ಡಿಕೆಶಿ ರೋಡ್‌ಶೋಗೆ ನಲುಗಿದ ಏರ್‌ಪೋರ್ಟ್‌ ರಸ್ತೆ!

By Kannadaprabha NewsFirst Published Oct 27, 2019, 8:13 AM IST
Highlights

ಡಿಕೆ ಶಿವಕುಮಾರ್ ಬಿಡುಗಡೆಯಾಗಿ ಬೆಂಗಳೂರಿಗೆ ಆಗಮಿಸಿದ್ದು, ಈ ವೇಳೆ ನಡೆದ ರೋಡ್ ಶೋ ನಿಂದ ಜನರು ಭಾರೀ ಸಮಸ್ಯೆ ಎದುರಿಸುವಂತಾಯ್ತು. 

ಬೆಂಗಳೂರು[ಅ.27]: ತಿಹಾರ್‌ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಬೆಂಗಳೂರಿಗೆ ಆಗಮಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಶನಿವಾರ ರೋಡ್‌ ಶೋ ನಡೆಸಿದ ಪರಿಣಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಅರ್ಧ ದಿನ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್‌ ಕೂಡ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ದೃಶ್ಯಗಳು ಕಂಡು ಬಂದವು. ಮಧ್ಯಾಹ್ನ 3.15ರ ಸುಮಾರಿಗೆ ವಿಮಾನ ನಿಲ್ದಾಣದಿಂದ ತೆರೆದ ವಾಹನದಲ್ಲಿ ರೋಡ್‌ ಶೋ ಆರಂಭಿಸಿದ ಪರಿಣಾಮ ಆ ರಸ್ತೆಯಲ್ಲಿ ಸಂಪೂರ್ಣವಾಗಿ ವಾಹನ ದಟ್ಟಣೆ ಆಗಿತ್ತು. ರೋಡ್‌ ಶೋ ಸಾದಹಳ್ಳಿ ಗೇಟ್‌ ಬಳಿ ಬರುತ್ತಿದ್ದಂತೆ ಡಿ.ಕೆ.ಶಿವಮಾರ್‌ ಅವರ ಸಾವಿರಾರು ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಜಮಾಯಿಸಿದ್ದರು. ಕ್ರೇನ್‌ ಮೂಲಕ ಸೇಬಿನಿಂದ ತಯಾರಿಸಿದ್ದ ಬೃಹತ್‌ ಆಕಾರದ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಈ ವೇಳೆ ಸದಾಹಳ್ಳಿ ಗೇಟ್‌ ರಸ್ತೆಯಲ್ಲಿ ಸಂಪೂರ್ಣವಾಗಿ ಸಾವಿರಾರು ಮಂದಿ ಜಮಾಯಿಸಿದ್ದ ಕಾರಣ ವಿಮಾನ ನಿಲ್ದಾಣಕ್ಕೆ ತೆರಳುವ ಹಾಗೂ ನಗರದ ಕಡೆಗೆ ಬರುವ ವಾಹಗಳು ಒಂದು ತಾಸಿಗೂ ಹೆಚ್ಚು ಕಾಲ ರಸ್ತೆಯಲ್ಲಿ ನಿಲ್ಲಬೇಕಾಯಿತು. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಆ್ಯಂಬುಲೆನ್ಸ್‌ವೊಂದು ಸುಮಾರು 20 ನಿಮಿಷ ದಟ್ಟಣೆಯಲ್ಲಿ ಸಿಲುಕಿತು.

ಸಾವಿರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರಿಂದ ತೆರೆದ ವಾಹನದಲ್ಲಿ ತೆರಳುವುದು ಕಷ್ಟಎಂದು ಡಿ.ಕೆ.ಶಿವಕುಮಾರ್‌ ಅವರು ಕಾರಿನಲ್ಲಿ ರೋಡ್‌ ಶೋ ನೆಡಸಿದರು. ಈ ವೇಳೆ ಸಾದಹಳ್ಳಿ ಗೇಟ್‌ನಿಂದ ಹಿಡಿದು ನಗರದ ಕ್ವಿನ್ಸ್‌ ರಸ್ತೆವರೆಗೆ ಬರುವ ತನಕ ವಾಹನ ದಟ್ಟಣೆ ಇತ್ತು. ಅಲ್ಲಲ್ಲಿ ಕಾರ್ಯಕರ್ತರು ರಸ್ತೆಯಲ್ಲಿ ನಿಂತು ಸ್ವಾಗತಿಸಿದ ಪರಿಣಾಮ ವಾಹನ ದಟ್ಟಣೆ ಹೆಚ್ಚಾಗಿತ್ತು. ರೋಡ್‌ ಶೋ ಮುಂದಕ್ಕೆ ಹೋದ ಬಳಿಕ ವಾಹನಗಳು ಮಂದಗತಿಯಲ್ಲಿ ಸಾಗಿದವು.

ಸವಾರರ ಆಕ್ರೋಶ : ಇನ್ನು ಡಿ.ಕೆ.ಶಿವಕುಮಾರ್‌ ಅವರ ರೋಡ್‌ ಶೋನಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ, ಇದಕ್ಕೆ ಅವಕಾಶ ಮಾಡಿಕೊಟ್ಟಪೊಲೀಸರ ವರ್ತನೆಗೆ ಅಸಮಾಧಾನ ಹೊರ ಹಾಕಿದರು. ನಿತ್ಯ ಜನದಟ್ಟಣೆ ಇರುವ ರಸ್ತೆಯಲ್ಲಿ ರೋಡ್‌ ಶೋ ನಡೆಸಲು ಹೇಗೆ ಅವಕಾಶ ಮಾಡಿಕೊಟ್ಟರು ಎಂದು ವಾಹನ ದಟ್ಟಣೆಯಲ್ಲಿ ಸಿಲುಕಿದ್ದ ಸವಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಸಂಚಾರ ವಿಭಾಗದ ಪೊಲೀಸ್‌ ಅಧಿಕಾರಿಯೊಬ್ಬರು, ರೋಡ್‌ ಶೋ ಬಗ್ಗೆ ಯಾರು ಅನುಮತಿ ಪಡೆದಿರಲಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ. ಸಂಚಾರ ದಟ್ಟಣೆ ಮಂದಗತಿಯಲ್ಲಿತ್ತು’ ಎಂದು ತಿಳಿಸಿದರು.

'ನವೆಂಬರ್‌ನಿಂದ ಮೋದಿಗೆ ಗಂಡಾಂತರ, ಡಿಕೆಶಿ ಸಿಎಂ‌ ಆಗೋದು ನಿಶ್ಚಿತ'...

ಕ್ಷಮೆ ಕೋರಿದ ಡಿಕೆ : ತಮ್ಮ ಭರ್ಜರಿ ರೋಡ್‌ಶೋದಿಂದಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿವರೆಗಿನ ಮಾರ್ಗದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದಕ್ಕೆ ಡಿ.ಕೆ.ಶಿವಕುಮಾರ್‌ ಸಾರ್ವಜನಿಕರ ಕ್ಷಮೆಯಾಚಿಸಿದರು.

ವಿಮಾನ ನಿಲ್ದಾಣಕ್ಕೆ ಹೊರಟಿದ್ದವರು, ರೈಲು ಹಾಗೂ ಬಸ್‌ ತಪ್ಪಿಸಿಕೊಂಡವರ ಕ್ಷಮೆ ಕೋರುತ್ತೇನೆ. ಕೆಲವೊಂದು ಬಾರಿ ಜನರು ರಸ್ತೆಗೆ ಇಳಿದಾಗ ಇಂತಹ ಸಂದರ್ಭ ನಿರ್ಮಾಣವಾಗುತ್ತದೆ. ಇದು ಪ್ರಜಾಪ್ರಭುತ್ವದಲ್ಲಿ ಅನಿವಾರ್ಯವಾಗಿರುತ್ತದೆ. ಹಾಗಿದ್ದರೂ, ಸಾರ್ವಜನಿಕರಿಗೆ ಆದ ತೊಂದರೆಗೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದರು.

click me!