
ಬೆಂಗಳೂರು (ಸೆ.04): ಸಿನಿಮಾ ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಭಾವಿ ರಾಜಕಾರಣಿಗಳ ಹೆಸರು ಹೇಳಿಕೊಂಡು ವಿವಾಹಿತ ಮಹಿಳೆಯರನ್ನು ಬಲೆಗೆ ಬೀಳಿಸಿ, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಖತರ್ನಾಕ್ ವಂಚಕರನ್ನು ರಾಜಧಾನಿ ಬೆಂಗಳೂರಿನ ಯಶವಂತಪುರ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಗಳನ್ನು ಸಂತೋಷ್ (34) ಹಾಗೂ ಪುನೀತ್ ಕುಮಾರ್ (25) ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 19 ಲಕ್ಷ ರೂಪಾಯಿ ಮೌಲ್ಯದ 130 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಸಾರ್ವಜನಿಕರನ್ನು, ವಿಶೇಷವಾಗಿ ಮಹಿಳೆಯರನ್ನು ವಂಚಿಸಲು ಸೋಶಿಯಲ್ ಮೀಡಿಯಾವನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದ್ದರು.
ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಪ್ರೊಫೈಲ್: ಇನ್‌ಸ್ಟಾಗ್ರಾಮ್‌ನಲ್ಲಿ ಸುಳ್ಳು ವಿವರಗಳೊಂದಿಗೆ ಫೇಕ್ ಖಾತೆಗಳನ್ನು ತೆರೆಯುತ್ತಿದ್ದ ಆರೋಪಿಗಳು, ಬೆಂಗಳೂರು, ಮೈಸೂರು ಮತ್ತು ದಾವಣಗೆರೆಯ ಪ್ರಭಾವಿ ರಾಜಕಾರಣಿಗಳ ಜೊತೆಗಿರುವಂತೆ ನಕಲಿ (Morphed/Edited) ಫೋಟೋಗಳನ್ನು ಸೃಷ್ಟಿಸಿ ಅಪ್‌ಲೋಡ್ ಮಾಡುತ್ತಿದ್ದರು.
ವಿವಾಹಿತ ಮಹಿಳೆಯರೇ ಪ್ರಮುಖ ಟಾರ್ಗೆಟ್: ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ವಿವಾಹಿತ ಮಹಿಳೆಯರಿಗೆ ಮೆಸೇಜ್ ಕಳುಹಿಸಿ ಪರಿಚಯ ಬೆಳೆಸಿಕೊಳ್ಳುತ್ತಿದ್ದರು.
ಸಿನಿಮಾದಲ್ಲಿ ಅವಕಾಶದ ಆಮಿಷ: ತಮಗೆ ಖ್ಯಾತ ಸಿನಿಮಾ ನಿರ್ದೇಶಕರು, ಪ್ರಮುಖ ನಿರ್ಮಾಪಕರು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು ಆಪ್ತರೆಂದು ಬಿಂಬಿಸಿಕೊಳ್ಳುತ್ತಿದ್ದರು. ಮುಂಬರುವ ದೊಡ್ಡ ಸಿನಿಮಾಗಳಲ್ಲಿ ನಟಿಸಲು ಉತ್ತಮ ಪಾತ್ರ ಕೊಡಿಸುವುದಾಗಿ ನಂಬಿಸುತ್ತಿದ್ದರು.
ಸಿನಿಮಾದಲ್ಲಿ ನಟಿಸುವ ಆಸೆಯಿಂದ ಇವರ ಬಲೆಗೆ ಬೀಳುತ್ತಿದ್ದ ವಿವಾಹಿತ ಮಹಿಳೆಯರನ್ನು 'ಆಡಿಷನ್' ಹಾಗೂ 'ಸ್ಕ್ರಿಪ್ಟ್ ಚರ್ಚೆ'ಯ ನೆಪವೊಡ್ಡಿ ನಗರದ ಪ್ರಮುಖ ಲಾಡ್ಜ್‌ಗಳಿಗೆ ಕರೆಯಿಸಿಕೊಳ್ಳುತ್ತಿದ್ದರು.
ಅಲ್ಲಿ ಮಹಿಳೆಯರಿಗೆ, 'ಸಿನಿಮಾದಲ್ಲಿ ನೀವು ಅವಿವಾಹಿತ ಯುವತಿಯ (Single Girl) ಪಾತ್ರ ಮಾಡಬೇಕಿದೆ. ಹಾಗಾಗಿ ಕುತ್ತಿಗೆಯಲ್ಲಿರುವ ತಾಳಿ, ಕರಿಮಣಿ ಸರ, ಬಳೆ ಹಾಗೂ ಇತರ ಆಭರಣಗಳನ್ನು ಕಳಚಿಡಬೇಕು. ಆಗಷ್ಟೇ ನಿಮ್ಮ ಲುಕ್ ಪಾತ್ರಕ್ಕೆ ಹೊಂದುವಂತೆ ಕಾಣುತ್ತದೆ' ಎಂದು ನಂಬಿಸುತ್ತಿದ್ದರು. ಮಹಿಳೆಯರು ಆಭರಣಗಳನ್ನು ಕಳಚಿ ಪಕ್ಕಕ್ಕಿಡುತ್ತಿದ್ದಂತೆಯೇ, ಅವರ ಗಮನ ಬೇರೆಡೆ ಸೆಳೆದು ಅಥವಾ ಚಳ್ಳೆಹಣ್ಣು ತಿನ್ನಿಸಿ ಆಭರಣಗಳೊಂದಿಗೆ ಈ ಖದೀಮರು ಪರಾರಿಯಾಗುತ್ತಿದ್ದರು.
ಸಂತ್ರಸ್ತ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಯಶವಂತಪುರ ಪೊಲೀಸರು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 19 ಲಕ್ಷ ರೂ. ಮೌಲ್ಯದ 130 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ಅಪರಿಚಿತ ವ್ಯಕ್ತಿಗಳು ಸಿನಿಮಾ ಅವಕಾಶ, ಧಾರಾವಾಹಿಗಳಲ್ಲಿ ಪಾತ್ರ ಅಥವಾ ರಾಜಕೀಯ ಪ್ರಭಾವದ ಮಾತುಗಳನ್ನಾಡಿದರೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ನಂಬಬಾರದು. ಯಾವುದೇ ಅಪರಿಚಿತರ ಮಾತನ್ನು ಕೇಳಿ ಲಾಡ್ಜ್ ಅಥವಾ ಏಕಾಂತ ಸ್ಥಳಗಳಿಗೆ ತೆರಳಿ ವಂಚನೆಗೊಳಗಾಗಬೇಡಿ ಎಂದು ಪೊಲೀಸರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.