
ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಮತ್ತೆ ಚಿರತೆ ಭೀತಿ ಶುರುವಾಗಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನ ಹೊರವಲಯದಲ್ಲಿ ಚಿರತೆ ಓಡಾಟ ಹೆಚ್ಚಾಗಿದ್ದು, ಜನ ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿಗೆ ಮತ್ತೆ ಚಿರತೆ 'ಗುಮ್ಮ' ಬಂದಂತಾಗಿದ್ದು, ಜನರು ಆತಂಕದ ನೆರಳಿನಲ್ಲಿ ಬದುಕುತ್ತಿದ್ದಾರೆ.
ಬೆಂಗಳೂರಿನ ಬ್ಯಾಡರಹಳ್ಳಿ ಬಳಿಯ ಭಾರತ್ ಲೇಔಟ್‌ನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಇಡೀ ಏರಿಯಾದ ಜನರಲ್ಲಿ ನಡುಕ ಹುಟ್ಟಿಸಿದೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಮೊನ್ನೆಯೂ ಈ ಭಾಗದಲ್ಲಿ ಪತ್ತೆಯಾಗಿದ್ದ ಚಿರತೆ, ನಿನ್ನೆ ನಸುಕಿನ ಜಾವ ಭಾರತ್ ನಗರದಲ್ಲಿ ಕಾಣಿಸಿಕೊಂಡಿತ್ತು. ನಿನ್ನೆ ರಾತ್ರಿ ಸುಮಾರು 9:30ರ ವೇಳೆಗೆ ಮತ್ತೆ ರಸ್ತೆ ದಾಟಿ ಪಾರ್ಕ್ ಮುಖಾಂತರ ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಿನ್ನೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಚಿರತೆ ಎಲ್ಲಿಯೂ ಪತ್ತೆಯಾಗದ ಕಾರಣ ಅವರು ವಾಪಸ್ ತೆರಳಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಹೋದ ಕೆಲವೇ ಗಂಟೆಗಳಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಭಾರತ್ ನಗರ ಏರಿಯಾದೊಳಗೆ ಪದೇ ಪದೇ ಚಿರತೆ ಓಡಾಡುತ್ತಿರುವುದು ಸ್ಥಳೀಯರ ನಿದ್ದೆಗೆಡಿಸಿದೆ.
ಚಿರತೆ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಯ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬ್ಯಾಡರಹಳ್ಳಿ ಪೊಲೀಸರು ಜಂಟಿಯಾಗಿ ಬೃಹತ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಚಿರತೆ ಅಡಗಿದೆ ಎನ್ನಲಾದ ಪಾರ್ಕ್ ಸುತ್ತಮುತ್ತ ಈಗ ಹದ್ದಿನ ಕಣ್ಣು ಇಡಲಾಗಿದೆ.ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬಲೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಚಿರತೆ ಓಡಾಟ ನಡೆಸುವ ಪಾರ್ಕ್‌ನ ಒಂದು ಭಾಗದಲ್ಲಿ ಬಲೆಗಳನ್ನು ಹಾಕಲಾಗುತ್ತಿದೆ. ಮತ್ತೊಂದು ಭಾಗದಿಂದ ಪಟಾಕಿಗಳನ್ನು ಸಿಡಿಸುವ ಮೂಲಕ ಚಿರತೆಯನ್ನು ಒಂದು ಕಡೆಗೆ ಓಡಿಸಿ ಬಲೆಗೆ ಬೀಳಿಸಲು ಪ್ಲಾನ್ ಮಾಡಲಾಗಿದೆ. ಸದ್ಯ ಭಾರತ್ ನಗರ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಮನೆಯಿಂದ ಹೊರಬರಬಾರದು ಎಂದು ಸೂಚನೆ ನೀಡಲಾಗಿದೆ. ಜನನಿಬಿಡ ಪ್ರದೇಶದಲ್ಲೇ ಚಿರತೆ ಕಾಣಿಸಿಕೊಂಡಿರುವುದು ಬೆಂಗಳೂರಿಗರನ್ನು ಮತ್ತೆ ಆತಂಕಕ್ಕೆ ತಳ್ಳಿದೆ. ಅರಣ್ಯ ಇಲಾಖೆಯ ಈ ಕಾರ್ಯಾಚರಣೆ ಯಶಸ್ವಿಯಾಗಿ ಚಿರತೆ ಸೆರೆಯಾಗುತ್ತಾ ಎಂದು ಕಾದು ನೋಡಬೇಕಿದೆ.