
ಮಹಾನಗರಗಳಲ್ಲಿ ಮನೆ ಮನೆಗಳಿಂದ ಬಿಬಿಎಂಪಿ ಬಂದು ಕಸ ಸಂಗ್ರಹಿಸುವ ಕೆಲಸದ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಅಮೆರಿಕಾದಲ್ಲಿ ಕಸ ಸಂಗ್ರಹ ಹೇಗೆ ಮಾಡುತ್ತಾರೆ ಎಂಬುದು ನಿಮಗೆ ಗೊತ್ತಾ? ಇವೆರಡನ್ನು ಹೋಲಿಸಿ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೋಡುಗರನ್ನು ನಕ್ಕು ನಗಿಸುತ್ತಿದೆ. ursteajuice ಎಂಬ ಇನ್ಸ್ಟಾಗ್ರಾಮ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, ವೀಡಿಯೋ ನೋಡಿದ ಎಲ್ಲರೂ ಇದು ನಿಜವಾಗಿಯೂ ಸೂಪರ್ ಎನ್ನುತ್ತಿದ್ದಾರೆ.
ಬಿಬಿಎಂಪಿ ಸೇರಿದಂತೆ ವಿವಿಧ ಕಾರ್ಪೋರೇಷನ್‌ಗಳು ಕಸವನ್ನು ಹಸಿ ಕಸ ಹಾಗೂ ಬಿಡಿ ಕಸವಾಗಿ ಬೇರ್ಪಡಿಸಿ ನೀಡುವಂತೆ ಜನರಲ್ಲಿ ಎಷ್ಟೋ ವರ್ಷಗಳ ಹಿಂದಿನಿಂದಲೂ ಮನವಿ ಮಾಡುತ್ತಲೇ ಬರುತ್ತಿದೆ. ಆದರೆ ಜನರದ್ದು ಮಾತ್ರ ನಾಯಿ ಬಾಲ ಡೊಂಕು ಎಂಬಂತೆ ತಮಗಿಷ್ಟ ಬಂದಂತೆ ಮಾಡುತ್ತಾರೆ. ಕಸವನ್ನು ಮಾತ್ರ ಅವರು ಎಷ್ಟು ಹೇಳಿದರು ವಿಭಾಜಿಸಿ ಕೊಡುವುದೇ ಇಲ್ಲ. ಇದರಿಂದ ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಸ ತೆಗೆದುಕೊಂಡು ಹೋಗಲು ಬರುವ ಸಿಬ್ಬಂದಿಗೆ ಬಹಳ ಕಷ್ಟ ಆಗುವುದಂತು ನಿಜ. ಇದರ ಜೊತೆಗೆ ಇದನ್ನು ನಂತರದಲ್ಲಿ ಬೇರ್ಪಡಿಸುವುದು ಕೂಡ ಬಹಳ ಕಷ್ಟ ಪರಿಸರಕ್ಕೂ ಇದರಿಂದ ತೀವ್ರ ಹಾನಿಯಾಗುತ್ತದೆ. ಆದರೆ ಕೆಲವು ಜನರಿಗೆ ಎಷ್ಟೇ ಜಾಗೃತಿಯ ನಂತರವೂ ಇದರ ಗಂಭೀರತೆಯ ಬಗ್ಗೆ ಅರ್ಥ ಮಾಡಿಕೊಳ್ಳುವುದೇ ಇಲ್ಲ, ಅಡುಗೆ ಮನೆಯ ಆಹಾರದ ವೇಸ್ಟ್‌ನ ಜೊತೆಗೆಯೇ ಪ್ಲಾಸ್ಟಿಕ್‌ಗಳು, ಡಯಾಪರ್‌ಗಳು, ಪ್ಯಾಡ್‌ಗಳನ್ನು ಒಟ್ಟಿಗೆ ಹಾಕಿ ಎಸೆದು ಬಿಡುತ್ತಾರೆ. ಇದರಿಂದ ಆಹಾರವರಸುವ ನಾಯಿಗಳು ಹಸುಗಳಿಗೂ ಇದರಿಂದ ಹಾನಿಯಾಗುತ್ತದೆ. ಬೆಂಗಳೂರು ಜನರ ಈ ಬದಲಾಗದ ಮನಸ್ಥಿತಿಯ ವರ್ತನೆಯ ಬಗ್ಗೆಯೂ ಈ ವೀಡಿಯೋ ಹೇಳುತ್ತಿದ್ದು, ವೀಡಿಯೋ ನೋಡಿದ ನೆಟ್ಟಿಗರು ಇದೊಂದು ವಾಸ್ತವತೆಯನ್ನು ಎತ್ತಿ ಹೇಳುತ್ತಿರುವ ವೀಡಿಯೋ ಎಂದು ಪ್ರತಿಕ್ರಿಯಿಸಿದ್ದಾರೆ.
ವೀಡಿಯೋದಲ್ಲಿ ಅಮೆರಿಕಾದಲ್ಲಿ ಕಸ ಎತ್ತಿಕೊಂಡು ಹೋಗಲು ಬರುವ ಕಾರ್ಪೋರೇಷನ್ ನೌಕರ ಎಷ್ಟೊಂದು ಜಾಲಿಯಾಗಿ ಕಸ ಎತ್ತಿಕೊಂಡು ಹೋಗುತ್ತಿದ್ದಾನೆ. ತನ್ನ ಕೆಲಸವನ್ನು ಎಷ್ಟೊಂದು ಖುಷಿಯಿಂದ ಮಾಡುತ್ತಾನೆ ಎಂಬುದನ್ನು ಮೊದಲಿಗೆ ತೋರಿಸಿ ನಂತರ ನಮ್ಮ ಬಿಬಿಎಂಪಿ ಸಿಬ್ಬಂದಿ ಹೇಗೆ ಕಸ ತೆಗೆದುಕೊಂಡು ಹೋಗಲು ಬರುತ್ತಾರೆ ಎಂಬುದನ್ನು ತೋರಿಸಿದ್ದಾರೆ. ಅದರಲ್ಲಿ ಕಸದ ಗಾಡಿ ಬಂತು ಎಂಬುದನ್ನು ಜನರಿಗೆ ಸೂಚಿಸುವ ಬಿಬಿಎಂಪಿಯ ಜಾಗೃತಿ ಮೂಡಿಸುವ ಹಾಡನ್ನು ಹಾಕಲಾಗಿದೆ. ಅಮೆರಿಕಾದಲ್ಲಿ ಅವರೇ ಮನೆ ಮುಂದಿಟ್ಟ ಕಸವನ್ನು ಹೊತ್ತೊಯ್ದರೆ, ಇಲ್ಲಿ ನಾವೇ ಕಸ ಇರುವ ಗಾಡಿಯ ಬಳಿ ಹೋಗಬೇಕು ಎಂಬುದನ್ನು ತೋರಿಸುತ್ತಿದೆ. ಜೊತೆಗೆ ಹೀಗೆ ಕಸವನ್ನು ಬೇರ್ಪಡಿಸದೇ ಹಾಕುವ ಜನರಿಗೆ ಬಿಬಿಎಂಪಿ ಉದ್ಯೋಗಿ ಬೈಯ್ಯುವ ದೃಶ್ಯವೂ ವೀಡಿಯೋದಲ್ಲಿದೆ. ಏನೋ ಅಣ್ಣ ಏನೋ ಅಕ್ಕ ಹೇಳಿದ ಮಾತನ್ನು ಕೇಳೋದೇ ಇಲ್ವಲ್ವಾ ನೀವು ಎಂದು ಆತ ಹೇಳುತ್ತಾನೆ.
ಇನ್ನು ವೀಡಿಯೋ ನೋಡಿದ ನೆಟ್ಟಿಗರು ಒಳ್ಳೆಯ ಸಂದೇಶ ನೀಡಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಜನರಿಗೆ ಮನೋರಂಜನೆಯ ಜೊತೆ ಜಾಗೃತಿ ಮೂಡಿಸಲು ಬಯಸಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಅಂಕರ್ ಅನುಶ್ರೀ ಸೇರಿದಂತೆ ಕೆಲ ಸೆಲೆಬ್ರಿಟಿಗಳು ಕೂಡ ಈ ವೀಡಿಯೋಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.