ಬೆಂಗಳೂರು-ವಿಜಯವಾಡ ಪ್ರಯಾಣ ಇನ್ಮುಂದೆ ಜಸ್ಟ್ 6 ಗಂಟೆ! ₹19,000 ಕೋಟಿ ವೆಚ್ಚ, 120 ಕಿ.ಮೀ ವೇಗ

Published : Oct 19, 2026, 05:13 PM IST
expressway

ಸಾರಾಂಶ

ಬೆಂಗಳೂರು ಮತ್ತು ವಿಜಯವಾಡ ನಡುವೆ ನಿರ್ಮಾಣವಾಗುತ್ತಿರುವ 518 ಕಿ.ಮೀ ಉದ್ದದ 6-ಪಥಗಳ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಪ್ರಯಾಣದ ಅವಧಿಯನ್ನು ಕೇವಲ 6 ಗಂಟೆಗಳಿಗೆ ಇಳಿಸಲಿದೆ. ₹19,200 ಕೋಟಿ ವೆಚ್ಚದ ಈ ಬೃಹತ್ ಯೋಜನೆಯು 2026-27ರ ವೇಳೆಗೆ ಪೂರ್ಣಗೊಳ್ಳಲಿದ್ದು, ಸಾರಿಗೆ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ತರಲಿದೆ.

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಕರ್ನಾಟಕ ಮತ್ತು ನೆರೆಯ ಆಂಧ್ರಪ್ರದೇಶ ರಾಜ್ಯಗಳಲ್ಲಿ ಮೂಲಸೌಕರ್ಯದ ಮಹಾ ಕ್ರಾಂತಿಯೇ ನಡೆಯುತ್ತಿದೆ. ಈ ಭಾಗದ ಜನರಲ್ಲಿ ಹಾಗೂ ಸಾರಿಗೆ ವಲಯದಲ್ಲಿ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸಿರುವ ಯೋಜನೆಯೆಂದರೆ ಅದು ಬೆಂಗಳೂರು-ವಿಜಯವಾಡ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ. ಈ ಪ್ರತಿಷ್ಠಿತ ಹೆದ್ದಾರಿ ಯಾವಾಗ ಪೂರ್ಣಗೊಳ್ಳಲಿದೆ, ಇದರ ಅಂದಾಜು ವೆಚ್ಚವೆಷ್ಟು, ಪ್ರಯಾಣಿಕರಿಗೆ ಹಾಗೂ ವಾಣಿಜ್ಯ ಕ್ಷೇತ್ರಕ್ಕೆ ಸಿಗುವ ಪ್ರಯೋಜನಗಳೇನು ಎಂಬಿತ್ಯಾದಿ ಸಮಗ್ರ ಮಾಹಿತಿಯನ್ನು ಇಲ್ಲಿ ವಿವರವಾಗಿ ನೀಡಲಾಗಿದೆ.

ಎಕ್ಸ್‌ಪ್ರೆಸ್‌ವೇ ವಿಶೇಷತೆಗಳು

ಒಟ್ಟು ಉದ್ದ ಮತ್ತು ಪಥಗಳು: ಬೆಂಗಳೂರಿನಿಂದ ವಿಜಯವಾಡವನ್ನು ಸಂಪರ್ಕಿಸುವ ಈ ಮುಖ್ಯ ಕಾರಿಡಾರ್‌ 518 ಕಿಲೋಮೀಟರ್ ಉದ್ದದ 6-ಪಥಗಳ ಹೆದ್ದಾರಿಯಾಗಿದೆ. ಈ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳ ಗರಿಷ್ಠ ವೇಗದ ಮತಿಯನ್ನು ಗಂಟೆಗೆ 120 ಕಿಲೋಮೀಟರ್ ಎಂದು ನಿಗದಿಪಡಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 11, 2024 ರಂದು ಈ ಯೋಜನೆಗೆ ಅಡಿಪಾಯ ಹಾಕಿದ್ದು, ಕಾಮಗಾರಿಯು 2026-27ರ ವೇಳೆಗೆ ಸಂಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ.

ಪ್ರಯಾಣದ ಅವಧಿ ಕೇವಲ 6 ಗಂಟೆಗೆ ಕಡಿತ

ಕೇಂದ್ರ ಸರ್ಕಾರದ 'ಭಾರತ್‌ಮಾಲಾ ಪರಿಯೋಜನೆ ಹಂತ-2' ರ ಅಡಿಯಲ್ಲಿ ಈ ಗ್ರೀನ್‌ಫೀಲ್ಡ್ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ಬೆಂಗಳೂರು ಮತ್ತು ವಿಜಯವಾಡ ನಡುವೆ ಪ್ರಯಾಣಿಸಲು ಸುಮಾರು 11 ರಿಂದ 12 ಗಂಟೆಗಳ ಸಮಯ ಬೇಕು. ಆದರೆ ಈ ಎಕ್ಸ್‌ಪ್ರೆಸ್‌ವೇ ಸಿದ್ಧವಾದ ನಂತರ ಪ್ರಯಾಣದ ಅವಧಿ ಕೇವಲ 6 ರಿಂದ 7 ಗಂಟೆಗಳಿಗೆ ಇಳಿಕೆಯಾಗಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಯ ವಿಸ್ತೀರ್ಣ ಮತ್ತು ಅಂದಾಜು ವೆಚ್ಚ

ಆಂಧ್ರಪ್ರದೇಶ-ಕರ್ನಾಟಕ ಗಡಿ ಬಳಿಯ ಕೋಡಿಕೊಂಡದಿಂದ ಅಡ್ಡಂಕಿ ಸಮೀಪದ ಮುಪ್ಪಾವರಂ ವರೆಗಿನ ನೂತನ ಗ್ರೀನ್‌ಫೀಲ್ಡ್ ವಿಭಾಗವು ಸುಮಾರು 342 ರಿಂದ 343 ಕಿ.ಮೀ. ಉದ್ದವನ್ನು ಹೊಂದಿದೆ. ಹೊಸ ಮಾರ್ಗ ನಿರ್ಮಾಣ ಮತ್ತು ಹಳೆಯ ರಸ್ತೆಗಳ ನವೀಕರಣ ಸೇರಿದಂತೆ ಇಡೀ ಕಾರಿಡಾರ್‌ 518 ರಿಂದ 624 ಕಿ.ಮೀ. ವ್ಯಾಪ್ತಿಯನ್ನು ಒಳಗೊಳ್ಳುತ್ತದೆ. ಯೋಜನೆಯ ಒಟ್ಟು ಮೊತ್ತ ₹19,200 ಕೋಟಿಯಿಂದ ₹19,320 ಕೋಟಿ ಎಂದು ಅಂದಾಜಿಸಲಾಗಿದೆ.

ಆಂಧ್ರಪ್ರದೇಶದ 4 ಪ್ರಮುಖ ಜಿಲ್ಲೆಗಳ ಮೂಲಕ ಹಾದು ಹೋಗುವ ರಸ್ತೆ

ಈ ಆರ್ಥಿಕ ಕಾರಿಡಾರ್ ಆಂಧ್ರಪ್ರದೇಶದ ಗುಂಟೂರು, ಪ್ರಕಾಶಂ, ಕರ್ನೂಲ್ ಮತ್ತು ಕಡಪ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಜನನಿಬಿಡ ನಗರಗಳು ಹಾಗೂ ಪಟ್ಟಣಗಳನ್ನು ಬೈಪಾಸ್ ಮಾಡುವಂತೆ ಕಾರಿಡಾರ್ ರೂಪಿಸಲಾಗಿದ್ದು, ಪ್ರಯಾಣಿಕರಿಗೆ ತಡೆರಹಿತ ಚಾಲನಾ ಅನುಭವ ಸಿಗಲಿದೆ.

ಇದು ಪೂರ್ಣಗೊಂಡ ನಂತರ ಕೃಷಿ ಉತ್ಪನ್ನಗಳು, ಖನಿಜಗಳು ಹಾಗೂ ತಯಾರಿಕಾ ಸರಕುಗಳನ್ನು ವಿಜಯವಾಡ ಮತ್ತು ಬೆಂಗಳೂರಿನ ಮಾರುಕಟ್ಟೆಗಳಿಗೆ ಹಾಗೆಯೇ ಪೂರ್ವ ಕರಾವಳಿ ಬಂದರುಗಳಿಗೆ ಅತ್ಯಂತ ವೇಗವಾಗಿ ರವಾನಿಸಲು ನೆರವಾಗಲಿದೆ.

ಪ್ರಕಾಶಂ ಭಾಗದಲ್ಲಿ ಚುರುಕುಗೊಂಡ ಕಾಮಗಾರಿ

ಪ್ರಕಾಶಂ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಈ ಯೋಜನೆಯ ಸುಮಾರು 110 ಕಿ.ಮೀ. ಮಾರ್ಗ ಹಾದುಹೋಗುತ್ತದೆ. ಇದು ಚಂದ್ರಶೇಖರಪುರಂ, ಕಣ್ಣಿಗಿರಿ, ವೆಲಿಗಂಡ್ಲ, ಮರಿಪುಡಿ, ಚೀಮಕುರ್ತಿ, ತಲ್ಲೂರು, ಅಡ್ಡಂಕಿ, ಕೊಂಡೇಪಿ ಮತ್ತು ಪಂಗುಲೂರು ಮಂಡಲಗಳನ್ನು ಒಳಗೊಂಡಿದೆ.

ಪ್ರಸ್ತುತ ಈ ಭಾಗದಲ್ಲಿ ಮಣ್ಣಿನ ಕಾರ್ಯಗಳು, ಕಲ್ವರ್ಟ್‌ಗಳು, ಸೇತುವೆಗಳ ನಿರ್ಮಾಣ ಹಾಗೂ ಡಾಂಬರೀಕರಣ ವೇಗವಾಗಿ ನಡೆಯುತ್ತಿದ್ದು, ನಾರಾಯಣಂಪೇಟೆ-ಚಂದ್ರಶೇಖರಪುರಂ ಮತ್ತು ಪೋಲವರಂ-ಮರಿಪಡು ಭಾಗಗಳಲ್ಲಿ ಗಮನಾರ್ಹ ಪ್ರಗತಿಯಾಗಿದೆ.

14 ಪ್ಯಾಕೇಜ್‌ಗಳು ಮತ್ತು ಕಾಮಗಾರಿಯ ಪ್ರಗತಿ

ಯೋಜನೆಯ ಗ್ರೀನ್‌ಫೀಲ್ಡ್ ವಿಭಾಗವನ್ನು 14 ನಿರ್ಮಾಣ ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದ್ದು, ಮೇಘಾ ಎಂಜಿನಿಯರಿಂಗ್, ಕೆಎನ್‌ಆರ್ ಕನ್ಸ್‌ಟ್ರಕ್ಷನ್ಸ್ ಹಾಗೂ ದಿಲೀಪ್ ಬಿಲ್ಡ್‌ಕಾನ್‌ನಂತಹ ಪ್ರಮುಖ ಸಂಸ್ಥೆಗಳು ಕಾಮಗಾರಿ ನಡೆಸುತ್ತಿವೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ಯೋಜನೆಯ ಪರಿಶೀಲನೆ ನಡೆಸಿದ್ದು, 2027ರ ವೇಳೆಗೆ ಇಡೀ ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್ ಅನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು ಕಡೆಯಿಂದ 10-ಪಥಗಳ ರಸ್ತೆ ನವೀಕರಣ

ಕರ್ನಾಟಕದ ದೇವನಹಳ್ಳಿಯಿಂದ ಆಂಧ್ರಪ್ರದೇಶದ ಕೊಡಿಕೊಂಡದವರೆಗಿನ 90 ಕಿ.ಮೀ. ಉದ್ದದ ಹಾಲಿ NH-44 ಹೆದ್ದಾರಿಯನ್ನು 10 ಪಥಗಳ ರಸ್ತೆಯಾಗಿ ವಿಸ್ತರಿಸಲು NHAI ಯೋಜನಾ ವರದಿ ಸಿದ್ಧಪಡಿಸುತ್ತಿದೆ. ನೂತನ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗೆ ಸುಲಭವಾಗಿ ಸಂಪರ್ಕ ಸಾಧಿಸಲು ಕೊಡಿಕೊಂಡ ಬಳಿ ಬೃಹತ್ 'ಕ್ಲೋವರ್‌ಲೀಫ್ ಇಂಟರ್‌ಚೇಂಜ್' ನಿರ್ಮಿಸಲಾಗುತ್ತದೆ. ದೇವನಹಳ್ಳಿ ಮತ್ತು ಟ್ರಂಪೆಟ್ ಇಂಟರ್‌ಚೇಂಜ್ ನಡುವೆ ಸುಮಾರು 12 ಕಿ.ಮೀ. ಭಾಗದಲ್ಲಿ ಬೀದಿ ದೀಪಗಳ ಅಳವಡಿಕೆ ಮತ್ತು 12.5 ಕಿ.ಮೀ. ಮಾರ್ಗದುದ್ದಕ್ಕೂ 1.5 ಮೀಟರ್ ಎತ್ತರದ ಸುರಕ್ಷತಾ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ.

PREV
Read more Articles on
click me!

Recommended Stories

ನಮ್ಮ ಮೆಟ್ರೋದಲ್ಲಿ ಭರ್ಜರಿ ಉದ್ಯೋಗ, 50 ಸಹಾಯಕ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ
‘ಭಾರತಕ್ಕೆ ದೇಶಪ್ರೇಮಿಗಳು ಬೇಕು, ಪರಾವಲಂಬಿಗಳಲ್ಲ’… ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಕೆನಡಾ ಕ್ರಿಯೇಟರ್ ಖಡಕ್ ಮಾತು!