ಬೆಂಗಳೂರು ಮಳೆಗೆ ಅವಾಂತರ, ಮೆಟ್ರೋ ಹಳಿ ಮೇಲೆ ಬಿದ್ದ ಮರದಿಂದ ರೈಲು ಸೇವೆ ಸ್ಥಗಿತ!

By Chethan Kumar  |  First Published Jun 2, 2024, 8:36 PM IST

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳು ನದಿಯಂತಾಗಿದ್ದರೆ, ಮರಗಳು ಧರೆಗುರುಳಿದೆ. ಎಂಜಿ ರಸ್ತೆ ಮತ್ತು ಟ್ರಿನಿಟಿ ನಡುವೆ ಮೆಟ್ರೋ ಹಳಿ ಮೇಲೆ ರಸ್ತೆ ಬಿದ್ದ ಪರಿಣಾಮ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
 


ಬೆಂಗಳೂರು(ಜೂನ್.02) ಮುಂಗಾರು ಮಳೆ ಅಬ್ಬರಿಸಲು ಆರಂಭಿಸಿದೆ. ಕಳೆದೆರಡು ದಿನದಿಂದ ನಗರಲ್ಲಿ ಭಾರಿ ಮಳೆಯಾಗುತ್ತಿದೆ. ಇಂದು ಸಂಜೆ ಸುರಿದ ಮಳೆಗೆ ಬೆಂಗಳೂರಿನ ರಸ್ತೆಗಳು ನದಿಯಂತಾಗಿದೆ. ಹಲವೆಡೆ ಮರಗಳು ಧರೆಗುರುಳಿ ಟ್ರಾಫಿಕ್ ಜಾಮ್ ಸಮಸ್ಯೆ ಸೃಷ್ಟಿಯಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಇತ್ತ ಎಂಜಿ ರಸ್ತೆ ಹಾಗೂ ಟ್ರಿನಿಟಿ ನಡುವೆ ಬೃಹತ್ ಗಾತ್ರದ ಮರ ಮೆಟ್ರೋ ಹಳಿ ಮೇಲೆ ಬಿದ್ದಿದೆ. ಹೀಗಾಗಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ. 

ಸಂಜೆ 7 ಗಂಟೆ ಸುಮಾರಿಗ ಆರಂಭಗೊಂಡ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಭಾರೀ ಮಳೆಯಿಂದಾಗಿ ಎಂಜಿ ರಸ್ತೆ ಮತ್ತು ಟ್ರಿನಿಟಿ ನಡುವಿನ ವಯಡಕ್ಟ್ ಟ್ರ್ಯಾಕ್‌ ಮೇಲೆ ಮರ ಬಿದ್ದಿದೆ. ಹೀಗಾಗಿ ಪರ್ಪಲ್ ಲೈನ್ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಆದರೆ ಇಂದಿರಾನಗರ ಮತ್ತು ವೈಟ್‌ಫೀಲ್ಡ್ ಶಾರ್ಟ್ ಲೂಪ್ ಚಾಲನೆಯಲ್ಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.ಸದ್ಯ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

Tap to resize

Latest Videos

ಬೆಂಗಳೂರಿನಲ್ಲಿ ಮಳೆ ಅವಾಂತರ: ನದಿಯಂತಾದ ರಸ್ತೆಗಳು..ಮನೆಗಳಿಗೆ ನುಗ್ಗಿದ ನೀರು

ಬೆಂಗಳೂರಿನ ಹಲವೆಡೆ ಮರಗಳು ಧರೆಗುರುಳಿದೆ. ರಾಮಕೃಷ್ಣ ಆಶ್ರಮದ ಬಳಿ ಬೃಹತ್ ಮರ ಧರೆಗುಳಿದೆ. ಹಲವು ಕಾರುಗಳ ಜಖಂ ಗೊಂಡಿದೆ. ತುಮಕೂರಿನಿಂದ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದ ಐ10 ಕಾರಿನ ಮೇಲೆ ಮರ ಬಿದ್ದಿದೆ. ಕಾರಿನಲ್ಲಿ ಬಂದಿದ್ದ ಇಬ್ಬರು ವೈದ್ಯರು ಕಾರ್ಯಕ್ರಮಕ್ಕೆ ತೆರಳಿದ್ದರೆ, ಚಾಲಕ ಕಾರಿನಲ್ಲೇ ಉಳಿದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಊಟ ಮಾಡಲು ಕಾರಿನಿಂದ ಇಳಿದು ಹೊಟೆಲ್‌ಗೆ ತೆರಳಿದ್ದರು. ಮಳೆಯಿಂದಾಗಿ ಹೊಟೆಲ್‌ನಲ್ಲಿ ಸಿಲುಕಿಕೊಂಡಿದ್ದರು. ಇದೇ ವೇಳೆ ಕಾರಿನ ಮೇಲೆ ಮರ ಬಿದ್ದಿದೆ.  

ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಭಾರಿ ಮಳೆಯಿಂದ ಮರ ಆಟೋ ಮೇಲೆ ಬಿದ್ದಿದೆ. ಅಟೋ ಸಂಪೂರ್ಣ ಜಖಂಗೊಂಡಿದೆ. ಹುಳಿಮಾವು ರಸ್ತೆಯಲ್ಲೂ ಮರಗಳು ಧರೆಗುರುಳಿದೆ. ಪಾನಿಪೂರಿ ಅಂಗಡಿ ಮೇಲೆ ಬಿದ್ದ ಪರಿಣಾಮ ಅಂಗಡಿ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಟ್ರಾಫಿಕ್ ಜಾಮ್ ಸಂಭವಿಸಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ 10ಕ್ಕೂ ಹೆಚ್ಚು ಬೈಕ್‌ಗಳು ಜಖಂ ಆಗಿದೆ.  

ಮಾಗಡಿ ರಸ್ತೆ ಕೆ ಪಿ ಅಗ್ರಹಾರದಲ್ಲಿ ಭಾರಿ ಮಳೆಯಿಂದ ನೀರು ಮನೆಗಳಿಗೆ ನುಗ್ಗಿದೆ.  ಕಸ್ತೂರಿ ನಗರ ಕಡೆಯಿಂದ M M T ಜಂಕ್ಷನ್ (ಕೆ ಆರ್ ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಎಂ. ಎಂ. ಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿರುವುದರಿಂದ ವೈಟ್‌ಫೀಲ್ಡ್‌,  ಮಹದೇವಪುರ ಮತ್ತು ಕೆ ಆರ್ ಪುರ ಕಡೆಗೆ ಹೋಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ.
ಕರ್ನಾಟಕಕ್ಕೆ ಮುಂಗಾರು ಪ್ರವೇಶ: ಮಳೆ ಶುರು

click me!