
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿಯು ಇಂದಿಗೂ ಜೀವಂತವಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ಹಾಗೂ ಸಿಸಿಬಿ (CCB), ನಗರದಾದ್ಯಂತ ಬೃಹತ್ ಜಂಟಿ ಕಾರ್ಯಾಚರಣೆ ನಡೆಸಿ ನೂರಾರು ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಮಹತ್ವದ ಕಾರ್ಯಾಚರಣೆಯಲ್ಲಿ ಹಲವಾರು ಬಾಲಕಾರ್ಮಿಕರನ್ನು ರಕ್ಷಿಸಲಾಗಿದ್ದು, ಮಕ್ಕಳನ್ನು ಕಾನೂನುಬಾಹಿರವಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಪಿಎಂಸಿ (APMC) ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ್ದ ಸಂದರ್ಭದಲ್ಲಿ, ಸ್ಥಳೀಯ ಮಹಿಳಾ ಕೂಲಿ ಕಾರ್ಮಿಕರು ಸಣ್ಣ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಬಳಸಿಕೊಳ್ಳುತ್ತಿರುವ ಕುರಿತು ದೂರು ನೀಡಿದ್ದರು. ಈ ಸಮಸ್ಯೆಯ ಗಂಭೀರತೆಯನ್ನು ಅರಿತ ಸಿಎಂ, ನಗರದಾದ್ಯಂತ ತಕ್ಷಣವೇ ಪರಿಶೀಲನೆ ನಡೆಸಿ ಬಾಲಕಾರ್ಮಿಕ ಪದ್ಧತಿಗೆ ತಡೆ ನೀಡುವಂತೆ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಸಕ್ರಿಯಗೊಂಡ ಬೆಂಗಳೂರು ಪೊಲೀಸರು ಬೃಹತ್ ಕಾರ್ಯಾಚರಣೆಗೆ ಇಳಿದರು.
ಪೂರ್ವ ಮತ್ತು ಈಶಾನ್ಯ ವಿಭಾಗಗಳ ವ್ಯಾಪ್ತಿಯಲ್ಲಿ ಪೊಲೀಸರು ಒಟ್ಟು 917 ಸ್ಥಳಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಿದರು. ಗ್ಯಾರೇಜ್, ಮಾರ್ಕೆಟ್, ರಿಪೇರಿ ಶಾಪ್, ಹೋಟೆಲ್, ಮಾರುಕಟ್ಟೆ, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ ಒಟ್ಟು 71 ಮಕ್ಕಳನ್ನು ರಕ್ಷಿಸಲಾಗಿದೆ. ಇದರಲ್ಲಿ ಈಶಾನ್ಯ (North-East) ವಿಭಾಗ ಒಂದರಲ್ಲೇ 295 ಕ್ಕೂ ಹೆಚ್ಚು ಸ್ಥಳಗಳನ್ನು ತಪಾಸಣೆಗೊಳಪಡಿಸಿ, 43 ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸಲಾಗಿದೆ.
ಸಿಸಿಬಿಯ ವಿವಿಧ ಕಡೆಗಳಲ್ಲಿ ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ನಗರದಾದ್ಯಂತ ವಿಶೇಷ ಮಿಂಚಿನ ಕಾರ್ಯಾಚರಣೆ ನಡೆಸಿದವು. ಒಟ್ಟು 67 ಪೊಲೀಸ್ ಠಾಣಾ ವ್ಯಾಪ್ತಿಯ 417 ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಿದ ಸಿಸಿಬಿ ಅಧಿಕಾರಿಗಳು, 43 ಮಕ್ಕಳನ್ನು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಮುಂದಿನ ಕ್ರಮಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹಸ್ತಾಂತರಿಸಲಾಗಿದೆ.
ಉತ್ತರ ವಿಭಾಗದಲ್ಲೂ 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಪೆಟ್ರೋಲ್ ಬಂಕ್, ಗ್ಯಾರೇಜ್ ಹಾಗೂ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕರನ್ನು ಪತ್ತೆಹಚ್ಚಲಾಗಿದೆ.
ಈ ಕಾರ್ಯಾಚರಣೆಯ ಕುರಿತು ಪ್ರತಿಕ್ರಿಯಿಸಿರುವ ಉತ್ತರ ವಿಭಾಗದ ಡಿಸಿಪಿ ನ್ಯಾಮಗೌಡ ಅವರು, ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಮಾಲೀಕರನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಲಾಗುತ್ತಿದೆ. ಮಾಲೀಕರ ಜೊತೆಗೆ ಮಕ್ಕಳ ಪೋಷಕರನ್ನೂ ಕರೆಸಿ ವಿಚಾರಣೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ರಕ್ಷಿಸಲ್ಪಟ್ಟ ಪ್ರತಿಯೊಬ್ಬ ಮಗುವಿನ ವಯಸ್ಸಿನ ಪರಿಶೀಲನೆ ನಡೆಸಲಾಗುತ್ತಿದ್ದು, ವಯಸ್ಸು ದೃಢಪಟ್ಟ ತಕ್ಷಣವೇ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಹೆಚ್ಚುವರಿ ಎಫ್‌ಐಆರ್ ದಾಖಲಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.