
ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಬೆಂಗಳೂರು ಟರ್ಫ್ ಕ್ಲಬ್ ವ್ಯಾಪ್ತಿಯ ರೇಸ್ ಕೋರ್ಸ್ ಭೂಮಿಯನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಉದ್ದೇಶಗಳಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ವರದಿಯಾಗಿದೆ. ಸರ್ಕಾರಿ ಇಲಾಖೆಗಳ ಆಡಳಿತಕ್ಕೆ ಮತ್ತಷ್ಟು ವೇಗ ನೀಡಲು, ಈ ಜಾಗದಲ್ಲಿ ಬೃಹತ್ ಬಹುಮಹಡಿ ಸರ್ಕಾರಿ ಕಚೇರಿಗಳ ಸಂಕೀರ್ಣವನ್ನು ನಿರ್ಮಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು,ಈ ಹಿನ್ನೆಲೆಯಲ್ಲಿ ಭೂಮಿಯನ್ನು ಮರಳಿ ಪಡೆದಿದೆ ಎಂದು ಮೂಲಗಳು ತಿಳಿಸಿವೆ ಎಂದು ಖಾಸಗಿ ವೆಬ್‌ತಾಣ ವರದಿ ಮಾಡಿದೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯ ನಿರ್ಣಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯ ಬಳಿಕ ಈ ಯೋಜನೆ ವೇಗ ಪಡೆದಿದೆ. ರೇಸ್ ಕೋರ್ಸ್ ಆವರಣದ ಒಟ್ಟು 79.14 ಎಕರೆ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ಪಡೆಯುತ್ತಿದ್ದು, ನಗರದ ವಿವಿಧೆಡೆ ಹರಿದು ಹಂಚಿಹೋಗಿರುವ ಪ್ರಮುಖ ಸರ್ಕಾರಿ ಕಚೇರಿಗಳನ್ನೆಲ್ಲ ಒಂದೇ ಸೂರಿನಡಿ ತರುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎನ್ನಲಾಗಿದೆ.
ನೂತನ ಬಹುಮಹಡಿ ಕಟ್ಟಡದ ವಿನ್ಯಾಸ ಮತ್ತು ಅಂದಾಜು ವೆಚ್ಚದ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲವಾದರೂ, ಇಲಾಖೆಗಳ ನಡುವಿನ ಸಮನ್ವಯ ಮತ್ತು ತ್ವರಿತ ಮಾಹಿತಿ ವಿನಿಮಯಕ್ಕೆ ಈ ಸಂಕೀರ್ಣ ನೆರವಾಗಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹಲವು ಪ್ರಮುಖ ಸರ್ಕಾರಿ ಕಚೇರಿಗಳು ಒಂದೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುವ ಮಾದರಿಯನ್ನು, ಸಂಚಾರ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನಲ್ಲೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಉದ್ದೇಶಿತ ನೂತನ ಸಂಕೀರ್ಣದಲ್ಲಿ ಸಾರಿಗೆ, ಆರೋಗ್ಯ, ಇಂಧನ ಇಲಾಖೆಗಳು ಸೇರಿದಂತೆ ವಿವಿಧ ನಿಗಮ-ಮಂಡಳಿಗಳ ಕಚೇರಿಗಳು ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಈ ಕಚೇರಿಗಳು ಹೊಸ ಸಂಕೀರ್ಣಕ್ಕೆ ಸ್ಥಳಾಂತರಗೊಂಡ ಬಳಿಕ, ಸದ್ಯ ಅವು ಕಾರ್ಯನಿರ್ವಹಿಸುತ್ತಿರುವ ಹಳೆಯ ಸರ್ಕಾರಿ ಕಟ್ಟಡಗಳನ್ನು ಖಾಸಗಿ ಕಂಪನಿಗಳಿಗೆ ಬಾಡಿಗೆ ಅಥವಾ ಗುತ್ತಿಗೆಗೆ ನೀಡಿ ಆದಾಯ ಗಳಿಸುವ ಉದ್ದೇಶವಿದೆ. ಅಲ್ಲದೆ, ಪ್ರಸ್ತುತ ಖಾಸಗಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಕೆಲವು ಮಂಡಳಿಗಳಿಗೆ ಈ ಹಳೆಯ ಕಟ್ಟಡಗಳನ್ನು ಹಂಚಿಕೆ ಮಾಡುವ ಚಿಂತನೆಯೂ ಇದೆ ಎನ್ನಲಾಗಿದೆ.
ಸರ್ಕಾರಿ ನೌಕರರು ಮತ್ತು ಸಾರ್ವಜನಿಕರು ಕಚೇರಿಗಳಿಗೆ ಸುಲಭವಾಗಿ ತಲುಪಲು ಮೆಟ್ರೋ ನಿಲ್ದಾಣಗಳ ಸಮೀಪದಲ್ಲೇ ಕಚೇರಿಗಳಿರುವುದು ಅತ್ಯಂತ ಅನುಕೂಲಕರ. ನೂತನ ಸಂಕೀರ್ಣಕ್ಕೆ ಭೇಟಿ ನೀಡುವವರ ಅನುಕೂಲಕ್ಕಾಗಿ ಸಮೀಪದ ವಿಧಾನಸೌಧ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ವಿಶೇಷ ಫೀಡರ್ ಬಸ್ ಸೇವೆಗಳನ್ನು ಆರಂಭಿಸುವ ಯೋಜನೆಯೂ ಸರ್ಕಾರದ ಮುಂದಿದೆಯಂತೆ.
ಇದರ ಜೊತೆಗೆ, ಇತ್ತೀಚೆಗೆ ನಡೆದ ಸಭೆಯಲ್ಲಿ ನ್ಯಾಯಾಂಗ ಇಲಾಖೆಯ ಬೇಡಿಕೆಯಂತೆ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು 7ರಿಂದ 8 ಎಕರೆ ಭೂಮಿಯನ್ನು ಮೀಸಲಿಡಲು ನಿರ್ಧರಿಸಲಾಗಿದೆ. ಇದು ಪ್ರಸ್ತುತ ಇರುವ ಕರ್ನಾಟಕ ಹೈಕೋರ್ಟ್ ಕಟ್ಟಡದ ವಿಸ್ತರಣಾ ಭಾಗವಾಗಿ ಕಾರ್ಯನಿರ್ವಹಿಸಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕಳೆದ ನವೆಂಬರ್ 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ಟರ್ಫ್ ಕ್ಲಬ್‌ಗೆ ಕೇವಲ 4 ಎಕರೆ ಭೂಮಿಯನ್ನು ಮುಂದಿನ 30 ವರ್ಷಗಳ ಕಾಲ ಗುತ್ತಿಗೆಗೆ ವಿಸ್ತರಿಸಿ, ಉಳಿದ 79.14 ಎಕರೆ ಜಮೀನನ್ನು ಹಿಂಪಡೆಯಲು ಸರ್ಕಾರ ತೀರ್ಮಾನಿಸಿತ್ತು. ಅದರಂತೆ ಈಗ ಹಿಂಪಡೆದಿರುವ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ವಿಶೇಷವೆಂದರೆ, ಈ ಆವರಣದಲ್ಲಿರುವ ರಾಜ್ಯ ಪುರಾತತ್ವ ಇಲಾಖೆಯ ಸಂರಕ್ಷಿತ ಪಾರಂಪರಿಕ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗದಂತೆ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಕುದುರೆ ರೇಸಿಂಗ್ ಚಟುವಟಿಕೆಗಳನ್ನು ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿರುವ 110 ಎಕರೆ ವಿಸ್ತೀರ್ಣದ ಸ್ಟಡ್ ಫಾರ್ಮ್‌ಗೆ ಸ್ಥಳಾಂತರಿಸುವುದಾಗಿ ಸರ್ಕಾರ ಈ ಹಿಂದೆಯೇ ಘೋಷಿಸಿತ್ತು.
ಮೂರು ವರ್ಷಗಳ ಹಿಂದೆಯೇ ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ಏಕೀಕೃತ ಸರ್ಕಾರಿ ಕಚೇರಿ ಸಂಕೀರ್ಣ ನಿರ್ಮಿಸಲು ಸರ್ಕಾರ ಬಯಸಿತ್ತಾದರೂ, ಸೂಕ್ತ ಭೂಮಿಯ ಕೊರತೆ ಎದುರಾಗಿತ್ತು ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈಗ 79 ಎಕರೆ ವಿಶಾಲ ಭೂಮಿ ಲಭ್ಯವಿರುವುದರಿಂದ ಬೇರೆಡೆ ಜಾಗ ಹುಡುಕುವ ಅಗತ್ಯವಿಲ್ಲ. ಈ ಜಾಗದಲ್ಲಿ ಬಹುಮಹಡಿ ಸರ್ಕಾರಿ ಕಟ್ಟಡಗಳ ಜೊತೆಗೆ ಸಾರ್ವಜನಿಕರ ವಾಯುವಿಹಾರಕ್ಕೆ ಬೃಹತ್ ಹಸಿರು ಉದ್ಯಾನವನ ನಿರ್ಮಿಸುವುದು ಸೇರಿದಂತೆ ಹಲವು ಉತ್ತಮ ಆಯ್ಕೆಗಳು ಸರ್ಕಾರದ ಮುಂದಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.