿಕಾರಿಗಳ ಮನಸ್ಥಿತಿ ಕಾರಣ ಎಂದು ಆರೋಪಿಸುತ್ತಾರೆ ಬಿಎಂಟಿಸಿ ಸಿಬ್ಬಂದಿ.

ನಿಗಮದ ಡಿಪೋಗಳಲ್ಲಿ ನೌಕರರು ರಜೆ ಪಡೆಯಲು ಅನುವಾಗುವಂತೆ ಹಾಗೂ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ 45 ಡಿಪೋಗಳಲ್ಲೂ ‘ರಜೆ ನಿರ್ವಹಣಾ ಯಂತ್ರ’ಗಳನ್ನು ಅಳಡಿಸಲಾಗಿದೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚಿನ ಡಿಪೋಗಳಲ್ಲಿ ಯಂತ್ರಗಳು ಕೆಟ್ಟು ವರ್ಷ ಕಳೆದರೂ ದುರಸ್ತಿ ಮಾಡಿಸುವ ಗೋಜಿಗೆ ಹೋಗಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಜೆ ನಿರ್ವಹಣೆ ಯಂತ್ರದಲ್ಲಿ ನೌಕರರು ತಮಗೆ ಬೇಕಾದಾಗ ರಜೆಗಳನ್ನು ಪಡೆದುಕೊಳ್ಳಬಹುದು. ಇದಕ್ಕೆ ಯಾವ ಅಧಿಕಾರಿಯ ಅನುಮತಿ ಪಡೆಯುವ ಅಗತ್ಯವಿಲ್ಲ. ಯಾರ ಮರ್ಜಿಗೆ ಬೀಳುವ, ಮೇಲಧಿಕಾರಿಗಳನ್ನು ಖುಷಿ ಪಡಿಸುವ ಪ್ರಮೆಯವೇ ಬರುವುದಿಲ್ಲ. ಈಗ ರಜೆ ನಿರ್ವಹಣೆ ಯಂತ್ರಗಳು ಸರಿಯಾದ ನಿರ್ವಹಣೆ ಇಲ್ಲದೆ ದುರಸ್ತಿಗೆ ಬಂದಿವೆ. ದುರಸ್ತಿ ಮಾಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಯಂತ್ರಗಳು ಕೈಕೊಟ್ಟಿರುವ ಪರಿಣಾಮ ಈಗ ರಜೆ ಬೇಕೆಂದರೆ, ಡಿಪೋ ಅಧಿಕಾರಿಗಳನ್ನೇ ಕೇಳುವ ಅನಿರ್ವಾಯತೆ ಇದೆ. ಒಂದು ದಿನ ರಜೆಗೆ ಇನ್ನೂರು ರು. ಕೊಟ್ಟರಷ್ಟೇ ಮಂಜೂರು ಮಾಡುತ್ತಾರೆ. ಹಣ ಕೊಡಲು ಹಿಂದೇಟು ಹಾಕಿದರೆ ರಜೆ ನೀಡದೆ ಸತಾಯಿಸುತ್ತಾರೆ ಎಂದು ಬಿಎಂಟಿಸಿ ನೌಕರರೊಬ್ಬರು ಆರೋಪಿಸುತ್ತಾರೆ.

ದಲ್ಲಾಳಿಗಳ ನೇಮಕ:

ಅಧಿಕಾರಿಗಳು ರಜೆ ನೀಡುವಾಗ ನೌಕರರಿಂದ ನೇರವಾಗಿ ಹಣ ಪಡೆಯುವುದಿಲ್ಲ. ಅದಕ್ಕಾಗಿ ತಮಗೆ ನಿಷ್ಠರಾಗಿರುವ ನಾಲ್ಕೈದು ಮಂದಿ ನೌಕರರನ್ನು ದಲ್ಲಾಳಿಗಳಾಗಿ ಬಳಸಿಕೊಳ್ಳುತ್ತಾರೆ. ಒಂದು ದಿನಕ್ಕೆ 200 ರು., 2 ದಿನಕ್ಕೆ 400 ರು., 3 ದಿನಕ್ಕೆ 600 ರು. ಹೀಗೆ ಒಂದೊಂದು ದಿನಕ್ಕೂ 200 ಏರಿಕೆಯಾಗುತ್ತಾ ಹೋಗುತ್ತದೆ. ಚಾಲಕ, ನಿರ್ವಾಹಕ, ಮೆಕ್ಯಾನಿಕ್‌ ರಜೆ ಬೇಕೆಂದರೆ, ಈ ದಲ್ಲಾಳಿಗಳಿಗೆ ಹಣ ಕೊಟ್ಟು ನಂತರ ಅಧಿಕಾರಿಗಳ ಬಳಿ ರಜೆ ಮಂಜೂರು ಮಾಡಿಸಿಕೊಳ್ಳಬೇಕು. ಇದು ಒಂದು ಡಿಪೋನ ಕಥೆಯಲ್ಲ. ನಿಗಮದ ಪ್ರತಿ ಡಿಪೋದಲ್ಲೂ ಇದೇ ಪರಿಸ್ಥಿತಿ ಇದೆ ಎನ್ನಲಾಗಿದೆ.

ಯಂತ್ರ ರಿಪೇರಿ ಮಾಡಿಸಲ್ಲ:

ಡಿಪೋ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿಯೇ ರಜೆ ನಿರ್ವಹಣೆ ಯಂತ್ರ ರಿಪೇರಿ ಮುಂದೂಡುತ್ತಿದ್ದಾರೆ. ನೌಕರರು ಕೇಳಿದರೆ ಮಧ್ಯಾಹ್ನ, ಸಂಜೆ, ರಾತ್ರಿ ಎಂದು ಸಾಬೂಬು ಹೇಳಿಕೊಂಡು ಕಾಲಹರಣ ಮಾಡುತ್ತಾರೆ. ಒಂದು ವೇಳೆ ಏರು ದನಿಯಲ್ಲಿ ಕೇಳಿದರೆ, ವಿನಾಕಾರಣ ಆ ನೌಕರರಿಗೆ ಕಿರುಕುಳ ನೀಡುತ್ತಾರೆ. ಈ ಕಾರಣದಿಂದ ಬಹುತೇಕ ನೌಕರರು ಅಧಿಕಾರಿಗಳನ್ನು ಪ್ರಶ್ನೆ ಮಾಡಲು ಹೆದರುತ್ತಾರೆ. ರಜೆಗಳ ಅನಿವಾರ್ಯತೆ ಇರುವುದರಿಂದ ಲಂಚ ಕೊಟ್ಟು ರಜೆ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲ ಡಿಪೋಗಳಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ನೌಕರರೊಬ್ಬರು ಹೇಳುತ್ತಾರೆ.

ಬಿಎಂಟಿಸಿ ಡಿಪೋಗಳಲ್ಲಿ ರಜೆ ನಿರ್ವಹಣೆ ಯಂತ್ರಗಳು ದುರಸ್ತಿಗೆ ಬಂದಿರುವ ವಿಚಾರ ತಮ್ಮ ಗಮನಕ್ಕೆ ಬಂದಿದೆ. ಪರಿಶೀಲಿಸಿ ಸೂಕ್ತ ಕ್ರಮ ವಹಿಸಲಾಗುವುದು.

-ಅನುಪಮ್‌ ಅಗರ್ವಾಲ್‌, ಬಿಎಂಟಿಸಿ ಭದ್ರತೆ ಮತ್ತು ಜಾಗೃತ ವಿಭಾಗದ ನಿರ್ದೇರ್‍ಶಕ.

ಬಹುತೇಕ ಡಿಪೋಗಳಲ್ಲಿ ರಜೆ ನಿರ್ವಹಣೆ ಯಂತ್ರಗಳು ದುರಸ್ತಿಗೆ ಬಂದಿವೆ. ರಿಪೇರಿ ಮಾಡಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ನೌಕರರು ರಜೆ ಪಡೆಯಲು ಅಧಿಕಾರಿಗಳಿಗೆ ದುಂಬಾಲು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

-ಆನಂದ್‌, ಪ್ರಧಾನ ಕಾರ್ಯದರ್ಶಿ, ಸಿಐಟಿಯು ಸಂಯೋಜಿತ ಬಿಎಂಟಿಸಿ ನೌಕರರ ಸಂಘ.

click me!