ವೃದ್ಧೆಯ ₹50 ಲಕ್ಷ ಎಗರಿಸಿದ ಬ್ಯಾಂಕ್‌ ವ್ಯವಸ್ಥಾಪಕಿ: ಎಫ್‌ಡಿ ನವೀಕರಿಸುವ ನೆಪದಲ್ಲಿ ಮೋಸ, ಸ್ನೇಹಿತನ ಖಾತೆಗೆ ಹಣ

ಬೆಂಗಳೂರಿನಲ್ಲಿ ಎಫ್‌ಡಿ ನವೀಕರಣದ ನೆಪದಲ್ಲಿ ವೃದ್ಧೆಯ ಖಾತೆಯಿಂದ 50 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Bengaluru Girinagar IndusInd Bank Deputy Manager Meghana arrest

ಬೆಂಗಳೂರು : ನಿಶ್ಚಿತ ಠೇವಣಿ(ಎಫ್‌ಡಿ) ಬಾಂಡ್‌ ನವೀಕರಿಸುವ ನೆಪದಲ್ಲಿ ವೃದ್ಧೆಯ ಉಳಿತಾಯ ಖಾತೆಯಿಂದ ಸ್ನೇಹಿತನ ಬ್ಯಾಂಕ್‌ ಖಾತೆಗೆ ₹50 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದ ಬ್ಯಾಂಕ್‌ವೊಂದರ ಡೆಪ್ಯೂಟಿ ಮ್ಯಾನೇಜರ್‌ ಸೇರಿ ನಾಲ್ವರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಿರಿನಗರದ ಇಂಡಸ್‌ ಇಂಡ್‌ ಬ್ಯಾಂಕಿನ ಡೆಪ್ಯೂಟಿ ಮ್ಯಾನೇಜರ್‌ ಮೇಘನಾ, ಆಕೆಯ ಪತಿ ಶಿವಪ್ರಸಾದ್‌, ಸ್ನೇಹಿತ ವರದರಾಜು ಹಾಗೂ ಅನ್ವರ್‌ ಗೌಸ್‌ ಎಂಬುವವರನ್ನು ಬಂಧಿಸಿ ₹50 ಲಕ್ಷ ಜಪ್ತಿ ಮಾಡಲಾಗಿದೆ. ಗಿರಿನಗರ ನಿವಾಸಿ ಸಾವಿತ್ರಮ್ಮ(76) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

ಪ್ರಕರಣದ ವಿವರ:
ದೂರುದಾರೆ ಸಾವಿತ್ರಮ್ಮ ಮತ್ತು ಅವರ ಪತಿ ಬಸವರಾಜಯ್ಯ ಗಿರಿನಗರ ಇಂಡಸ್‌ ಇಂಡ್‌ ಬ್ಯಾಂಕ್‌ನಲ್ಲಿ ಜಂಟಿ ಉಳಿತಾಯ ಖಾತೆ ತೆರೆದಿದ್ದರು. ವೃದ್ಧರಾಗಿರುವುದರಿಂದ ಖಾತೆಯಿಂದ ಹಣ ತೆಗೆಯಲು ಇಬ್ಬರು ಸಹಿ ಮಾಡುವ ಮುಖಾಂತರ ವ್ಯವಹರಿಸುತ್ತಿದ್ದರು. ವೃದ್ಧ ದಂಪತಿ ಈ ಜಂಟಿ ಉಳಿತಾಯ ಖಾತೆ ಜತೆಗೆ ನಿಶ್ಚಿತ ಠೇವಣಿ(ಎಫ್‌ಡಿ) ಖಾತೆಯನ್ನೂ ಹೊಂದಿದ್ದರು. ಬ್ಯಾಂಕ್‌ಗೆ ಬಂದಾಗಲೆಲ್ಲಾ ವ್ಯವಹರಿಸಲು ಬ್ಯಾಂಕ್‌ನ ಅಧಿಕಾರಿ ಮತ್ತು ಸಿಬ್ಬಂದಿಯ ನೆರವು ಪಡೆಯುತ್ತಿದ್ದರು. ಡೆಪ್ಯೂಟಿ ಮ್ಯಾನೇಜರ್‌ ಮೇಘನಾ ವೃದ್ಧ ದಂಪತಿಗೆ ನೆರವಾಗಿದ್ದರು. ವಿಶ್ವಾಸದಿಂದ ಮಾತನಾಡಿಸುತ್ತಿದ್ದ ಮೇಘನಾ ಬಳಿ ವೃದ್ಧ ದಂಪತಿ ಮನೆಯ ಎಲ್ಲ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು.

ಖಾತೆಯಲ್ಲಿ ₹1 ಕೋಟಿ:

ಕಳೆದ ಜನವರಿಯಲ್ಲಿ ಸಾವಿತ್ರಮ್ಮ ಅವರ ಪತಿಗೆ ಸೇರಿದ್ದ ಚಾಮರಾಪೇಟೆಯ ಮನೆಯನ್ನು ಮಾರಾಟ ಮಾಡಿದ್ದರು. ಮನೆ ಖರೀದಿಸಿದವರು ₹1 ಕೋಟಿಯನ್ನು ಸಾವಿತ್ರಮ್ಮ ದಂಪತಿಯ ಜಂಟಿ ಉಳಿತಾಯ ಖಾತೆಗೆ ಜಮೆ ಮಾಡಿದ್ದರು. ಹೀಗಾಗಿ ಮೇಘನಾಗೆ ಸಾವಿತ್ರಮ್ಮ ಖಾತೆಯಲ್ಲಿ ₹1 ಕೋಟಿ ಇರುವ ವಿಚಾರ ಗೊತ್ತಾಗಿತ್ತು.

ಫೆ.12ರಂದು ಸಾವಿತ್ರಮ್ಮ ತಮ್ಮ ಪುತ್ರಿಯ ಜತೆಗೆ ಬ್ಯಾಂಕ್‌ಗೆ ಹೋಗಿದ್ದಾರೆ. ಈ ವೇಳೆ ಡೆಪ್ಯೂಟಿ ಮ್ಯಾನೇಜರ್‌ ಮೇಘನಾ ನಿಮ್ಮ ಎರಡು ಎಫ್‌ಡಿ ಬಾಂಡ್‌ಗಳ ಅವಧಿ ಮುಗಿದಿದೆ. ಇದನ್ನು ಹಿಂಪಡೆದು ಹೊಸದಾಗಿ ಎಫ್‌ಡಿ ಇರಿಸಿದರೆ, ಹೆಚ್ಚಿನ ಲಾಭಾಂಶ ಬರಲಿದೆ ಎಂದು ಸಾವಿತ್ರಮ್ಮಗೆ ತಿಳಿಸಿದ್ದಾರೆ. ಎಫ್‌ಡಿ ಬಾಂಡ್‌ ನವೀಕರಣಕ್ಕೆ ಅಗತ್ಯವಿರುವ ದಾಖಲೆಗಳು ಹಾಗೂ ಚೆಕ್‌ಗಳನ್ನು ಮನೆಗೆ ಬಂದು ಪಡೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ.

ಎಫ್‌ಡಿ ನವೀಕರಣ ನೆಪದಲ್ಲಿ ಸಹಿ:

ಫೆ.13ರಂದು ಸಾವಿತ್ರಮ್ಮ ಅವರ ಮನೆಗೆ ಭೇಟಿ ನೀಡಿದ್ದ ಮೇಘನಾ, ಎಫ್‌ಡಿ ಬಾಂಡ್‌ ನವೀಕರಿಸುವ ನೆಪದಲ್ಲಿ ತರಾತುರಿಯಲ್ಲಿ ಎರಡು ಚೆಕ್‌ಗಳನ್ನು ಪಡೆದು ಕೆಲ ದಾಖಲೆಗಳಿಗೆ ಸಹಿ ಪಡೆದಿದ್ದಾರೆ. ಬಳಿಕ ಹಳೆಯ ಎಫ್‌ಡಿ ಬಾಂಡ್‌ಗಳನ್ನು ನವೀಕರಿಸಿ ಹೆಚ್ಚಿನ ಲಾಭಾಂಶ ಬರುವ ಎಫ್‌ಡಿಗೆ ಹಣ ಹೂಡುವುದಾಗಿ ತಿಳಿಸಿದ್ದಾರೆ. ಎರಡು ದಿನ ಶಿರಸಿ ಮಾರಿಕಾಂಬ ದೇವಸ್ಥಾನಕ್ಕೆ ತೆರಳುತ್ತಿದ್ದು, ವಾಪಾಸ್‌ ಬಂದ ಬಳಿಕ ಪ್ರವೀಣ್‌ ಎಂಬಾತನ ಮೂಲಕ ದಾಖಲೆಗಳನ್ನು ತಲುಪಿಸುವುದಾಗಿ ಹೇಳಿದ್ದಾರೆ.

ಅನ್ಯ ವ್ಯಕ್ತಿ ಖಾತೆಗೆ ₹50 ಲಕ್ಷ ವರ್ಗಾವಣೆ:

ಫೆ.27ರಂದು ಸಾವಿತ್ರಮ್ಮ ಅವರ ಪುತ್ರ ತಂದೆಯ ಮೊಬೈಲ್‌ ಸಂದೇಶಗಳನ್ನು ನೋಡುವಾಗ ಬ್ಯಾಂಕ್‌ ಖಾತೆಯಲ್ಲಿ ಕಡಿಮೆ ಹಣ ಇರುವುದು ಕಂಡು ಬಂದಿದೆ. ಕೂಡಲೇ ಬ್ಯಾಂಕಿನ ಸಂದೇಶಗಳನ್ನು ಪರಿಶೀಲಿಸಿದಾಗ ಫೆ.13ರಂದು ₹50 ಲಕ್ಷ ಬೇರೆ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿರುವುದು ಕಂಡು ಬಂದಿದೆ. ಇದರಿಂದ ಗಾಬರಿಗೊಂಡು ಮಾರನೇ ದಿನ ಬ್ಯಾಂಕ್‌ಗೆ ತೆರಳಿ ಮೇಘನಾಳನ್ನು ವಿಚಾರಿಸಿದಾಗ, ನೀವು ಹೇಳಿದ್ದಕ್ಕೆ ನೀವು ನೀಡಿದ ಬ್ಯಾಂಕ್‌ ಖಾತೆಗೆ ₹50 ಲಕ್ಷ ಆರ್‌ಟಿಜಿಎಸ್‌ ಮಾಡಿರುವುದಾಗಿ ಸುಳ್ಳು ಹೇಳಿದ್ದಾರೆ. ಬಳಿಕ ಯಾರಿಗೆ ಹಣ ಹೋಗಿದೆ ಎಂದು ನೋಡಿದಾಗ, ಅನ್ವರ್‌ ಗೌಸ್‌ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಅಗಿರುವುದು ಕಂಡು ಬಂದಿದೆ. ಈ ಸಂಬಂಧ ಸಾವಿತ್ರಮ್ಮ ಅವರು ಡೆಪ್ಯೂಟಿ ಮ್ಯಾನೇಜರ್‌ ಮೇಘನಾ ಹಾಗೂ ಬ್ಯಾಂಕ್‌ ಸಿಬ್ಬಂದಿ ವಿರುದ್ಧ ಗಿರಿನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ದೇಶ ಪೂರ್ವಕ ವಂಚನೆ:

ಆರೋಪಿ ಡೆಪ್ಯೂಟಿ ಮ್ಯಾನೇಜರ್‌ ಮೇಘನಾಗೆ ವೃದ್ಧೆ ಸಾವಿತ್ರಮ್ಮನ ಉಳಿತಾಯ ಖಾತೆಯಲ್ಲಿ ₹1 ಕೋಟಿ ಇರುವ ವಿಚಾರ ಗೊತ್ತಿತ್ತು. ವಂಚಿಸುವ ಉದ್ದೇಶದಿಂದಲೇ ಎಫ್‌ಡಿ ನವೀಕರಣ ನೆಪದಲ್ಲಿ ಸಾವಿತ್ರಮ್ಮನಿಂದ ಆರ್‌ಟಿಜಿಎಸ್‌ ಫಾರಂಗೆ ಸಹಿ ಪಡೆದು ಸ್ನೇಹಿತ ಅನ್ವರ್‌ ಗೌಸ್‌ ಖಾತೆಗೆ ₹50 ಲಕ್ಷ ವರ್ಗಾಯಿಸಿದ್ದರು. ಈ ಹಣವನ್ನು ಬಳಸಿಕೊಂಡು ಲಾಭ ಗಳಿಸಲು ಸಂಚು ರೂಪಿಸಿದ್ದರು. ಇದಕ್ಕೆ ಪತಿ ಶಿವಪ್ರಸಾದ್‌, ಕಾರವಾದ ಮೂಲದ ರೆಸಾರ್ಟ್‌ ಮಾಲೀಕ ವರದರಾಜು ಹಾಗೂ ಅನ್ವರ್‌ ಗೌಸ್‌ ಸಾಥ್‌ ನೀಡಿದ್ದರು ಎಂಬುದು ಪೊಲೀಸರ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

click me!