ಬೆಂಗಳೂರು ಜನರಿಗೆ 'ದಸರಾ ಸಂಭ್ರಮ'ದ ನಡುವೆ ಒಂದು ಮನವಿ ಮಾಡಿದ ಆಯುಕ್ತ ಜಗದೀಶ್! ಏನದು?

Published : Oct 19, 2026, 11:30 PM IST
Bengaluru Dasara DC Jagadeesh

ಸಾರಾಂಶ

ದಸರಾ ಮತ್ತು ಆಯುಧ ಪೂಜೆ ಸಂಭ್ರಮದ ನಡುವೆ ರಸ್ತೆಗಳಲ್ಲಿ ಕಸ ಬಿಸಾಕಿ ಬ್ಲ್ಯಾಕ್ ಸ್ಪಾಟ್ ನಿರ್ಮಿಸದಂತೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರು ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಮಳೆಯಿಂದಾಗಿ ಚರಂಡಿ ಕಟ್ಟಿಕೊಳ್ಳುವ ಅಪಾಯವಿರುವುದರಿಂದ, ತ್ಯಾಜ್ಯವನ್ನು ವಿಂಗಡಿಸಿ ಪಾಲಿಕೆಯ ವಾಹನಗಳಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು (ಅ.19): ನಾಡಹಬ್ಬ ದಸರಾ ಮತ್ತು ಆಯುಧ ಪೂಜೆಯ ಸಂಭ್ರಮ ರಾಜಧಾನಿ ಬೆಂಗಳೂರಿನಲ್ಲಿ ಮನೆಮಾಡಿದೆ. ಹಬ್ಬದ ಪ್ರಯುಕ್ತ ಮಾರುಕಟ್ಟೆಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ವ್ಯಾಪಾರ ಭರಾಟೆ ಜೋರಾಗಿದೆ. ಆದರೆ, ಹಬ್ಬದ ಸಂಭ್ರಮದ ನಡುವೆ ನಗರದ ಸ್ವಚ್ಛತೆ ಹದಗೆಡದಂತೆ ನೋಡಿಕೊಳ್ಳಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ಜಗದೀಶ್ ಜಿ. ಅವರು ನಗರದ ವ್ಯಾಪಾರಸ್ಥರು ಮತ್ತು ನಾಗರಿಕರಿಗೆ ಅತ್ಯಂತ ಮಹತ್ವದ ಹಾಗೂ ಕಳಕಳಿಯ ಮನವಿಯೊಂದನ್ನು ಮಾಡಿದ್ದಾರೆ.

'ಹಬ್ಬದ ನೆಪದಲ್ಲಿ ಕಸವನ್ನು ಎಲ್ಲೆಂದರಲ್ಲಿ ರಸ್ತೆಗಳ ಮೇಲೆ ಬಿಸಾಕಿ ಬ್ಲ್ಯಾಕ್ ಸ್ಪಾಟ್‌ಗಳನ್ನು ನಿರ್ಮಿಸಬೇಡಿ' ಎಂದು ಆಯುಕ್ತರು ಖಡಕ್ ಕಿವಿಮಾತು ಹೇಳಿದ್ದಾರೆ.

ವ್ಯಾಪಾರಕ್ಕೆ ಅಡ್ಡಿಯಿಲ್ಲ, ಆದರೆ ಕಸ ರಸ್ತೆಗೆ ಹಾಕಬೇಡಿ!

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಐತಿಹಾಸಿಕ ಕೆ.ಆರ್. ಮಾರುಕಟ್ಟೆ, ಗಾಂಧಿಬಜಾರ್, ಆಟದ ಮೈದಾನಗಳು, ರಸ್ತೆ ಬದಿಗಳು ಹಾಗೂ ಗಲ್ಲಿ-ಗಲ್ಲಿಗಳಲ್ಲಿ ರೈತರು ಮತ್ತು ವ್ಯಾಪಾರಿಗಳು ಬಾಳೆದಿಂಡು, ಕುಂಬಳಕಾಯಿ, ಹೂವು, ಹಣ್ಣು-ಹಂಪಲು ಮತ್ತು ತಳಿರು-ತೋರಣಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಮತ್ತು ರೈತರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಪಾಲಿಕೆ ವತಿಯಿಂದ ಮಾರಾಟಗಾರರಿಗೆ ಯಾವುದೇ ಕಿರಿಕಿರಿ ಮಾಡುವುದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಆದರೆ, ವ್ಯಾಪಾರ ಮುಗಿದ ಬಳಿಕ ಉಳಿಯುವ ತ್ಯಾಜ್ಯವನ್ನು ಪಾದಚಾರಿ ಮಾರ್ಗಗಳು ಹಾಗೂ ರಸ್ತೆಗಳ ಮೇಲೆ ರಾಶಿ ಹಾಕಿ ತೆರಳುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಳೆ ಬಂದರೆ ಪರಿಸ್ಥಿತಿ ಗಂಭೀರ: ಆಯುಕ್ತರ ಎಚ್ಚರಿಕೆ

ತ್ಯಾಜ್ಯವನ್ನು ರಸ್ತೆಗೆ ಎಸೆಯುವುದರಿಂದ ಉಂಟಾಗುವ ಅನಾಹುತಗಳ ಬಗ್ಗೆ ಎಚ್ಚರಿಸಿದ ಆಯುಕ್ತರು:

ವಾಹನ, ಸಾರ್ವಜನಿಕ ಸಂಚಾರಕ್ಕೆ ಅಡ್ಡಿ: ರಸ್ತೆ ಬದಿಗಳಲ್ಲಿ ಕಸದ ರಾಶಿ ಬಿದ್ದರೆ ಸಂಚಾರ ದಟ್ಟಣೆ ಉಂಟಾಗುತ್ತದೆ ಮತ್ತು ಕಸ ಕೊಳೆತು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗುತ್ತದೆ.

ಮಳೆ ಬಂದರೆ ಚರಂಡಿ ಬ್ಲಾಕ್: ನಗರದಲ್ಲಿ ಮಳೆಯಾಗುತ್ತಿರುವುದರಿಂದ ರಸ್ತೆಯಲ್ಲಿ ಬಿದ್ದ ಬಾಳೆದಿಂಡು, ಬೂದಗುಂಬಳಕಾಯಿ ತ್ಯಾಜ್ಯಗಳು ರಾಜಕಾಲುವೆ ಮತ್ತು ಚರಂಡಿಗಳಿಗೆ ಸೇರಿ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತದೆ.

ಪೌರಕಾರ್ಮಿಕರ ಶ್ರಮ ಹೆಚ್ಚಳ: ಎಲ್ಲೆಂದರಲ್ಲಿ ಬಿಸಾಕುವುದರಿಂದ ನಮ್ಮ ಸ್ವಚ್ಛತಾ ಸಿಬ್ಬಂದಿಯಾದ ಪೌರಕಾರ್ಮಿಕರು ಹಗಲಿರುಳು ದುಡಿಯಬೇಕಾಗುತ್ತದೆ. ಹೀಗಾಗಿ ವ್ಯಾಪಾರಿಗಳು ಉಳಿದ ತ್ಯಾಜ್ಯವನ್ನು ಪಾಲಿಕೆ ನಿಗದಿಪಡಿಸಿದ ನಿರ್ದಿಷ್ಟ ಸ್ಥಳಗಳಿಗೆ ಮಾತ್ರ ತಂದು ಹಾಕಬೇಕು ಎಂದು ವಿನಂತಿಸಿದ್ದಾರೆ.

ಸಾರ್ವಜನಿಕರೇ ಹಬ್ಬದ ಪೂಜಾ ತ್ಯಾಜ್ಯ ರಸ್ತೆಗೆ ಎಸೆಯಬೇಡಿ!

ಮನೆಗಳಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿ ಮುಗಿದ ನಂತರ ಹಳೆಯ ಬೂದಗುಂಬಳ, ನಿಂಬೆಹಣ್ಣು ಹಾಗೂ ಒಣಗಿದ ಹೂವಿನ ಹಾರಗಳನ್ನು ರಸ್ತೆ ಮೂಲೆಗಳಲ್ಲಿ ಎಸೆಯುವ ಪ್ರವೃತ್ತಿ ಹೆಚ್ಚಾಗಿದೆ. ಇದಕ್ಕೆ ಬ್ರೇಕ್ ಹಾಕುವಂತೆ ಮನವಿ ಮಾಡಿದ ಆಯುಕ್ತರು, ಸಾರ್ವಜನಿಕರು ಹಬ್ಬದ ತ್ಯಾಜ್ಯವನ್ನು ವಿಂಗಡಿಸಿ (Wet and Dry Waste), ದಿನವೂ ಮನೆಬಾಗಿಲಿಗೆ ಬರುವ ಪಾಲಿಕೆಯ ಆಟೋ ಟಿಪ್ಪರ್‌ಗಳಿಗೆ ನೀಡಬೇಕು. ನಗರದ ಸೌಂದರ್ಯ ಮತ್ತು ಆರೋಗ್ಯಕರ ವಾತಾವರಣ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದ್ದು, ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ಕೋರಿದ್ದಾರೆ.

ಹೆಚ್ಚುವರಿ ಸಿಬ್ಬಂದಿ, ಟಿಪ್ಪರ್‌ಗಳ ನಿಯೋಜನೆ:

ಹಬ್ಬದ ಅವಧಿಯಲ್ಲಿ ಹೆಚ್ಚುವರಿ ಕಸ ಉತ್ಪತ್ತಿಯಾಗುವ ಮಾರುಕಟ್ಟೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ತ್ವರಿತ ವಿಲೇವಾರಿಗಾಗಿ ಹೆಚ್ಚುವರಿ ಪೌರಕಾರ್ಮಿಕ ಸಿಬ್ಬಂದಿ ಮತ್ತು ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಆಯುಕ್ತ ಜಗದೀಶ್ ಮಾಹಿತಿ ನೀಡಿದ್ದಾರೆ.

PREV
Read more Articles on
click me!

Recommended Stories

ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ 'ಸ್ಟೋನ್ ಟು ಲೈಫ್': 3D ಪ್ರೊಜೆಕ್ಷನ್ ಮೂಲಕ ಸಾಂಸ್ಕೃತಿಕ ಅನುಭವ
ಬೆಂಗಳೂರು-ವಿಜಯವಾಡ ಪ್ರಯಾಣ ಇನ್ಮುಂದೆ ಜಸ್ಟ್ 6 ಗಂಟೆ! ₹19,000 ಕೋಟಿ ವೆಚ್ಚ, 120 ಕಿ.ಮೀ ವೇಗ