ರಾಜ್ಯ ರಾಜಧಾನಿಯಲ್ಲಿ ಮೂವರಿಗೆ AY 4.2 ವೈರಸ್, ಸೋಂಕಿತರ ಪತ್ತೆ ಕಾರ್ಯ ಆರಂಭ!

By Suvarna NewsFirst Published Oct 26, 2021, 11:57 AM IST
Highlights

* ಬೆಂಗಳೂರಲ್ಲಿ ಮೂವರಿಗೆ ಹೊಸ ತಳಿ ಕೊರೋನಾ

* ದೇಶದ ಒಟ್ಟು 24 ಜನರಲ್ಲಿ ಎವೈ 4.2 ತಳಿ ಸೋಂಕು

*  ಕರ್ನಾಟಕದಲ್ಲೂ ಬ್ರಿಟನ್ನಿನ ಎವೈ 4.2 ವೈರಸ್‌ ತಳಿ ಪತ್ತೆ!

ಬೆಂಗಳೂರು(ಅ.26): ಡೆಲ್ಟಾಗಿಂತ ವೇಗವಾಗಿ ಹರಡಬಲ್ಲ ಕೊರೋನಾ ರೂಪಾಂತರಿ AY 4.2 ಸದ್ಯ ಇಡೀ ವಿಶ್ವದ ನಿದ್ದೆಗೆಡಿಸಿದೆ. ಬ್ರಿಟನ್, ಯೂರಪ್, ರಷ್ಯಾ ಅಮೇರಿಕಾದಲ್ಲಿ ಕೊರೋನಾ ಏರಿಕೆಗೆ ಕಾರಣವಾಗಿರುವ AY 4.2 ಸದ್ಯ ರಾಜ್ಯಕ್ಕೂ ದಾಪುಗಾಲು ಇಟ್ಟಿದೆ. ಹೌದು ಉದ್ಯಾನನಗರಿ ಬೆಂಗಳೂರಿನಲ್ಲಿ ಮೂವರಲ್ಲಿ ಈ ಹೊಸ ಮಾದರಿಯ ಸೋಂಕು ಕಾಣಿಸಿಕೊಂಡಿದೆ.

ಬಿಬಿಎಂಪಿ ಜುಲೈ ತಿಂಗಳಲ್ಲಿ ಕೋವಿಡ್ ಸೋಂಕಿಗೆ ಒಳಪಟ್ಟವರ ದ್ರವದ ಪರೀಕ್ಷೆ ಮಾಡಿತ್ತು. ಹೀಗಿರುವಾಗ ಜಿನೋಮಿಕ್ ಸೀಕ್ವೆನ್ಸ್ ವೇಳೆ ಹೊಸ ತಳಿ ಪತ್ತೆಯಾಗಿದ್ದು, ನಿನ್ನೆ ಸೋಮವಾರ ಈ ವರದಿ ಲಭಿಸಿದೆ. ಸದ್ಯ ಬಿಬಿಎಂಪಿ ಸೋಂಕಿತರ ಪತ್ತೆ ಕಾರ್ಯಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಸೋಂಕಿತರ ಮನೆಗೆ ತೆರಳಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ. 

"

ಮಧ್ಯಪ್ರದೇಶದಲ್ಲೂ ಕೊರೋನಾ ಹಾವಳಿ

ಬ್ರಿಟನ್‌ ಮತ್ತು ರಷ್ಯಾದಲ್ಲಿ ಹೊಸ ಕೊರೋನಾ ಪ್ರಕರಣಗಳ ಸ್ಫೋಟಕ್ಕೆ ಕಾರಣವಾಗಿರುವ ‘ಎವೈ 4.2‘ ಎಂಬ ಕೊರೋನಾದ ಹೊಸ ರೂಪಾಂತರಿ ತಳಿ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಸಾಂಕ್ರಾಮಿಕ ವೈರಸ್‌ಗಳ ಕುರಿತು ಜಾಗತಿಕ ಮಟ್ಟದಲ್ಲಿ ಮಾಹಿತಿ ಹಂಚಿಕೊಳ್ಳುವ ಸಂಸ್ಥೆಯೊಂದು ಈ ಕುರಿತು ವರದಿ ಮಾಡಿದೆ. ಈಗಾಗಲೇ ಮಧ್ಯಪ್ರದೇಶದಲ್ಲಿ ಈ ರೂಪಾಂತರಿ ಪತ್ತೆಯಾಗಿತ್ತು. ಈಗ ಕರ್ನಾಟಕ ಸೇರಿದಂತೆ ಒಟ್ಟು 7 ರಾಜ್ಯಗಳಲ್ಲಿ ಹೊಸ ತಳಿ ಇರುವುದು ಪತ್ತೆಯಾಗಿದೆ. 

ಭಾರತದಲ್ಲಿ ಮೊದಲಿಗೆ ಪತ್ತೆಯಾಗಿ, ನಂತರ ಅಮೆರಿಕ, ಬ್ರಿಟನ್‌ ಸೇರಿ ಹಲವು ದೇಶಗಳಲ್ಲಿ ಭಾರೀ ಪ್ರಮಾಣದ ಸೋಂಕು ಸಾವಿಗೆ ಕಾರಣವಾಗಿದ್ದ ಡೆಲ್ಟಾತಳಿಯ ಉಪ ತಳಿಗೆ ‘ಎವೈ 4.2‘ ಎಂದು ಹೆಸರಿಡಲಾಗಿದೆ. ಇದು ಡೆಲ್ಟಾಗಿಂತ ಹೆಚ್ಚು ಸೋಂಕುಕಾರಕ ಎಂಬುದು ವಿಜ್ಞಾನಿಗಳ ಪ್ರಾಥಮಿಕ ವಿಶ್ಲೇಷಣೆಗಳಿಂದ ಕಂಡುಬಂದಿದೆ. ಹೀಗಾಗಿಯೇ ಈ ಹೊಸ ರೂಪಾಂತರಿ ಬಗ್ಗೆ ಇದೀಗ ವಿಶ್ವದಾದ್ಯಂತ ಆತಂಕ ಎದುರಾಗಿದೆ. ಇದು ಭಾರತ ಮತ್ತು ವಿಶ್ವದ ಹಲವು ದೇಶಗಳಲ್ಲಿ 3 ಮತ್ತು 4ನೇ ಅಲೆಗೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಕೇಸು?

ಮಧ್ಯಪ್ರದೇಶ 7

ಆಂಧ್ರಪ್ರದೇಶ 7

ಕೇರಳ 4

ಕರ್ನಾಟಕ 2

ತೆಲಂಗಾಣ 2

ಮಹಾರಾಷ್ಟ್ರ 1

ಜಮ್ಮು ಮತ್ತು ಕಾಶ್ಮೀರ 1
 

click me!