
ಬೆಂಗಳೂರು (ಸೆ.9): ನೈಸ್ (NICE) ರಸ್ತೆಗೆ ಪರ್ಯಾಯವಾಗಿ ಹೊಸೂರು, ಮೈಸೂರು ಹಾಗೂ ತುಮಕೂರು ರಸ್ತೆಗಳನ್ನು ಸಂಪರ್ಕಿಸುವ 'ಪೆರಿಫೆರಲ್ ರಿಂಗ್ ರೋಡ್-2' (PRR-2) ಯೋಜನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮರುಜೀವ ನೀಡಿದೆ. ಈ 52 ಕಿಲೋಮೀಟರ್ ಉದ್ದದ, 10 ಪಥಗಳ (10-Lane) ಬೃಹತ್ ರಸ್ತೆ ನಿರ್ಮಾಣಕ್ಕಾಗಿ ಒಟ್ಟು 1,427 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಸಜ್ಜಾಗಿದ್ದು, ಇದರಿಂದ ಸುಮಾರು 1,126 ಭೂಮಾಲೀಕರು ತಮ್ಮ ಆಸ್ತಿಯನ್ನು ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಜಿಲ್ಲೆಯಾದ 'ಬೆಂಗಳೂರು ದಕ್ಷಿಣ' (ಹಳೆಯ ರಾಮನಗರ ಜಿಲ್ಲೆ) ವಲಯವನ್ನು ಪ್ರಮುಖವಾಗಿ ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ ಈ ಹೆಜ್ಜೆಯನ್ನಿಡಲಾಗಿದೆ. ಈ 52 ಕಿ.ಮೀ. ಉದ್ದದ ಪಿಆರ್‌ಆರ್-2 ರಸ್ತೆಯು ಬಿಡದಿಯಲ್ಲಿ ಪ್ರಸ್ತಾವಿತ ಹೊಸ ಟೌನ್‌ಶಿಪ್‌ಗೂ ನೇರ ಸಂಪರ್ಕ ಕಲ್ಪಿಸಲಿದೆ.
ಕಳೆದ ವಾರವಷ್ಟೇ ರಾಜ್ಯ ಸರ್ಕಾರವು ಅತ್ತಿಬೆಲೆ, ಜಿಗಣಿ, ಬೇಗೂರು, ಉತ್ತರಹಳ್ಳಿ, ಕೆಂಗೇರಿ ಮತ್ತು ದಾಸನಪುರ ಸೇರಿದಂತೆ ವಿವಿಧ ಭಾಗಗಳ ಸುಮಾರು 30 ಹಳ್ಳಿಗಳಿಂದ ಜಮೀನು ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆಯನ್ನು (Final Notification) ಹೊರಡಿಸಿದೆ. ಸರ್ಕಾರ ಯೋಜನೆ ಅನುಷ್ಠಾನದಲ್ಲಿ ವಿಳಂಬ ಮಾಡಿದ ಕಾರಣ ಭೂಮಾಲೀಕರು ನ್ಯಾಯಾಲಯದ ಮೆಟ್ಟಿಲೇರುತ್ತಿದ್ದು, ಹೈಕೋರ್ಟ್ ಪ್ರಾಥಮಿಕ ಅಧಿಸೂಚನೆಗಳನ್ನು ರದ್ದುಪಡಿಸುತ್ತಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಮಾತನಾಡಿ, "ಈ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಸುಮಾರು ಎರಡು ದಶಕಗಳೇ ಕಳೆದಿವೆ. ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ರೈತರಿಗೆ ನಷ್ಟಪರಿಹಾರ ನೀಡದಿದ್ದರೆ ತೀವ್ರ ವಿರೋಧ ಎದುರಾಗುವುದು ನಿಶ್ಚಿತ. ಇದುವರೆಗೆ ಪರಿಹಾರದ ಚೌಕಟ್ಟಿನ ಬಗ್ಗೆ ಬಿಡಿಎ ಯಾವುದೇ ಸ್ಪಷ್ಟತೆ ನೀಡಿಲ್ಲ" ಎಂದು ಆಕ್ಷೇಪಿಸಿದ್ದಾರೆ.
ನೈಸ್ ರಸ್ತೆಗೆ ಪರ್ಯಾಯವಾದ ಈ ಪಿಆರ್‌ಆರ್ ಯೋಜನೆಗೆ 2004 ರಲ್ಲಿ ಮಂಜೂರಾತಿ ಸಿಕ್ಕಿತ್ತು ಹಾಗೂ ಡಿಸೆಂಬರ್ 2005 ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಸರ್ಕಾರ ಮತ್ತು ನೈಸ್ ಸಂಸ್ಥೆಯ ಪ್ರವರ್ತಕರ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಈ ಪಿಆರ್‌ಆರ್ ರಸ್ತೆ ಹಾಗೂ ಬಿಡದಿ ಟೌನ್‌ಶಿಪ್ ಯೋಜನೆಗಳನ್ನು ರೂಪಿಸಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಬಿಡಿಎ ಹಿರಿಯ ಅಧಿಕಾರಿಯೊಬ್ಬರು, "ಭೂಮಾಲೀಕರಿಗೆ ಸದ್ಯದಲ್ಲೇ 'ಸಮ್ಮತಿ ಪುರಸ್ಕಾರ' (Consent Awards) ನೀಡಲಾಗುವುದು. 'ಬೆಂಗಳೂರು ಬಿಸಿನೆಸ್ ಕಾರಿಡಾರ್' ಯೋಜನೆ ಮಾದರಿಯಲ್ಲೇ ಇಲ್ಲೂ ಪರಿಹಾರದ ಆಯ್ಕೆಗಳನ್ನು ಸಿದ್ಧಪಡಿಸಲಾಗಿದೆ. ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ" ಎಂದು ತಿಳಿಸಿದ್ದಾರೆ.
ಒಟ್ಟು 52 ಕಿ.ಮೀ. ಉದ್ದದ ಈ ಯೋಜನೆಯಲ್ಲಿ ಬಿಡಿಎ ಈಗಾಗಲೇ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ನಡುವೆ ಸುಮಾರು 10 ಕಿ.ಮೀ. ಉದ್ದದ 10 ಪಥದ ರಸ್ತೆಯನ್ನು ನಿರ್ಮಿಸಿದೆ. ಉಳಿದ 42 ಕಿ.ಮೀ. ಭಾಗಕ್ಕೆ ಈಗ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇಡೀ ಯೋಜನೆಗೆ ಅಂದಾಜು 3,500 ಕೋಟಿ ರೂಪಾಯಿ ವೆಚ್ಚವಾಗಲಿದೆ.
ಇದಲ್ಲದೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ ಹಾಗೂ ಹೊಸೂರು ರಸ್ತೆಗಳನ್ನು ಈ ಹೊಸ ರಸ್ತೆ ಛೇದಿಸುವ (Intersect) ಜಾಗಗಳಲ್ಲಿ 'ಕ್ಲೋವರ್‌ಲೀಫ್ ಜಂಕ್ಷನ್'ಗಳನ್ನು (Cloverleaf Junctions) ನಿರ್ಮಿಸಲು ಬಿಡಿಎ ಪ್ರಸ್ತಾಪಿಸಿದ್ದು, ಇದಕ್ಕಾಗಿ ಹೆಚ್ಚುವರಿ ಜಮೀನು ಅಗತ್ಯವಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಡಿಎಗೆ ಇದು ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಮರುಜೀವ ನೀಡುವ ಪ್ರಕ್ರಿಯೆಯಾದರೆ, ಭೂಮಾಲೀಕರಿಗೆ ತಮ್ಮ ಪಾರಂಪರಿಕ ಆಸ್ತಿಯನ್ನು ಕಳೆದುಕೊಳ್ಳುವ ಆತಂಕ ತಂದೊಡ್ಡಿದೆ. ಬೆಂಗಳೂರಿನಿಂದ ಆಚೆಗೆ ಅಭಿವೃದ್ಧಿ ವಿಸ್ತರಿಸುವ ಮಾತುಗಳನ್ನಾಡುತ್ತಿದ್ದರೂ, ರಾಜಧಾನಿಯ ಸುತ್ತಮುತ್ತ ಸರ್ಕಾರ ಸರಣಿ ಭೂಸ್ವಾಧೀನಕ್ಕೆ ಮುಂದಾಗಿದೆ. ಇತ್ತೀಚೆಗೆ 71 ಕಿ.ಮೀ. ಬೆಂಗಳುರು ಬಿಸಿನೆಸ್ ಕಾರಿಡಾರ್, ಸರ್ಜಾಪುರದ ಸ್ವಿಫ್ಟ್ ಸಿಟಿ (SWIFT City), ದೊಡ್ಡಬಳ್ಳಾಪುರದ ಕ್ವಿನ್ ಸಿಟಿ (KWIN City) ಹಾಗೂ ಎಸ್‌ಟಿಆರ್‌ಆರ್ (STRR) ಸುತ್ತಮುತ್ತ ಕೆಐಎಡಿಬಿ (KIADB) ಭೂಸ್ವಾಧೀನಕ್ಕೆ ಅಧಿಸೂಚನೆಗಳನ್ನು ಹೊರಡಿಸಿರುವುದು ಗಮನಾರ್ಹ.