8 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ! 43 ಲಕ್ಷ ರೂ. ಶಿಕ್ಷಣ ಸಾಲ ತೀರಿಸಿ ಮಗನಿಗೆ ಜೀವನದ ಪಾಠ ಕಲಿಸಿದ ಬೆಂಗಳೂರಿನ ಮಹಿಳೆ

Published : Nov 05, 2026, 08:55 AM IST
Bengaluru Woman Took Her Little Son to the Bank to Celebrate Becoming Debt-Free

ಸಾರಾಂಶ

ಬೆಂಗಳೂರಿನ 37 ವರ್ಷದ ಅರ್ಪಿತಾ ರಾವ್ ಅವರು ಎಂಟು ವರ್ಷಗಳ ಸತತ ಪರಿಶ್ರಮದಿಂದ 43 ಲಕ್ಷ ರೂ. ಶಿಕ್ಷಣ ಸಾಲವನ್ನು ಸಂಪೂರ್ಣವಾಗಿ ತೀರಿಸಿದ್ದಾರೆ. ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾಗಲೆಂದು 3 ವರ್ಷದ ಮಗನನ್ನೂ ಬ್ಯಾಂಕ್‌ಗೆ ಕರೆದುಕೊಂಡು ಹೋಗಿದ್ದಾರೆ. ಮಗನಿಗೆ ದುಡಿಮೆ ಮತ್ತು ಆರ್ಥಿಕ ಸ್ವಾವಲಂಬನೆಯ ಮಹತ್ವ ತಿಳಿಸುವುದು ಅವರ ಉದ್ದೇಶ.

8 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ! 43 ಲಕ್ಷ ರೂ. ಶಿಕ್ಷಣ ಸಾಲ ತೀರಿಸಿ ಮಗನಿಗೆ ಜೀವನದ ಪಾಠ ಕಲಿಸಿದ ಬೆಂಗಳೂರಿನ ಮಹಿಳೆ

ಸಾಲ ತೀರಿಸಿದ ದಿನ ಮಗನನ್ನೂ ಬ್ಯಾಂಕ್‌ಗೆ ಕರೆದುಕೊಂಡು ಹೋದ ತಾಯಿ!

ಉನ್ನತ ಶಿಕ್ಷಣ ಪಡೆಯುವುದು ಹಲವರ ಕನಸಾಗಿರುತ್ತದೆ. ಆದರೆ ಆ ಕನಸನ್ನು ನನಸಾಗಿಸಿಕೊಳ್ಳಲು ಪಡೆದ ಶಿಕ್ಷಣ ಸಾಲವನ್ನು ತೀರಿಸುವುದು ಅಷ್ಟು ಸುಲಭವಲ್ಲ. ಉದ್ಯೋಗ, ಕುಟುಂಬದ ಜವಾಬ್ದಾರಿ, ಆರ್ಥಿಕ ಸಂಕಷ್ಟ ಹೀಗೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಎಲ್ಲ ಕಷ್ಟಗಳ ನಡುವೆಯೂ ಬರೋಬ್ಬರಿ 43 ಲಕ್ಷ ರೂಪಾಯಿ ಶಿಕ್ಷಣ ಸಾಲವನ್ನು ಎಂಟು ವರ್ಷಗಳ ಪರಿಶ್ರಮದಿಂದ ತೀರಿಸಿರುವ ಬೆಂಗಳೂರಿನ ಮಹಿಳೆಯೊಬ್ಬರ ಕಥೆ ಇದೀಗ ಗಮನ ಸೆಳೆಯುತ್ತಿದೆ.

ಅವರೇ 37 ವರ್ಷದ ಅರ್ಪಿತಾ ರಾವ್. ಇವರು ತಮ್ಮ 3 ವರ್ಷದ ಮಗನನ್ನು ಜೊತೆಯಲ್ಲಿ ಕರೆದುಕೊಂಡು ಬ್ಯಾಂಕ್‌ಗೆ ತೆರಳಿ ಶಿಕ್ಷಣ ಸಾಲವನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ. ಈ ವಿಶೇಷ ಕ್ಷಣವನ್ನು ಮಗನೂ ನೋಡಬೇಕು ಎಂಬುದು ಅವರ ಆಸೆಯಾಗಿತ್ತು.

26 ಲಕ್ಷ ರೂ. ಸಾಲ 43 ಲಕ್ಷಕ್ಕೆ ಏರಿಕೆ!

ಅರ್ಪಿತಾ ರಾವ್ ಅವರು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ (ISB) ಎಂಬಿಎ ವ್ಯಾಸಂಗ ಮಾಡಲು ಸುಮಾರು 26 ಲಕ್ಷ ರೂಪಾಯಿ ಶಿಕ್ಷಣ ಸಾಲ ಪಡೆದಿದ್ದರು. ಬಡ್ಡಿ ಸೇರಿದಂತೆ ಈ ಸಾಲದ ಮೊತ್ತ ಸುಮಾರು 43 ಲಕ್ಷ ರೂಪಾಯಿಗೆ ಏರಿಕೆಯಾಗಿತ್ತು.

ಕೆಲವು ಸಹಪಾಠಿಗಳು ಕುಟುಂಬದ ಆರ್ಥಿಕ ನೆರವಿನಿಂದ ಕೇವಲ ಎರಡು ಅಥವಾ ನಾಲ್ಕು ವರ್ಷಗಳಲ್ಲಿ ಸಾಲ ತೀರಿಸಿದ್ದರು. ಆದರೆ ಅರ್ಪಿತಾ ಅವರ ಪರಿಸ್ಥಿತಿ ಭಿನ್ನವಾಗಿತ್ತು. ಅವರಿಗೆ 18 ವರ್ಷವಾಗಿದ್ದಾಗಲೇ ತಂದೆಯಿಂದ ಆರ್ಥಿಕ ಬೆಂಬಲ ನಿಂತಿತ್ತು. 22ನೇ ವಯಸ್ಸಿನಿಂದಲೇ ದುಡಿಯಲು ಆರಂಭಿಸಿದ ಅವರು ತಮ್ಮ ಜವಾಬ್ದಾರಿಗಳನ್ನು ತಾವೇ ನಿಭಾಯಿಸುತ್ತಿದ್ದರು.

ಉದ್ಯೋಗದಲ್ಲಿ ಏರಿಳಿತ, ತಾಯ್ತನದ ಸಮಯದಲ್ಲೂ ಸಂಕಷ್ಟ!

ಸಾಲ ಮರುಪಾವತಿಯ ಹಾದಿಯಲ್ಲಿ ಅರ್ಪಿತಾ ಹಲವು ಸವಾಲುಗಳನ್ನು ಎದುರಿಸಿದರು. ಉದ್ಯೋಗ ಬದಲಾವಣೆಯ ಸಂದರ್ಭದಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಬೇಕಾಯಿತು. ಸ್ವಂತ ಉದ್ಯಮ ಆರಂಭಿಸುವ ಪ್ರಯತ್ನವೂ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.

ಮಗುವಿನ ಜನನದ ಸಮಯದಲ್ಲಿ ಸುಮಾರು ಒಂದು ವರ್ಷ ಆದಾಯವಿಲ್ಲದೆ ಕಳೆಯಬೇಕಾಯಿತು. ಕೆಲಸ ಮಾಡುತ್ತಿದ್ದ ಸ್ಟಾರ್ಟ್‌ಅಪ್ ಸಂಸ್ಥೆಯಿಂದ ಆರು ತಿಂಗಳ ಮಾತೃತ್ವದ ಪ್ರಯೋಜನಗಳ ಹಣವೂ ಸಿಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇಷ್ಟೆಲ್ಲ ಕಷ್ಟಗಳ ನಡುವೆಯೂ ಸಾಲದ ಕಂತುಗಳನ್ನು ಪಾವತಿಸುವುದನ್ನು ಮುಂದುವರಿಸಿದರು.

ಮಗನಿಗೆ ಆರ್ಥಿಕ ಸ್ವಾವಲಂಬನೆಯ ಪಾಠ!

ಎಂಟು ವರ್ಷಗಳ ಬಳಿಕ ಸಾಲ ಸಂಪೂರ್ಣ ತೀರಿಸಿದ ಅರ್ಪಿತಾ, ಮಗನನ್ನು ಬ್ಯಾಂಕ್‌ಗೆ ಕರೆದುಕೊಂಡು ಹೋಗಿದ್ದರ ಹಿಂದೆಯೂ ಒಂದು ಉದ್ದೇಶವಿತ್ತು. ದುಡಿಮೆಯ ಮೌಲ್ಯ, ಹಣಕಾಸಿನ ಸ್ವಾವಲಂಬನೆ ಮತ್ತು ಸ್ವಂತ ಬದುಕನ್ನು ಕಟ್ಟಿಕೊಳ್ಳುವ ಧೈರ್ಯವನ್ನು ಮಗ ಚಿಕ್ಕ ವಯಸ್ಸಿನಿಂದಲೇ ಅರ್ಥಮಾಡಿಕೊಳ್ಳಬೇಕು ಎಂಬುದು ಅವರ ಆಶಯ.

ಇದೀಗ ಸಾಲಮುಕ್ತರಾಗಿರುವ ಅರ್ಪಿತಾ ತಮ್ಮದೇ ಕೋಚಿಂಗ್ ಮತ್ತು ಸಲಹಾ ವೃತ್ತಿಯನ್ನು ಬೆಳೆಸುವತ್ತ ಗಮನ ಹರಿಸಿದ್ದಾರೆ. ಅವರ ಈ ಸಾಧನೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

PREV
Read more Articles on
click me!

Recommended Stories

ಬೆಂಗಳೂರಲ್ಲಿ ಶೀಘ್ರವೇ ಗ್ರೀನ್ ಎಸ್‌ಎಂ ಸೇವೆ, ಕೆಂಗೇರಿ ಬಳಿ ಸದ್ದಿಲ್ಲದೆ ಸಾಲುಕಟ್ಟಿ ನಿಂತ ಕಾರು, ಕ್ಯಾಬ್ ಚಾಲಕರಲ್ಲಿ ಆತಂಕ!
ಗಿಜಿಗುಡುವ ಬೆಂಗಳೂರಿನಲ್ಲಿ ಪ್ರಶಾಂತ ಜೀವನ: ಯಲಹಂಕದಲ್ಲಿ ತಲೆ ಎತ್ತುತ್ತಿದೆ ವಿನೂತನ 'ಲೋ-ಡೆನ್ಸಿಟಿ' ವಸತಿ ಯೋಜನೆ