
ಬೆಂಗಳೂರು (ಜೂ. 30) ಕರ್ನಾಟಕದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ನೋಂದಣಿ ಶುಲ್ಕ, ಹಾಲಿನ ದರ, ಮೆಟ್ರೋ ದರ ಸೇರಿದಂತೆ ಬಹುತೇಕ ದರಗಳು ಏರಿಕೆಯಾಗಿದೆ. ಇತ್ತೀಚೆಗೆ ಬೈಕ್ ಟ್ಯಾಕ್ಸಿ ನಿಷೇಧಗೊಂಡ ಬಳಿಕ ಆಟೋ ಚಾಲಕರು ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗುತ್ತಿದೆ. ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆಯಾಗುತ್ತಿದೆ. ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ.
ಏಷ್ಟಾಗಲಿದೆ ಬೆಂಗಳೂರು ಆಟೋ ಪ್ರಯಾಣ ದರ?
ಬೆಂಗಳೂರಿನಲ್ಲಿ ಸದ್ಯ ಆಟೋ ಪ್ರಯಾಣ ದರ ಕನಿಷ್ಟ 30 ರೂಪಾಯಿ. ಇದೀಗ ಈ ಮೂಲ ಬೆಲೆ 36 ರೂಪಾಯಿಗೆ ಏರಿಕೆಯಾಗುತ್ತಿದೆ. ಒಂದೇ ಬಾರಿ 6 ರೂಪಾಯಿ ಏರಿಕೆಯಾಗುತ್ತಿದೆ. ಆರಂಭಿಕ 1.9 ಕಿಲೋಮೀಟರ್ ಒಳಗಿನ ಮೂಲ ಬೆಲೆ 36 ರೂಪಾಯಿ ಆಗಲಿದೆ. ಬಳಿಕ ಪ್ರತಿ ಕಿಲೋಮೀಟರ್ ದರ 18 ರೂಪಾಯಿಗೆ ಏರಿಕೆಯಾಗುತ್ತಿದೆ. ಸದ್ಯ ಪ್ರತಿ ಕಿಲೋಮೀಟರ್ ದರ 15 ರೂಪಾಯಿ ಆಗಿದೆ.
4 ವರ್ಷಗಳ ಬಳಿಕ ಆಟೋ ಪ್ರಯಾಣ ದರ ಏರಿಕೆ
ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರಿ ಏರಿಕೆಯಾಗಿ 4 ವರ್ಷ ಕಳೆದಿದೆ. 2021ರಲ್ಲಿ ಬೆಂಗಳೂರಿನಲ್ಲಿ ಆಟೋ ದರ ಪರಿಷ್ಕರಣೆ ಮಾಡಲಾಗಿತ್ತು. ಈ ವೇಳೆ ಆಟೋ ದರವನ್ನು 30 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ದರ ಏರಿಕೆ ಮಾಡಲಾಗುತ್ತಿದೆ. ಈ ಕುರಿತು ಆಟೋ ಚಾಲಕರು ದರ ಏರಿಕೆ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಇಂಧನ ದರ ಏರಿಕೆ ಸೇರಿದಂತೆ ಎಲ್ಲವೂ ದುಬಾರಿಯಾಗಿರುವ ಕಾರಣ ಆಟೋ ಜೀವನ ದುಸ್ತರವಾಗಿದೆ. ಹೀಗಾಗಿ ಪ್ರಯಾಣ ದರ ಏರಿಕೆ ಮಾಡುವಂತೆ ಮನವಿ ಮಾಡಲಾಗಿತ್ತು. ಇದರಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆಟೋ ಪ್ರಯಾಣ ದರ ಏರಿಕೆಗೆ ಅನುಮೋದನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಹಾಕಿದರೆ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಮೂಲಗಳು ಹೇಳುತ್ತಿವೆ.
40 ರೂಪಾಯಿ ಮಾಡುವಂತೆ ಆಟೋ ರಿಕ್ಷಾ ಯೂನಿಯನ್ ಮನವಿ
ಆಟೋ ಪ್ರಯಾಣ ದರವನ್ನು 30 ರೂಪಾಯಿಂದ 40 ರೂಪಾಯಿ ಮಾಡುವಂತೆ ಆಟೋ ರಿಕ್ಷಾ ಯೂನಿಯನ್ ಮನವಿ ಮಾಡಿದೆ. ಇದೇ ವೇಳೆ ಪ್ರತಿ ಕಿಲೋಮೀಟರ್ ದರವನ್ನು 15 ರೂಪಾಯಿಂದ 20 ರೂಪಾಯಿಗೆ ಏರಿಕೆ ಮಾಡುವಂತೆ ಒತ್ತಾಯಿಸಿದೆ.
ಚಿಲ್ಲರ ಸಮಸ್ಯೆಯಾಗಲಿದೆ ಎಂದ ಪೀಸ್ ಆಟೋ ಯೂನಿಯನ್
ಆಟೋ ಪ್ರಯಾಣ ದರ ಏರಿಕೆ ರೌಂಡ್ಅಪ್ ಮಾಡಬೇಕು. ಪ್ರಮುಖವಾಗಿ ಚಾಲಕರಿಗೆ ಚಿಲ್ಲರೆ ಸಮಸ್ಯೆ ಎದುರಾಗಲಿದೆ. 36 ರೂಪಾಯಿಗೆ ಏರಿಕೆ ಮಾಡಿದರೆ ಚಿಲ್ಲರೆ ಸಮಸ್ಯೆಯಾಗಲಿದೆ. ಇಷ್ಟೇ ಅಲ್ಲ ಕೇವಲ 6 ರೂಪಾಯಿ ಏರಿಕೆಯಿಂದ ಆಟೋ ಚಾಲಕರ ಸಮಸ್ಯೆ ಬಗೆಹರಿಯುವುದಿಲ್ಲ ಎಂದಿದೆ. ಹೀಗಾಗಿ 40 ರೂಪಾಯಿಗೆ ಏರಿಕೆ ಮಾಡುವಂತೆ ಪೀಸ್ ಆಟೋ ಯೂನಿಯನ್ ಒತ್ತಾಯಿಸಿದೆ.