
ಬೆಂಗಳೂರು (ಜು.19) ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಹಲವು ಬಾರಿ ಚರ್ಚೆಗಳಾಗಿವೆ. ಇದೀಗ ಇತ್ತೀಚಿಗೆ ನಡೆದ ಹಲವು ಘಟನೆಗಳು ಕಾನೂನು ಸುವ್ಯವಸ್ಥೆ ಪ್ರಶ್ನಿಸುವಂತಿದೆ. ಇದೀಗ ಬೆಂಗಳೂರಿನಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದ ಘಟನೆ ನಡೆದಿದೆ. ಎರಡು ಗುಂಪುಗಳ ಯುವಕರು ಮಾರಾಮಾರಿ ನಡೆಸಿದ್ದಾರೆ. ಮಾರಕಾಸ್ತ್ರ ಹಿಡಿದು ಕೆಲ ಯುವಕರು ಮತ್ತೊಂದು ಗುಂಪಿನ ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಬೆಂಗಳೂರಿನ ಆರ್‌ಟಿ ನಗರ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಡು ರಸ್ತೆಯಲ್ಲಿ ಪುಡಿ ರೌಡಿಗಳು ಹೊಡೆದಾಡಿಕೊಂಡಿದ್ದಾರೆ. ಕಾರ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೊಬೈಲ್ ನಲ್ಲಿ ದೃಶ್ಯ ಸೆರೆಯಾಗಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಆರ್‌ಟಿ ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಾರಾಮಾರಿ ನಡೆದ ರಸ್ತೆಗಳ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಮಾರಾಕಾಸ್ತ್ರಗಳ ಮೂಲಕ ಹಲ್ಲೆ ನಡೆಸಿದ್ದಾರೆ. ಜಸ್ಟೀಸ್ ವಿಶ್ವನಾಥ್ ಶೆಟ್ಟಿ ನಿವಾಸದ ಪಕ್ಕದಲ್ಲೇ ಈ ಮಾರಾಮಾರಿ ನಡೆದಿದೆ.
ಮಾರಕಾಸ್ತ್ರ ಬಳಸಿರೋ ಕಾರಣ ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲು
ಮಾರಾಕಾಸ್ತ್ರ ಬಳಸಿರುವ ಕಾರಣ ಪೊಲೀಸರು ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಮಾರಾಕಾಸ್ತ್ರ ಬಳಕೆ, ಹಲ್ಲೆ, ಗುಂಪು ಹಲ್ಲೆ ಸೇರಿದಂತೆ ಹಲವು ನಿಯಮಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ಗುಂಪುಗಳ ಯುವಕರಿಗಾಗಿ ತೀವ್ರ ಶೋಧ ಆರಂಭಗೊಂಡಿದೆ. ಸಿಸಿಟಿವಿಯಲ್ಲಿ ಕೆಲ ಸುಳಿವು ಪತ್ತೆಯಾಗಿದ್ದು, ಶೀಘ್ರದಲ್ಲೇ ಆರೋಪಿಗಳ ಬಂಧಿಸಲು ಪೊಲೀಸರು ಸಜ್ಜಾಗಿದ್ದಾರೆ.
ಯುವಕರ ನಡುವಿನ ಜಗಳಕ್ಕೆ ಕಾರಣವೇನು?
ಯುವಕರ ಗುಂಪು ಯಾವ ಕಾರಣಕ್ಕಾಗಿ ಜಗಳ ಮಾಡಿದೆ. ಇದು ಗ್ಯಾಂಗ್ ಒಳಗಿನ ಬಡಿದಾಟವೋ ಅಥವಾ ಇತರ ಗುಂಪು ಹಲ್ಲೆಯೋ ಅನ್ನೋದರ ಕುರಿತು ತನಿಖೆ ನಡೆಯುತ್ತಿದೆ.