ಮಾಜಿ ಸಿಎಂ ಎಸ್ಎಂ ಕೃಷ್ಣ ಬೆಳಗಿನ ಜಾವ ಸುಮಾರು 2.45ಕ್ಕೆ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ಹಿಂದಿರುಗಿದ್ದರು. ಇಂದು ಸದಾಶಿವನಗರದ ನಿವಾಸದಲ್ಲಿ ಎಸ್ಎಂ ಕೃಷ್ಣ ನಿಧನರಾಗಿದ್ದಾರೆ.
ಬೆಂಗಳೂರು: ಮಾಜಿ ಸಿಎಂ ಎಸ್ಎಂ ಕೃಷ್ಣ ಬೆಳಗಿನ ಜಾವ ಸುಮಾರು 2.45ಕ್ಕೆ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ಹಿಂದಿರುಗಿದ್ದರು. ಇಂದು ಸದಾಶಿವನಗರದ ನಿವಾಸದಲ್ಲಿ ಎಸ್ಎಂ ಕೃಷ್ಣ ನಿಧನರಾಗಿದ್ದಾರೆ.
ದೀರ್ಘ ಕಾಲದವರೆಗೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಎಸ್‌ಎಂ ಕೃಷ್ಣ ಅವರು ರಾಜಕೀಯ ಅಂತ್ಯದ ಸಂದರ್ಭದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿದ್ದರಿಂದ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕವೂ ಎಸ್ ಎಂ ಕೃಷ್ಣ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಎಸ್ಎಂ ಕೃಷ್ಣ ಅವರಿಗೆ 92 ವರ್ಷ ವಯಸ್ಸಾಗಿತ್ತು.
ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಎಸ್‌ಎಂ ಕೃಷ್ಣ ಅವರು ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬದ ಅತ್ಯಾಪ್ತರಲ್ಲಿ ಒಬ್ಬರಾಗಿದ್ದರು. ಸಭ್ಯ ರಾಜಕಾರಣಿ ಅಂತಾನೇ ಎಸ್ಎಂ ಕೃಷ್ಣ ಗುರುತಿಸಿಕೊಂಡಿದ್ದರು. ಇದೀಗ ಸದಾಶಿವನಗರದ ಬಳಿ ಮುಂಜಾಗ್ರತಕ್ರಮವಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಅಂತಿಮವಿಧಿ ವಿಧಾನಗಳ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಬೇಕಿದೆ. ಚಳಿಗಾಲದ ಅಧಿವೇಶನ ಹಿನ್ನೆಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲಾ ಸಚಿವರು, ಶಾಸಕರು ಮತ್ತು ವಿಪಕ್ಷ ನಾಯಕರು ಬೆಳಗಾವಿಯಲ್ಲಿದ್ದು, ಸಂಜೆ ವೇಳೆಗೆ ಬೆಂಗಳೂರಿನತ್ತ ಆಗಮಿಸುವ ಸಾಧ್ಯತೆಗಳಿವೆ.
ಎಸ್ಎಂ ಕೃಷ್ಣ ಅವರಿಗೆ 92 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಪ್ರೇಮಾ, ಇಬ್ಬರು ಮಕ್ಕಳಾದ ಮಾಳವಿಕಾ ಕೃಷ್ಣ ಮತ್ತು ಶಾಂಭವಿ ಕೃಷ್ಣ, ಮೊಮ್ಮಕ್ಕಳು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಎಸ್ ಎಂ ಕೃಷ್ಣ ಎಂದೇ ಖ್ಯಾತರಾಗಿರುವ ಇವರ ಪೂರ್ಣ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಮೇ 1, 1932 ರಂದು ಮಂಡ್ಯದಲ್ಲಿ ಜನಿಸಿದರು.
ಕೃಷ್ಣ ಅವರು 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ 16 ನೇ ಮುಖ್ಯಮಂತ್ರಿಗಳಾಗಿದ್ದರು. ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಕೂಡ ಒಬ್ಬರು. 2004 ರಿಂದ 2008 ರವರೆಗೆ ಮಹಾರಾಷ್ಟ್ರದ 19 ನೇ ರಾಜ್ಯಪಾಲರಾಗಿದ್ದರು. 2009ರಿಂದ 2012ರವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿಯು ಕೂಡ ಕರ್ತವ್ಯ ನಿರ್ವಹಿಸಿದ್ದಾರೆ.
ಮೊದಲಿಗೆ ಪ್ರಜಾ ಸೋಷಲಿಸ್ಟ್ ಪಾರ್ಟಿ (1962 ರಿಂದ 1971), ಬಳಿಕ ಕಾಂಗ್ರೆಸ್ ಸೇರಿ (1971ರಿಂದ 2017) ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶಗಳ ಕಾರಣ ಮಾರ್ಚ್ 2017ರಲ್ಲಿ ಬಿಜೆಪಿ ಪಕ್ಷ ಸೇರಿದ್ದರು. ಇವರಿಗೆ 2023ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೆಲ ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.