
ಬೆಂಗಳೂರು (ಜು.24): ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ನಡುವಿನ ಸಂಚಾರ ಕಾರಿಡಾರ್ (ರಸ್ತೆ ಮಾರ್ಗ) ದೇಶದಲ್ಲೇ ಅತ್ಯಂತ ಜನಪ್ರಿಯ ನಗರಗಳ ನಡುವಿನ (ಇಂಟರ್‌ಸಿಟಿ) ಪ್ರಯಾಣ ಮಾರ್ಗಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಜಾಗತಿಕ ಟ್ಯಾಕ್ಸಿ ಸೇವಾ ಸಂಸ್ಥೆ 'ಉಬರ್' (Uber) ಬಿಡುಗಡೆ ಮಾಡಿರುವ 'ಇಂಟರ್‌ಸಿಟಿ ಟ್ರಾವೆಲ್ ಇಂಡೆಕ್ಸ್' (Intercity Travel Index) ವರದಿಯಲ್ಲಿ ಬೆಂಗಳೂರು-ಮೈಸೂರು ಮಾರ್ಗವು ದೇಶದಲ್ಲಿಯೇ ಮೂರನೇ ಸ್ಥಾನ ಪಡೆದುಕೊಂಡಿದೆ.
2026 ರ ಏಪ್ರಿಲ್‌ನಿಂದ ಜೂನ್‌ವರೆಗಿನ ಉಬರ್ ಇಂಟರ್‌ಸಿಟಿ ಪ್ರಯಾಣದ ಒಟ್ಟು ಅಂಕಿ-ಅಂಶಗಳನ್ನು ಆಧರಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ದೇಶದಲ್ಲೇ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ಬ್ಯುಸಿ ಇಂಟರ್‌ಸಿಟಿ ಮಾರ್ಗಗಳಲ್ಲಿ ಮುಂಬೈ-ಪುಣೆ ಮೊದಲ ಸ್ಥಾನದಲ್ಲಿದ್ದರೆ, ದೆಹಲಿ-ಆಗ್ರಾ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು-ಮೈಸೂರು (3ನೇ ಸ್ಥಾನ), ಲಕ್ನೋ-ಕಾನ್ಪುರ (4ನೇ ಸ್ಥಾನ) ಮತ್ತು ಅಹಮದಾಬಾದ್-ವಡೋದರಾ (5ನೇ ಸ್ಥಾನ) ನಂತರದ ಸ್ಥಾನಗಳಲ್ಲಿವೆ.
ಪ್ರಮುಖ ನಗರಗಳ ನಡುವಿನ ಸಂಚಾರದ ಪ್ರಗತಿಯ ದೃಷ್ಟಿಯಿಂದಲೂ ಬೆಂಗಳೂರು-ಮೈಸೂರು ಕಾರಿಡಾರ್ ಬೃಹತ್ ಬೆಳವಣಿಗೆಯನ್ನು ದಾಖಲಿಸಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಇಂಟರ್‌ಸಿಟಿ ಮಾರ್ಗಗಳ ಪಟ್ಟಿಯಲ್ಲಿ ಅಹಮದಾಬಾದ್-ವಡೋದರಾ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು-ಮೈಸೂರು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ದೆಹಲಿ-ಡೆಹ್ರಾಡೂನ್, ದೆಹಲಿ-ಚಂಡೀಗಢ ಮತ್ತು ಚೆನ್ನೈ-ಪುದುಚೇರಿ ಮಾರ್ಗಗಳು ನಂತರದ ಸ್ಥಾನಗಳಲ್ಲಿವೆ.
ಉಬರ್ ಮೂಲಕ ಪ್ರಯಾಣಿಸುವ ಪ್ರವಾಸಿಗರ ನೆಚ್ಚಿನ ಪಾರಂಪರಿಕ ಹಾಗೂ ಧಾರ್ಮಿಕ (Heritage and Pilgrimage) ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮೈಸೂರು ದೇಶದಲ್ಲೇ ಎರಡನೇ ಅತ್ಯಂತ ಜನಪ್ರಿಯ ನಗರವಾಗಿ ಹೊರಹೊಮ್ಮಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶದ 'ಆಗ್ರಾ' ಮೊದಲ ಸ್ಥಾನದಲ್ಲಿದ್ದರೆ, ಪ್ರಯಾಗ್‌ರಾಜ್, ಅಜ್ಮೇರ್ ಹಾಗೂ ಉದಯಪುರ ನಗರಗಳು ಮೈಸೂರಿನ ನಂತರದ ಸ್ಥಾನಗಳನ್ನು ಪಡೆದಿವೆ.
ಇನ್ನು ಉಬರ್ ಸಂಸ್ಥೆಯ ವರದಿಯ ಪ್ರಕಾರ, ಬೆಂಗಳೂರಿನಿಂದ ಹೊರಡುವ ಪ್ರಯಾಣಿಕರು ಅತಿ ಹೆಚ್ಚು ಬುಕ್ ಮಾಡುವ 'ರೌಂಡ್-ಟ್ರಿಪ್' (ಹೋಗಿ ಬರುವ) ಪ್ರವಾಸಿ ತಾಣಗಳಲ್ಲಿ ನಂದಿ ಬೆಟ್ಟ, ಮಾಗಡಿ, ಧರ್ಮಪುರಿ (ತಮಿಳುನಾಡು) ಮತ್ತು ಮಂಡ್ಯ ಪ್ರಮುಖವಾಗಿ ಸೇರಿವೆ.