ನುಡಿದಂತೆ ನಡೆದ ಶಾಸಕ ಎಂ.ಕೃಷ್ಣಪ್ಪ: 20 ಮಂದಿ ಕ್ವಿಜ್ ವಿಜೇತರಿಗೆ ಉಚಿತ ಕಾಶಿ-ಪ್ರಯಾಗ ವಿಮಾನ ಯಾತ್ರೆ

Published : Sep 09, 2026, 06:48 PM IST
mla m krishnappa

ಸಾರಾಂಶ

ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರು ಮಹಾ ಶಿವರಾತ್ರಿ ಕ್ವಿಜ್ ಸ್ಪರ್ಧೆಯ 20 ವಿಜೇತರಿಗೆ ನೀಡಿದ್ದ ಕಾಶಿ-ಪ್ರಯಾಗ ಉಚಿತ ವಿಮಾನ ಪ್ರವಾಸದ ಭರವಸೆಯನ್ನು ಈಡೇರಿಸಿದ್ದಾರೆ. ಸೆಪ್ಟೆಂಬರ್ 15 ರಂದು ಯಾತ್ರೆ ಆರಂಭವಾಗಲಿದ್ದು, ವಿಜೇತರನ್ನು ಅಭಿನಂದಿಸಲು ಸೆಪ್ಟೆಂಬರ್ 10 ರಂದು ಸಮಾರಂಭವನ್ನು ಆಯೋಜಿಸಲಾಗಿದೆ.

ಬೆಂಗಳೂರು (ಸೆ.9): ವಿಜಯನಗರ ಕ್ಷೇತ್ರ ಶಾಸಕರಾದ ಎಂ.ಕೃಷ್ಣಪ್ಪ ಅವರು ತಾವು ನೀಡಿದ್ದ ಸಾರ್ವಜನಿಕ ಭರವಸೆಯನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದು ಮಾದರಿಯಾಗಿದ್ದಾರೆ. ವಿಜಯನಗರದಲ್ಲಿ ನಡೆದಿದ್ದ ಮಹಾ ಶಿವರಾತ್ರಿ ಕಾರ್ಯಕ್ರಮದ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದ 20 ಮಂದಿಗೆ ಪವಿತ್ರ ಕಾಶಿ-ಪ್ರಯಾಗ ಕ್ಷೇತ್ರಗಳಿಗೆ ಉಚಿತ ವಿಮಾನ ಪ್ರವಾಸ ಕಲ್ಪಿಸುವ ಮೂಲಕ ತಮ್ಮ ವಾಗ್ದಾನವನ್ನು ಪೂರೈಸಿದ್ದಾರೆ.

2026ರ ಫೆಬ್ರವರಿ 15ರಂದು ವಿಜಯನಗರದಲ್ಲಿ ಅಹೋರಾತ್ರಿ ಆಯೋಜಿಸಲಾಗಿದ್ದ ಮಹಾ ಶಿವರಾತ್ರಿ ಕಾರ್ಯಕ್ರಮದ ಅಂಗವಾಗಿ ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ಸಾರ್ವಜನಿಕರಿಗಾಗಿ ವಿಶೇಷ ಕ್ವಿಜ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾಗುವ 20 ಮಂದಿಗೆ ಕಾಶಿ ಹಾಗೂ ಪ್ರಯಾಗರಾಜ್ ಪವಿತ್ರ ಕ್ಷೇತ್ರಗಳಿಗೆ ವಿಮಾನದ ಮೂಲಕ ಉಚಿತ ಪ್ರವಾಸ ಕಳುಹಿಸಿಕೊಡುವುದಾಗಿ ಶಾಸಕರು ಘೋಷಿಸಿದ್ದರು.

ಸೆಪ್ಟೆಂಬರ್ 15ಕ್ಕೆ ವಿಮಾನಯಾನ – ಟಿಕೆಟ್‌ಗಳು ಸಿದ್ಧ

ಶಾಸಕರ ಭರವಸೆಯಂತೆ ಇದೀಗ 20 ಮಂದಿ ವಿಜೇತರ ಕಾಶಿ-ಪ್ರಯಾಗ ಪ್ರವಾಸದ ವಿಮಾನ ಟಿಕೆಟ್‌ಗಳು ಸಂಪೂರ್ಣವಾಗಿ ಸಿದ್ಧಗೊಂಡಿದ್ದು, ಸೆಪ್ಟೆಂಬರ್ 15ರಂದು ಈ ವಿಶೇಷ ಯಾತ್ರೆ ಆರಂಭವಾಗಲಿದೆ. ವಿಜೇತರಿಗೆ ತಮ್ಮ ಜೀವನದಲ್ಲಿ ಇದೊಂದು ಸ್ಮರಣೀಯ ಹಾಗೂ ಆಧ್ಯಾತ್ಮಿಕ ಅನುಭವ ನೀಡಬೇಕು ಎಂಬ ಉದ್ದೇಶದಿಂದ ಶಾಸಕರು ಈ ಯಾತ್ರೆಯನ್ನು ಆಯೋಜಿಸಿದ್ದಾರೆ.

ಸೆಪ್ಟೆಂಬರ್ 10ರಂದು ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭ

ಈ ಪವಿತ್ರ ಯಾತ್ರೆಯ ಹಿನ್ನೆಲೆಯಲ್ಲಿ 'ಜಾಣಜಾಣೆಯರು ಸಂಸ್ಥೆ, ಬೆಂಗಳೂರು' ವತಿಯಿಂದ ವಿಜೇತರನ್ನು ಅಭಿನಂದಿಸಿ, ಪ್ರಯಾಣಕ್ಕೆ ಶುಭ ಹಾರೈಸಿ ಬೀಳ್ಕೊಡುವ ವಿಶೇಷ ಕಾರ್ಯಕ್ರಮವನ್ನು ಸೆಪ್ಟೆಂಬರ್ 10ರಂದು ಬೆಳಿಗ್ಗೆ 10 ಗಂಟೆಗೆ ವಿಜಯನಗರದ ಶಾಸಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ವಿಜಯನಗರ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪ, ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಹಾಗೂ ವಿಜಯನಗರದ ಯುವ ನಾಯಕ ಪ್ರದೀಪ್ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಶಾಸಕರು ನುಡಿದಂತೆ ನಡೆದು ಭರವಸೆ ಈಡೇರಿಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದರ ಜೊತೆಗೆ, ವಿಜೇತರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಜಾಣಜಾಣೆಯರು ಸಂಸ್ಥೆಯ ಎಂ. ಉದಯ್ ತಿಳಿಸಿದ್ದಾರೆ. ಸೆಪ್ಟೆಂಬರ್ 15ರ ವಿಮಾನಯಾನಕ್ಕೂ ಮುನ್ನ ಸೆ.10ರಂದು ನಡೆಯಲಿರುವ ಈ ಅಭಿನಂದನಾ ಸಮಾರಂಭದಲ್ಲಿ ಸಾರ್ವಜನಿಕರು, ಅಭಿಮಾನಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಸ್ಥೆ ವಿನಂತಿಸಿದೆ.

PREV
Read more Articles on
click me!

Recommended Stories

38 ವರ್ಷದ ಸೇವೆ, ಕೊನೆ ಗಂಟೆ ಬಾರಿಸಿದ ದಾಸ್ ಅಂಕಲ್: ಬೆಂಗಳೂರಿನ ಭಾವುಕ ವಿಡಿಯೋ ಹಂಚಿದ ಮಹೀಂದ್ರಾ
8 ತಿಂಗಳ ಬಳಿಕ ಪತ್ತೆಯಾದ ಬೆಂಗಳೂರ ವಿದ್ಯಾರ್ಥಿನಿಯರು: ಒಬ್ಬಾಕೆ ಗರ್ಭಿಣಿ! ಸಿನಿಮಾ ಮೀರಿಸೋ ಸ್ಟೋರಿ ಇವರದ್ದು