Jewelry Shop Fraud: ಚಿನ್ನಾಭರಣ ವ್ಯಾಪಾರಿಯಿಂದ 8Kg ಗೋಲ್ಡ್‌ ಗಟ್ಟಿ ವಂಚಿಸಿದ್ದ ಆರೋಪಿ ಬಂಧನ, ಯಾಮಾರಿಸಿದ್ದು ಹೇಗೆ?

Kannadaprabha News, Ravi Janekal |   | Kannada Prabha
Published : Jul 09, 2025, 06:46 AM ISTUpdated : Jul 09, 2025, 10:28 AM IST
Bengaluru gold theft

ಸಾರಾಂಶ

ಬೆಂಗಳೂರಿನಲ್ಲಿ ಚಿನ್ನಾಭರಣ ವ್ಯಾಪಾರಿಯೊಬ್ಬರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ವಂಚಿಸಿದ ಆರೋಪದ ಮೇಲೆ ಅಕ್ಕಸಾಲಿಗನನ್ನು ಬಂಧಿಸಲಾಗಿದೆ.

ಬೆಂಗಳೂರು (ಜುಲೈ 9): ತನ್ನ ಚಿನ್ನಾಭರಣ ವ್ಯಾಪಾರಿಯಿಂದ ಆಭರಣ ತಯಾರಿಸುವ ನೆಪದಲ್ಲಿ ಕೋಟ್ಯಂತರ ರು. ಮೌಲ್ಯದ ಬಂಗಾರವನ್ನು ಪಡೆದು ವಂಚಿಸಿದ್ದ ಆರೋಪದ ಮೇರೆಗೆ ಅಕ್ಕಸಾಲಿಗನೊಬ್ಬನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹನುಮಂತನಗರದ ನಿವಾಸಿ ಮನೀಷ್ ಕುಮಾರ್ ಸೋನಿ ಬಂಧಿತನಾಗಿದ್ದು, ಆರೋಪಿಯಿಂದ 3.1 ಕೆಜಿ ಚಿನ್ನ ಹಾಗೂ 8.53 ಲಕ್ಷ ರು. ನಗದು ಸೇರಿದಂತೆ ಒಟ್ಟು 2.5 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಜಯನಗರದ 3ನೇ ಹಂತದ ಚಿನ್ನಾಭರಣ ಮಾರಾಟ ಮಳಿಗೆ ವ್ಯಾಪಾರಿಗೆ ಮನೀಷ್ ವಂಚಿಸಿದ್ದ. ಈ ಬಗ್ಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್ ದೀಪಕ್ ನೇತೃತ್ವದ ತಂಡವು, ಗೋವಾದಲ್ಲಿ ಆರೋಪಿಯನ್ನು ಸೆರೆ ಹಿಡಿದು ನಗರಕ್ಕೆ ಕರೆತಂದಿದೆ.

8 ಕೆಜಿ ಚಿನ್ನ ಟೋಪಿ ಹಾಕಿದ್ದ ಅಕ್ಕಸಾಲಿಗ:

ರಾಜಸ್ಥಾನ ಮೂಲದ ಮನೀಷ್, ತನ್ನ ಕುಟುಂಬದ ಜತೆ ಹನುಮಂತನಗರದಲ್ಲಿ ನೆಲೆಸಿದ್ದಾನೆ. ಹಲವು ವರ್ಷಗಳಿಂದ ಜಯನಗರದ 1ನೇ ಹಂತದಲ್ಲಿ ಚಿನ್ನ ಕರಗಿಸುವ ಹಾಗೂ ಹೊಸ ವಿನ್ಯಾಸದ ಆಭರಣ ತಯಾರಿಸುವ ಮಳಿಗೆಯನ್ನು ಆತ ನಡೆಸುತ್ತಿದ್ದಾನೆ. ನಾಲ್ಕು ವರ್ಷಗಳಿಂದ ಆತನಿಗೆ ದೂರುದಾರ ವ್ಯಾಪಾರಿ ಪರಿಚಯಸ್ಥರಾಗಿದ್ದರು. ಈ ಗೆಳೆತನದಲ್ಲಿ ಆಗಾಗ್ಗೆ ಚಿನ್ನ ಗಟ್ಟಿ ಕರಗಿಸಿ ಆಭರಣ ತಯಾರಿಸಿ ಕೊಡುವ ವ್ಯವಹಾರವನ್ನು ಅವರೊಂದಿಗೆ ಮನೀಷ್ ನಡೆಸಿದ್ದ.

ಅದೇ ರೀತಿ ಕೆಲ ದಿನಗಳ ಹಿಂದೆ ಹೊಸ ವಿನ್ಯಾಸದ ಆಭರಣ ತಯಾರಿಕೆಗೆ 8.3 ಕೆಜಿ ಚಿನ್ನದ ಗಟ್ಟಿಯನ್ನು ಮನೀಷ್ ಗೆ ದೂರುದಾರರು ಕೊಟ್ಟಿದ್ದರು. ಆದರೆ ಪೂರ್ವ ಒಪ್ಪಂದಂತೆ ಆತ ಆಭರಣ ತಯಾರಿಸಿ ದೂರುದಾರರಿಗೆ ಕೊಡದೆ ಟೋಪಿ ಹಾಕಿದ್ದ. ಚಿನ್ನದ ಬಗ್ಗೆ ಪ್ರಶ್ನಿಸಿದರೆ ಏನೇನೋ ಸಬೂಬು ಹೇಳಿ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಕೊನೆಗೆ ಬೇಸತ್ತು ಜಯನಗರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಂಚನೆ ಪ್ರಕರಣ ದಾಖಲಾದ ಕೂಡಲೇ ನಗರ ತೊರೆದು ಗೋವಾವನ್ನು ಆರೋಪಿ ಸೇರಿದ್ದ. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಹನುಮಂತನಗರದ ಮನೆಯಿಂದ 3.26 ಕೆಜಿ ಚಿನ್ನ ಜಪ್ತಿ ಮಾಡಿದ್ದಾರೆ. ಇನ್ನುಳಿದ ಆಭರಣ ಕುರಿತು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್, ದರ್ಶನ್‌ಗೆ ಜೈಲಲ್ಲೊಂದು ಶಾಕ್, ಕೋರ್ಟ್‌ನಲ್ಲೊಂದು ಆಘಾತ!
ಬೆಂಗಳೂರು ಏರ್‌ಪೋರ್ಟ್‌ನಲ್ಲಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು, ಕೆಂಡಾಮಂಡಲವಾದ ಪ್ರಯಾಣಿಕರಿಂದ ಪ್ರತಿಭಟನೆ