ಖಾಸಗಿ ಕ್ಯಾಬ್‌ ಬಿಟ್ಟು ಮೆಟ್ರೋ, ಬಸ್ ಹಿಡಿದ ಸಿಬ್ಬಂದಿ: ನಮ್ಮ ಮೆಟ್ರೋಗೆ ₹66 ಲಕ್ಷ ಭರ್ಜರಿ ಆದಾಯ ತಂದ ಬಯೋಕಾನ್ ಆಫರ್!

Published : Oct 10, 2026, 01:06 PM IST
Biocon and Namma Metro

ಸಾರಾಂಶ

ಬೆಂಗಳೂರಿನ ಟ್ರಾಫಿಕ್ ಮತ್ತು ವಾಯುಮಾಲಿನ್ಯ ತಡೆಗಟ್ಟಲು ಬಯೋಕಾನ್ ಸಂಸ್ಥೆ 'ಕಾರ್ಪೊರೇಟ್ ಕಮ್ಯೂಟರ್ ನಡ್ಜ್' ಎಂಬ ವಿನೂತನ ಪ್ರಯೋಗವನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಇದರಿಂದ 1,500ಕ್ಕೂ ಹೆಚ್ಚು ಉದ್ಯೋಗಿಗಳು ಸಾರ್ವಜನಿಕ ಸಾರಿಗೆಗೆ ಬದಲಾಗಿದ್ದು, ಕ್ಯಾಬ್ ಬಳಕೆ ಶೇ. 39ರಷ್ಟು ಕುಸಿದಿದೆ.

ಬೆಂಗಳೂರು (ಅ.10): ಸಿಲಿಕಾನ್ ಸಿಟಿ ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆ (Traffic Congestion) ಮತ್ತು ವಾಯು ಮಾಲಿನ್ಯಕ್ಕೆ ಶಮನ ನೀಡುವ ನಿಟ್ಟಿನಲ್ಲಿ ಪ್ರಮುಖ ಜೈವಿಕ ಔಷಧ ತಯಾರಿಕಾ ಸಂಸ್ಥೆ 'ಬಯೋಕಾನ್' (Biocon) ಹಮ್ಮಿಕೊಂಡಿದ್ದ ವಿನೂತನ ಪ್ರಯೋಗವೊಂದು ಅಭೂತಪೂರ್ವ ಯಶಸ್ಸು ಕಂಡಿದೆ. ಹೆಬ್ಬಗೋಡಿ ಮೂಲದ ಈ ಬಯೋ-ಫಾರ್ಮಾ ದೈತ್ಯ ಸಂಸ್ಥೆಯು ಜಾರಿಗೆ ತಂದ 'ಕಾರ್ಪೊರೇಟ್ ಕಮ್ಯೂಟರ್ ನಡ್ಜ್' (Corporate Commuter Nudge) ಕಾರ್ಯಕ್ರಮದ ಫಲವಾಗಿ, ಕೇವಲ ನಾಲ್ಕೇ ತಿಂಗಳಲ್ಲಿ 1,500ಕ್ಕೂ ಹೆಚ್ಚು ಉದ್ಯೋಗಿಗಳು ಖಾಸಗಿ ವಾಹನ ಹಾಗೂ ಕ್ಯಾಬ್‌ಗಳನ್ನು ತೊರೆದು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸಂಪೂರ್ಣವಾಗಿ ಬದಲಾಗಿದ್ದಾರೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಸಂಸ್ಥೆಯ ಉದ್ಯೋಗಿಗಳು ತಮ್ಮ ದಿನನಿತ್ಯದ ಕಚೇರಿ ಪ್ರಯಾಣಕ್ಕೆ ಬಸ್ ಅಥವಾ ಮೆಟ್ರೋದಂತಹ ಸಾರ್ವಜನಿಕ ಸಾರಿಗೆಯನ್ನು ಬಳಸಿದರೆ, ಅವರಿಗೆ ವಿಶೇಷ ಪ್ರೋತ್ಸಾಹಕಗಳನ್ನು (Incentives) ನೀಡುವ ನಿಯಮ ರೂಪಿಸಲಾಗಿತ್ತು. ಈ ಯೋಜನೆಯಿಂದಾಗಿ ನಮ್ಮ ಮೆಟ್ರೋ ನಿರ್ವಹಿಸುವ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಬರೋಬ್ಬರಿ ₹66 ಲಕ್ಷಗಳ ಹೆಚ್ಚುವರಿ ಆದಾಯ ಹರಿದುಬಂದಿದೆ.

ಕ್ಯಾಬ್ ಬಳಕೆ ಶೇ. 39 ಕುಸಿತ, ಬಿಎಂಟಿಸಿಗೂ ಲಕ್ಷಾಂತರ ಆದಾಯ

ಈ ಯೋಜನೆ ಜಾರಿಗೆ ಬರುವ ಮುನ್ನ ಬಯೋಕಾನ್‌ನ ಕನಿಷ್ಠ 1,396 ಸಿಬ್ಬಂದಿ ಕಚೇರಿಗೆ ಬರಲು ಖಾಸಗಿ ಕ್ಯಾಬ್‌ಗಳನ್ನು ಆಶ್ರಯಿಸಿದ್ದರು. ಆದರೆ ಪ್ರಸ್ತುತ ಈ ಸಂಖ್ಯೆ 858ಕ್ಕೆ ಕುಸಿದಿದ್ದು, ಕ್ಯಾಬ್ ಬಳಕೆಯಲ್ಲಿ ಬರೋಬ್ಬರಿ ಶೇ. 39 ರಷ್ಟು ಭಾರಿ ಇಳಿಕೆ ದಾಖಲಾಗಿದೆ.

ಇಷ್ಟೇ ಅಲ್ಲದೆ, ಈ ಯೋಜನೆಯಿಂದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ (BMTC) ಭಾರಿ ಲಾಭ ಪಡೆದಿದೆ. ಸಂಸ್ಥೆಯ ಸಿಬ್ಬಂದಿ ಹೊಸದಾಗಿ 253 ಬಿಎಂಟಿಸಿ ಬಸ್ ಪಾಸ್‌ಗಳನ್ನು ಪಡೆದಿದ್ದು, ಇದರಿಂದ ಬಿಎಂಟಿಸಿಗೆ ಸುಮಾರು ₹1.1 ಲಕ್ಷ ಹೆಚ್ಚುವರಿ ಆದಾಯ ಲಭಿಸಿದೆ. ವಿಶ್ವ ಸಂಪನ್ಮೂಲ ಸಂಸ್ಥೆ ಭಾರತ (WRI India) ಹಂಚಿಕೊಂಡಿರುವ ಅಧಿಕೃತ ಡೇಟಾ ಪ್ರಕಾರ, ಈ ಒಂದು ಪಾಸಿಟಿವ್ ಯೋಜನೆಯಿಂದ ಬರೋಬ್ಬರಿ 156 ಮೆಟ್ರಿಕ್ ಟನ್ ಇಂಗಾಲದ ಹೊರಸೂಸುವಿಕೆಯನ್ನು (Carbon Emissions) ತಡೆಯಲಾಗಿದ್ದು, ಸುಮಾರು 68,000 ಲೀಟರ್ ಇಂಧನ ಉಳಿತಾಯವಾಗಿದೆ.

ಎಲೆಕ್ಟ್ರಾನಿಕ್ಸ್ ಸಿಟಿಯಲ್ಲೂ ಸಾರ್ವಜನಿಕ ಸಾರಿಗೆ ಕ್ರಾಂತಿ

ಇದೇ ಮಾದರಿಯ ಯೋಜನೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ELCITA) ಜೊತೆಗೂಡಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಒಟ್ಟು 250 'ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್'ಗಳನ್ನು (NCMC Cards) ನೀಡಲಾಗಿದ್ದು, ಈ ಮೂಲಕ ಉದ್ಯೋಗಿಗಳು ಮೆಟ್ರೋದಲ್ಲಿ ಒಟ್ಟು 11,836 ಪ್ರಯಾಣಗಳನ್ನು ಪೂರ್ಣಗೊಳಿಸಿದ್ದಾರೆ.

100 ಕಂಪನಿಗಳು ಉದಾಹರಣೆಯಾದರೆ ಟ್ರಾಫಿಕ್ ಮುಕ್ತಿ - ಡಬ್ಲ್ಯೂಆರ್‌ಐ ಇಂಡಿಯಾ

ಈ ಯಶಸ್ಸಿನ ಕುರಿತು ಮಾತನಾಡಿದ ಡಬ್ಲ್ಯೂಆರ್‌ಐ ಇಂಡಿಯಾದ ಫೆಲೋ ಶ್ರೀನಿವಾಸ್ ಅಲವಿಲ್ಲಿ, "ನಗರದಲ್ಲಿ ಕೇವಲ ಸಾರ್ವಜನಿಕ ಸಾರಿಗೆ ಲಭ್ಯವಿದ್ದರೆ ಮಾತ್ರ ಸಾಲದು. ಸಿಬ್ಬಂದಿಯ ಮನಸ್ಥಿತಿ ಮತ್ತು ನಡವಳಿಕೆಯಲ್ಲಿ ಬದಲಾವಣೆ ತರಲು ಸೂಕ್ತ ಪ್ರೋತ್ಸಾಹಕಗಳು (Incentives) ಹಾಗೂ ಗೇಮಿಫಿಕೇಷನ್‌ಗಳಂತಹ ಕಾರ್ಯಕ್ರಮಗಳ ಅಗತ್ಯವಿದೆ. ಪರಿಸರ ಸ್ನೇಹಿ ಆಯ್ಕೆಗಳನ್ನು ಸುಲಭವಾಗಿ ಅಳವಡಿಸಿಕೊಳ್ಳಲು ಇದು ನೆರವಾಗುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

"ಬೆಂಗಳೂರಿನಲ್ಲಿ ಕನಿಷ್ಠ 100 ಬೃಹತ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಾರ್ವಜನಿಕ ಸಾರಿಗೆ ಬಳಸಲು ಈ ರೀತಿಯ ಪ್ರೋತ್ಸಾಹ ನೀಡಿದರೆ, ನಗರದ ಗಾಳಿಯ ಗುಣಮಟ್ಟ ಗಣನೀಯವಾಗಿ ಸುಧಾರಿಸುವುದಲ್ಲದೆ, ನರಕಯಾತನೆ ನೀಡುತ್ತಿರುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗಲಿದೆ" ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

Work From Home ಮನೆಯಿಂದಲೇ ಕೆಲಸ ಮಾಡಿ 4.46 ಲಕ್ಷ ರೂ ಕಳೆದುಕೊಂಡ ಬೆಂಗಳೂರಿನ ಮಹಿಳಾ ಟೆಕ್ಕಿ!
ಸುಸಜ್ಜಿತ ಕೇಂದ್ರ ಕಚೇರಿ ಧ್ವಂಸ ಮಾಡಿ ಹೊಸ ಕಟ್ಟಡ ನಿರ್ಮಾಣದ ದುಂದುವೆಚ್ಚ, ಬಿಡಿಎಗೆ ಹೈಕೋರ್ಟ್‌ ನೋಟಿಸ್‌!