
ಬೆಂಗಳೂರು: ಅಪಘಾತಗಳು ಹೆಚ್ಚಾಗುತ್ತಿದೆ ಎಂಬ ಕಾರಣ ನೀಡಿ ಬೆಂಗಳೂರಿನ ಸಂಚಾರ ಪೊಲೀಸರು ನಗರ ಹಲವು ಫ್ಲೈಓವರ್‌ಗಳ ಮೇಲೆ ದ್ವಿಚಕ್ರ ವಾಹನ, ಆಟೋಗಳು ಹಾಗೂ ಕೆಲವು ಭಾರೀ ವಾಹನಗಳ ಮೇಲೆ ಸಂಚಾರ ನಿರ್ಬಂಧಗಳನ್ನು ವಿಧಿಸಿತ್ತು. ಇದರಿಂದ ರಸ್ತೆ ಸುರಕ್ಷತೆ ಉತ್ತಮವಾಗುತ್ತದೆ, ಅಪಘಾತಗಳನ್ನು ತಡೆಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ಹೊಸ ನಿರ್ಬಂಧಗಳು ಹಲವು ಸ್ಥಳಗಳಲ್ಲಿ ಭಾರೀ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದು, ವಿಶೇಷವಾಗಿ ಪಿಕ್ ಅವರ್‌ಗಳಲ್ಲಿ ಸಂಚಾರ ಅಸ್ತವ್ಯಸ್ತಗೊಳ್ಳಲು ಕಾರಣವಾಗುತ್ತಿದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ. ಈ ಕುರಿತಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಹೊಸ ನಿಯಮಗಳ ವಿರುದ್ಧ ಬೇಸರ ಹೊರ ಹಾಕಿದ್ದಾರೆ.
ಈ ಕುರಿತಂತೆ ಡೆಕ್ಕನ್ ಹೆರಾಲ್ಡ್ ರಿಯಾಲಿಟಿ ಚೆಕ್ ನಡೆಸಿದ್ದು, ಈ ಸಂದರ್ಭದಲ್ಲಿ ಸುಮಾರು 10-25 ನಿಮಿಷ ತೆಗೆದುಕೊಳ್ಳುತ್ತಿದ್ದ ಪ್ರಯಾಣಕ್ಕೆ ಈಗ ಸುಮಾರು 30 ನಿಮಿಷ ತೆಗೆದುಕೊಳ್ಳುತ್ತಿದೆ. ಮೇಲ್ಸೇತುವೆ ಕೆಳಗೆ ಹಲವು ಸಿಗ್ನಲ್ ಇರುವ ಕಾರಣ ವಾಹನ ಸವಾರರು ನಿಧಾನವಾಗಿ ಚಲಿಸುವುದರಿಂದ ಟ್ರಾಫಿಕ್ ಸಮಸ್ಯೆಯೂ ಡಬಲ್ ಆಗಿದೆ.
ವಾಹನ ಸವಾರರು ಮಾತ್ರವಲ್ಲದೇ, ರಸ್ತೆ ಮಾರ್ಗ ಬದಲಾವಣೆಗಳ ಕಾರ್ಯನಿರ್ವಹಿಸುತ್ತಿರುವ ಸಂಚಾರಿ ಪೊಲೀಸರಿಗೂ ಕೂಡ ಟ್ರಾಫಿಕ್ ನಿರ್ವಹಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಅದರಲ್ಲೂ ಮಾಲ್ ಆಫ್ ಏಷ್ಯಾ, ಜಕ್ಕೂರು ಮತ್ತು ಜಿಕೆವಿಕೆ ಸಿಗ್ನಲ್ ಸೇರಿದಂತೆ ಕೊಡಿಗೆಹಳ್ಳಿ, ಬ್ಯಾಟರಾಯನಪುರ ಬಳಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಈ ಮಾರ್ಗದಲ್ಲಿ ಯಾವುದಾದರೂ ವಾಹನ ಅಪ್ಪಿತಪ್ಪಿ ಬ್ರೇಕ್ ಡೌನ್ ಆದರೆ ಒಂದು ಕ್ರೈನ್ ಸ್ಥಳಕ್ಕೆ ತರಿಸಿ ವಾಹನವನ್ನು ರಸ್ತೆ ಮೇಲಿಂದ ತೆರವು ಮಾಡಲು ಈ ಹಿಂದೆ 30 ನಿಮಷ ಸಮಯ ತೆಗೆದುಕೊಂಡರೆ, ಈಗ ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡುರುವ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು, ಜನರು ಸಮಸ್ಯೆಯನ್ನು ಅರ್ಥಮಾಡಿಕೊಂಡು ವಾಹನ ಚಲಾಯಿಸಿದರೆ ಟ್ರಾಫಿಕ್ ಮ್ಯೂಮೆಂಟ್ ಉತ್ತಮವಾಗುತ್ತದೆ. ಆದರೆ ಎಲ್ಲರೂ ಒಟ್ಟಿಗೆ ಬಂದರೆ ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟ್ರಾಫಿಕ್ ನಿಯಮಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಾಹನ ಸವಾರರೊಬ್ಬರು, ಫ್ಲೈಪವರ್ ನಿರ್ಬಂಧ ಮಾಡಿರುವುದರಿಂದ ನನ್ನ ಪ್ರಯಾಣ ಸಮಯ ಸುಮಾರು 15 ರಿಂದ 25 ನಿಮಿಷಗಳು ಹೆಚ್ಚಾಗಿದೆ. ಅದರಲ್ಲೂ ಮೆಟ್ರೋ ನಿರ್ಮಾಣ ಕಾಮಗಾರಿ ನಡೆಯುತ್ತಿರುವುರಿಂದ ರಸ್ತೆ ಬಹಳ ಕಿರಿದಾಗಿದ್ದು, ಪೀಕ್ ಅವರ್ಗಳ ಸಮಯದಲ್ಲಿ ಟ್ರಾಫಿಕ್ ಅಸ್ತವ್ಯಸ್ತಗೊಳ್ಳುತ್ತದೆ. ಈ ಮಾರ್ಗದಲ್ಲಿ ಹಲವು ಆಸ್ಪತ್ರೆಗಳು ಇರುವುದರಿಂದ ಪೊಲೀಸರು ಸರಿಯಾದ ಮಾರ್ಗ ಬದಲಾವಣೆಗಳನ್ನು ಮಾಡಬೇಕು ಮತ್ತು ಅಗತ್ಯ ಸೈನ್ ಬೋರ್ಡ್‌ಗಳನ್ನು ಅಳವಡಿಸಬೇಕು ಎಂದು ಹೇಳಿದ್ದಾರೆ.
ಇನ್ನು ಆಟೋ ಚಾಲಕ ಮಂಜುನಾಥ ಅವರು ಮಾತನಾಡಿ, ನೆಲಮಂಗಲ ಕಡೆಗೆ ಹೋಗುವವರು ಬಿಟ್ಟರೆ ಸ್ಥಳೀಯ ಚಾಲಕರು ಫ್ಲೈಓವರ್ ಬಳಕೆ ಮಾಡುವುದು ಬಹಳ ಕಡಿಮೆ. ಆದರೆ ಬೈಕ್ ಮತ್ತು ಆಟೋ ಹಾಗು ಸರಕು ಸೇವಾ ವಾಹನಗಳ ಮೇಲೆ ನಿರ್ಬಂಧ ವಿಧಿಸಿದರೆ ಫ್ಲೈಓವರ್ ಕೆಳಗಿನ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಫ್ಲೈಓವರ್ ಮೇಲೆ ಬೈಕ್‌ಗಳಿಂದ ಅಪಘಾತಗಳು ಹೆಚ್ಚಾಗುತ್ತಿದದೆ ಎಂಬ ಕಳವಳ ಹೆಚ್ಚಾಗಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಫ್ಲೈಓವರ್ ಮೇಲಿನ ನಿರ್ಬಂಧವೂ ಪ್ರಾಯೋಗಿಕ ಆಧಾರದ ಮೇಲೆ ಜಾರಿತರಲಾಗಿದೆ ಎಂದು ಹೇಳಿದ್ದಾರೆ.