
ಬೆಂಗಳೂರು: ನೈಸ್ ಕಂಪನಿಯ ‘ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಗೆ ಭೂಮಿ ಕೊಟ್ಟ 1,453 ರೈತರಿಗೆ ನೈಸ್ ಟೌನ್‌ಶಿಪ್ ವ್ಯಾಪ್ತಿಯ ಪ್ರದೇಶಗಳಲ್ಲಿ ಎರಡು ತಿಂಗಳ ಒಳಗಾಗಿ ನಿವೇಶನ ಕೊಡಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ನೈಸ್ ಸಂಸ್ಥೆಗೆ ರೈತರು ಜಮೀನು ಕೊಡುವ ವೇಳೆ ಕೆಲವರು ಸ್ವಯಂಪ್ರೇರಿತವಾಗಿ ತಮ್ಮ ಭೂಮಿ ಕೊಟ್ಟಿದ್ದರು. ಅಂದಿನ ಜಿಲ್ಲಾಧಿಕಾರಿ, ಸಮಿತಿ ಜಮೀನು ಕೊಟ್ಟವರಿಗೆ ನೈಸ್ ಟೌನ್ ಶಿಪ್‌ನಲ್ಲಿ ನಿವೇಶನ ನೀಡಲು ತೀರ್ಮಾನಿಸಿದ್ದರು. ಈ ಬಗ್ಗೆ ನೈಸ್ ಕಂಪನಿ ಒಪ್ಪಿಗೆಯನ್ನೂ ನೀಡಿತ್ತು. ಆದರೆ ‘ಫ್ರೇಮ್ ವರ್ಕ್ ಅಗ್ರೀಮೆಂಟ್’ನಲ್ಲಿ (ಕ್ರಿಯಾ ಒಪ್ಪಂದ) ಅದನ್ನು ಬರೆದುಕೊಟ್ಟಿರಲಿಲ್ಲ.
ಈ ಬಗ್ಗೆ ನ್ಯಾಯಾಲಯದಲ್ಲಿ ರೈತರು ಪ್ರಶ್ನೆ ಮಾಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ. ಅದರಂತೆ ಒಂದು ಎಕರೆ ಒಳಗೆ ಜಮೀನು ಕೊಟ್ಟವರಿಗೆ 30X40 ನಿವೇಶನ, ಒಂದು ಎಕರೆಗಿಂತ ಹೆಚ್ಚಿನ ಜಮೀನು ನೀಡಿದವರಿಗೆ 60X40 ನಿವೇಶನವನ್ನು ನೈಸ್ ಸಂಸ್ಥೆಯಿಂದ ಕೊಡಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನೈಸ್ (NICE) ಯೋಜನೆಯಡಿ ರೈತರಿಗೆ ನಿವೇಶನ ಹಂಚಿಕೆ ಮಾಡುವ ಸರ್ಕಾರದ ನಿರ್ಧಾರ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಸಂಪೂರ್ಣ ವಿರುದ್ಧವಾಗಿದೆ. ಅಲ್ಲದೆ, 1,453 ನಿವೇಶನ ನೀಡುವ ನೆಪದಲ್ಲಿ ಬೃಹತ್ ಪ್ರಮಾಣದ ಭೂ ಲೂಟಿಗೆ ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ 3 ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ.
"ನಾವು ಏನೇ ನಿರ್ಧಾರ ತೆಗೆದುಕೊಂಡರೂ ಅದನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಮಾಡುತ್ತೇವೆ. ಕಾನೂನು ತಜ್ಞರ ಸಲಹೆ ಮತ್ತು ಅಭಿಪ್ರಾಯ ಪಡೆದೇ ಮುಂದುವರಿಯುತ್ತಿದ್ದೇವೆ ಹೊರತು, ನಿಯಮಗಳನ್ನು ಮೀರಿ ಯಾವುದನ್ನೂ ಮಾಡುವುದಿಲ್ಲ. ಈ ವಿಚಾರದಲ್ಲಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಯಾರಿಗೆ ಸಮ್ಮತಿಯಿಲ್ಲವೋ ಅವರು ಕೋರ್ಟ್‌ಗೆ ಹೋಗಲಿ ಅಥವಾ ಕಾನೂನು ಹೋರಾಟ ಮಾಡಿಕೊಳ್ಳಲಿ, ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬರೆದಿರುವ ಬಹಿರಂಗ ಪತ್ರದ ಕುರಿತು ಪ್ರತಿಕ್ರಿಯಿಸಿದ ಅವರು, "ನೈಸ್ ಯೋಜನೆಯ ಕುರಿತು ದೇವೇಗೌಡರ ವೈಯಕ್ತಿಕ ಅಭಿಪ್ರಾಯಗಳು ಹಾಗೂ ಚರ್ಚೆಗಳನ್ನು ನಾನು ಮೊದಲಿನಿಂದಲೂ ಗಮನಿಸಿದ್ದೇನೆ. ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರಗಳು ಮಾಡಿಕೊಂಡ ಒಪ್ಪಂದದ (Agreement) ಹಾದಿಯಲ್ಲೇ ಇಂದಿನ ಪ್ರಕ್ರಿಯೆಗಳೂ ಸಾಗುತ್ತಿವೆ. ಯೋಜನೆಗಾಗಿ ಆಸ್ತಿ ಕಳೆದುಕೊಂಡ ರೈತರ ಹಿತರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಲ್ಲವೇ?" ಎಂದು ಪ್ರಶ್ನಿಸಿದರು.
ಮುಂದುವರಿದು ಮಾತನಾಡಿದ ಅವರು, "ಹಿಂದಿನ ಸರ್ಕಾರಗಳು ಸಹಿ ಮಾಡಿರುವ ಒಪ್ಪಂದದ ದಾಖಲೆಗಳನ್ನು ನಾನು ಪರಿಶೀಲಿಸಿದ್ದೇನೆ. ನನಗೂ ಆಡಳಿತಾತ್ಮಕ ಪ್ರಜ್ಞೆ ಹಾಗೂ ಸಾಮಾನ್ಯ ಜ್ಞಾನ (Common Sense) ಇದೆ. ಯಾರು ಬೇಕಾದರೂ ಏನೇ ಹೇಳಿಕೆ ನೀಡಲಿ, ಅಗತ್ಯಬಿದ್ದರೆ ಉಪವಾಸ ಸತ್ಯಾಗ್ರಹವನ್ನಾದರೂ ಮಾಡಿಕೊಳ್ಳಲಿ," ಎಂದು ದೇವೇಗೌಡರ ಆರೋಪಗಳಿಗೆ ಖಾರವಾಗಿ ತಿರುಗೇಟು ನೀಡಿದರು.