
ಬೆಂಗಳೂರು (ಆ.17): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮತ್ತೊಂದು ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ತಂದೆ ಮತ್ತು 5 ವರ್ಷದ ಮುಗ್ಧ ಕಂದಮ್ಮ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಮೃತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ಸಮೀಪದ ಗುಡ್ಡೆ ಬಸವಪುರದಲ್ಲಿ ಈ ದುರಂತ ಸಂಭವಿಸಿದೆ. ಅಭಿನಂದನ್ (33) ಹಾಗೂ ಆತನ 5 ವರ್ಷದ ಪುತ್ರ ಯದುವೀರ್ ಮೃತ ದುರ್ದೈವಿಗಳು.
ಅಭಿನಂದನ್ ಮತ್ತು ಹರಿಣಿ (26) ದಂಪತಿಗೆ 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೆ 5 ವರ್ಷದ ಯದುವೀರ್ ಎಂಬ ಮಗನಿದ್ದನು. ಮೂವರೂ ಗುಡ್ಡೆ ಬಸವಪುರದ ಮನೆಯಲ್ಲಿ ವಾಸವಾಗಿದ್ದರು. ಎಂದಿನಂತೆ ನಿನ್ನೆ ರಾತ್ರಿ ಮನೆಗೆ ಬಂದಿದ್ದ ಅಭಿನಂದನ್ ಮಗನೊಂದಿಗೆ ಮಲಗಿದ್ದರು. ಆದರೆ, ಇಂದು ಮುಂಜಾನೆ ನೋಡಿದಾಗ ಅಭಿನಂದನ್ ಹಾಗೂ ಮಗು ಯದುವೀರ್ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಸಂಬಂಧಿಕರು ಭೇಟಿ ನೀಡಿದಾಗ ಹಲವು ಆಘಾತಕಾರಿ ಹಾಗೂ ಅನುಮಾನಾಸ್ಪದ ಅಂಶಗಳು ಬೆಳಕಿಗೆ ಬಂದಿವೆ.
ಗಾಯದ ಗುರುತು ಹಾಗೂ ಕಿವಿಯಲ್ಲಿ ರಕ್ತ: ಅಭಿನಂದನ್ ಅವರ ಕಿವಿಯಿಂದ ರಕ್ತ ಒಸರುತ್ತಿತ್ತು ಹಾಗೂ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಮಗುವಿನ ಸಾವು ಕೂಡ ಅನುಮಾನಾಸ್ಪದವಾಗಿದೆ.
ಪತ್ನಿಯ ಅಸಂಬದ್ಧ ಹೇಳಿಕೆ: ಗಂಡ ಹಾಗೂ ಮಗ ಪಕ್ಕದ ಕೋಣೆಯಲ್ಲಿ ಹೆಣವಾಗಿ ಬಿದ್ದಿದ್ದರೂ, ಪತ್ನಿ ಹರಿಣಿ ಮಾತ್ರ ಇನ್ನೊಂದು ರೂಮ್‌ನಲ್ಲಿದ್ದಳು. ಕಿವಿಯಲ್ಲಿ ರಕ್ತ ಬಂದಿದ್ದರ ಬಗ್ಗೆ ಕೇಳಿದರೆ, 'ರಾತ್ರಿಯೇ ರಕ್ತ ಬರುತ್ತಿತ್ತು, ಅದಕ್ಕೆ ಅರಿಶಿನ ಹಚ್ಚಿದ್ದೆ' ಎಂದು ಹಾರಿಕೆಯ ಹಾಗೂ ಬೇಜವಾಬ್ದಾರಿಯುತ ಉತ್ತರ ನೀಡಿದ್ದಾಳೆ.
ಮನೆ ಬಿಟ್ಟು ಓಡಿಹೋಗಿದ್ದ ಪತ್ನಿ: ಹರಿಣಿ ಈ ಹಿಂದೆ ಕುಟುಂಬಸ್ಥರಿಗೆ ತಿಳಿಸದೆ ಮನೆಯಿಂದ ಓಡಿಹೋಗಿ ಬರೋಬ್ಬರಿ 3 ತಿಂಗಳು ಬೇರೆಡೆ ವಾಸವಿದ್ದಳು ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ತಂದೆ-ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಾಣಾವರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತನ ಕುಟುಂಬಸ್ಥರು ಹರಿಣಿಯೇ ಊಟದಲ್ಲಿ ವಿಷ ಬೆರೆಸಿ ಅಥವಾ ಕತ್ತು ಹಿಸುಕಿ ಇಬ್ಬರನ್ನೂ ಕೊಲೆ ಮಾಡಿದ್ದಾಳೆ ಎಂದು ನೇರ ಆರೋಪ ಮಾಡಿದ್ದಾರೆ. ಸದ್ಯ ಪೊಲೀಸರು ಪತ್ನಿ ಹರಿಣಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ಅಸಲಿ ರಹಸ್ಯ ಬಯಲಾಗಲಿದೆ.