Covid 19 Update: ರಾಜಧಾನಿಯಲ್ಲಿ ಮೂರೇ ದಿನಕ್ಕೆ 4 ಪಟ್ಟು ಸೋಂಕು ಹೆಚ್ಚಳ: ಬುಧವಾರ 3000+ ಕೇಸ್‌!

By Kannadaprabha NewsFirst Published Jan 6, 2022, 5:45 AM IST
Highlights

*ಮೂರೇ ದಿನಕ್ಕೆ 4 ಪಟ್ಟು ಸೋಂಕು ಹೆಚ್ಚಳ
* ರಾಜಧಾನಿಯಲ್ಲಿ183 ದಿನಗಳ ಬಳಿಕ 3000+ ಕೇಸ್‌
*ಟೆಸ್ಟ್‌ ಮಾಡಿದ 100ರಲ್ಲಿ ಐವರಿಗೆ ಕೊರೋನಾ

ಬೆಂಗಳೂರು (ಜ. 6): ರಾಜಧಾನಿಯಲ್ಲಿ ಕೊರೋನಾ ಸೋಂಕು (Covid 19) ಮೂರೇ ದಿನಕ್ಕೆ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಅಲ್ಲದೆ, ಸೋಂಕು ಪರೀಕ್ಷೆಗೊಳಗಾಗದ ಪ್ರತಿ 100 ಮಂದಿಯಲ್ಲಿ ಐದು ಮಂದಿಗೆ ಸೋಂಕು ದೃಢಪಟ್ಟಿದೆ. ನಗರದಲ್ಲಿ ಬುಧವಾರ 3605 ಮಂದಿಗೆ ಸೋಂಕು ತಗುಲಿದ್ದು, ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ. 264 ಮಂದಿ ಗುಣಮುಖರಾಗಿದ್ದು, ಇಂದಿಗೂ 14,762 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಒಟ್ಟಾರೆ ಕೊರೋನಾ ಪ್ರಕರಣಗಳ ಸಂಖ್ಯೆ 12.72 ಲಕ್ಷಕ್ಕೆ, ಗುಣಮುಖರ ಸಂಖ್ಯೆ 12.4 ಲಕ್ಷಕ್ಕೆ, ಸಾವಿಗೀಡಾದವರ ಸಂಖ್ಯೆ 16,414 ಕ್ಕೆ ಹೆಚ್ಚಳವಾಗಿದೆ.

ಜ.1ರಂದು 810, ಜ.2ರಂದು 923, ಜ.3ರಂದು 1041, ಜ.4ರಂದು 2053 ಹೊಸ ಪ್ರಕರಣಗಳು ವರದಿಯಾಗಿದ್ದವು. ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಾ ಸಾಗಿ ಬುಧವಾರ ಮೂರೂವರೆ ಸಾವಿರಕ್ಕೆ ಹೆಚ್ಚಿವೆ. ಇದರೊಂದಿಗೆ ಕಳೆದ ಮೂರು ದಿನಗಳ ಹಿಂದೆ ಒಂದು ಸಾವಿರ ಗಡಿದಾಟಿದರ ಹೊಸ ಪ್ರಕರಣಗಳು ಮೂರೇ ದಿನದಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿವೆ. 183 ದಿನಗಳ(ಜೂ.3) ಬಳಿಕೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನು ಸೋಂಕಿತರ ಸಾವಿನಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

"

100ರಲ್ಲಿ ಐವರಿಗೆ ಸೋಂಕು:

ನಗರದಲ್ಲಿ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರವು ಕೂಡಾ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 78 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, 3605 ಮಂದಿಯಲ್ಲಿ ಪಾಸಿಟಿವ್‌ ವರದಿಯಾಗಿದೆ. ಈ ಮೂಲಕ 4.6ರಷ್ಟುಪಾಸಿಟಿವಿಟಿ ದರ ದಾಖಲಾಗಿದೆ. ಅಂದರೆ, ಸೋಂಕು ಪರೀಕ್ಷೆಗೊಳಗಾಗದ 100 ಮಂದಿಯಲ್ಲಿ ಬರೋಬ್ಬರಿ ಐದು ಮಂದಿಯಲ್ಲಿ ಸೋಂಕು ದೃಢಪಟ್ಟಂತಾಗಿದೆ. ಕಳೆದ ಮೂರು ದಿನಗಳ ಹಿಂದೆ ಪಾಸಿಟಿವಿಟಿ ದರ ಶೇ.1 ಆಸುಪಾಸಿನಲ್ಲಿತ್ತು. ಪರೀಕ್ಷೆಗಳು ಹೆಚ್ಚಳವಾಗದಿದ್ದರೂ ಸೋಂಕು ದೃಢಪಡುವವರ ಪ್ರಮಾಣ ಹೆಚ್ಚಳವಾಗಿ ಪಾಸಿಟಿವಿಟಿ ದರವೂ ಏರಿಕೆಯಾಗಿದೆ.

ಅಪಾಯಮಟ್ಟಕ್ಕೆ ಬೆಂಗಳೂರು!

ವೈರಾಣು ತಜ್ಞರ ಪ್ರಕಾರ, ‘ಯಾವುದೇ ಪ್ರದೇಶದ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಿದ್ದರೆ ಆ ಪ್ರದೇಶದಲ್ಲಿ ಸೋಂಕು ನಿಯಂತ್ರಣ ಮೀರಿದೆ’ ಎಂದರ್ಥ. ತಜ್ಞರು ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾದರೆ ಲಾಕ್‌ಡೌನ್‌ ಜಾರಿಗೊಳಸಬೇಕು ಎಂದು ಸಲಹೆ ನೀಡಿದ್ದರು.

ಎಲ್ಲಿ ಎಷ್ಟುಕೇಸ್‌?

ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯದಲ್ಲಿ 50ಕ್ಕೂ ಹೆಚ್ಚು ಮೈಕ್ರೋ ಕಂಟೈನ್ಮೆಂಟ್‌ ವಲಯಗಳನ್ನು ಗುರುತಿಸಲಾಗಿದ್ದು ಪಾಲಿಕೆ ವ್ಯಾಪ್ತಿಯಲ್ಲಿ ಸಕ್ರಿಯ ಮೈಕ್ರೋ ಕಂಟೈನ್ಮೆಂಟ್‌ಗಳ ಸಂಖ್ಯೆ 184ಕ್ಕೆ ಏರಿಕೆಯಾಗಿದೆ. ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ 10 ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಬೆಳಂದೂರು ವಾರ್ಡ್‌ವೊಂದರಲ್ಲೇ 41 ಜನರಲ್ಲಿ ಸೋಂಕು ದೃಢಪಟ್ಟಿದೆ. ದೊಡ್ಡನೆಕ್ಕುಂದಿ 17, ಹಗದೂರು 17, ಎಚ್‌ಎಸ್‌ಆರ್‌ ಲೇಔಟ್‌ 13, ವರ್ತೂರು 12, ಕೋರಮಂಗಲ 12, ನ್ಯೂತಿಪ್ಪಸಂದ್ರ 11, ಹೊರಮಾವು 10, ಶಾಂತಲಾ ನಗರ 10 ಮತ್ತು ಬೇಗೂರು ವಾರ್ಡ್‌ಗಳಲ್ಲಿ 10 ಪ್ರಕರಣಗಳು ಪತ್ತೆಯಾಗಿವೆ.

ದಿನಾಂಕ - ಸೋಂಕಿತರು

ಜ.1 -810

ಜ.2-923

ಜ.3-1041

ಜ.4-2053

ಜ.5 -3605

ಯಾವುದೇ ಪಾಸ್‌ ಇಲ್ಲ:

ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಓಡಾಡಲು ನಾಗರಿಕರಿಗೆ ಪೊಲೀಸ್‌ ಇಲಾಖೆಯಿಂದ ಯಾವುದೇ ಪಾಸ್‌ ನೀಡುವುದಿಲ್ಲ. ವಿನಾಯ್ತಿ ಇರುವವರು ದಾಖಲೆ ತೋರಿಸಿ ಓಡಾಡಬಹುದು. ವಾರಾಂತ್ಯದಲ್ಲಿ ಸರ್ಕಾರದ ವಿನಾಯ್ತಿ ವಲಯ ಹೊರತುಪಡಿಸಿದರೆ ಇನ್ನುಳಿದ ಎಲ್ಲ ವಹಿವಾಟು ಸಂಪೂರ್ಣ ಬಂದ್‌ ಆಗಲಿದೆ ಎಂದು ಆಯುಕ್ತರು ಹೇಳಿದರು.ಕೊರೋನಾ ಸೋಂಕು ಹರಡುವಿಕೆಗೆ ತಡೆಗಟ್ಟಲು ಸರ್ಕಾರದ ಸೂಚನೆ, ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ. ವಾರಾಂತ್ಯದ ಕಪ್ರ್ಯೂ ಸಂದರ್ಭದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ಡಿಸಿಪಿಗಳಿಗೆ ಸೂಚಿಸಿದ್ದೇನೆ ಎಂದು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ (Kamla Pant) ಸ್ಪಷ್ಟಪಡಿಸಿದ್ದಾರೆ ಹೇಳಿದರು.

click me!