ಬೆಳಗಾವಿ ಜಿಲ್ಲೆಯಲ್ಲಿಯೇ 6 ತಿಂಗಳಲ್ಲಿ 29 ಬಾಣಂತಿಯರು, 1 ವರ್ಷದಲ್ಲಿ 322 ನವಜಾತ ಶಿಶುಗಳ ಸಾವು

By Kannadaprabha News  |  First Published Dec 9, 2024, 6:22 AM IST

ಬೆಳಗಾವಿ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 6 ತಿಂಗಳಲ್ಲಿ 29 ಬಾಣಂತಿಯರು ಮತ್ತು ಒಂದು ವರ್ಷದಲ್ಲಿ 322 ನವಜಾತ ಶಿಶುಗಳು ಮೃತಪಟ್ಟಿದ್ದಾರೆ. ರಕ್ತಸ್ರಾವ, ವೈದ್ಯರ ನಿರ್ಲಕ್ಷ್ಯ, ತೂಕ ಕಡಿಮೆ, ನ್ಯುಮೋನಿಯಾ ಸೇರಿದಂತೆ ಹಲವು ಕಾರಣಗಳನ್ನು ಆರೋಗ್ಯ ಇಲಾಖೆ ನೀಡಿದೆ.


ಶ್ರೀಶೈಲ ಮಠದ, ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಬೆನ್ನಹಿಂದೆಯೇ ಬೆಳಗಾವಿ ಬಿಮ್ಸ್‌ ಸೇರಿಂತೆ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 6 ತಿಂಗಳ ಅವಧಿಯಲ್ಲಿ 29 ಬಾಣಂತಿಯರು ಹಾಗೂ ಒಂದು ವರ್ಷದ ಅವಧಿಯಲ್ಲಿ 322 ನವಜಾತ ಶಿಶುಗಳು ಮೃತಪಟ್ಟಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಬಾಣಂತಿಯರು ಹಾಗೂ ನವಜಾತ ಶಿಶುಗಳ ಮರಣ ಮೃದಂಗಕ್ಕೆ ಆರೋಗ್ಯ ಇಲಾಖೆ ಹಲವಾರು ಕಾರಣಗಳನ್ನು ಕೂಡ ಕೊಟ್ಟಿದೆ. ಆದರೆ, ಇದು ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

Tap to resize

Latest Videos

2024ರ ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ ಜಿಲ್ಲೆಯಲ್ಲಿ 29 ಬಾಣಂತಿಯರ ಸಾವಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ, ರಕ್ತಸ್ರಾವ, ವೈದ್ಯರ ನಿರ್ಲಕ್ಷ್ಯ ಸೇರಿದಂತೆ ಹಲವು ಕಾರಣದಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿಕೊಂಡಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 2024ರ ಜನವರಿಯಿಂದ 322 ಶಿಶುಗಳು ಮೃತಪಟ್ಟಿವೆ. ಈ ಪೈಕಿ ಬಿಮ್ಸ್‌ ಆಸ್ಪತ್ರೆಯಲ್ಲಿ 172 ಶಿಶುಗಳು ಮೃತಪಟ್ಟಿರುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಪ್ರತಿ ತಿಂಗಳು 45 ರಿಂದ 52 ಸರಾಸರಿಯಲ್ಲಿ ನವಜಾತ ಶಿಶುಗಳು ಮರಣ ಹೊಂದಿವೆ. ತೂಕ ಕಡಿಮೆ, ಸರಿಯಾಗಿ ಬೆಳವಣಿಗೆ ಆಗದೆ ಇರುವುದು, ಸೂಕ್ತ ಸಮಯದಲ್ಲಿ ಆಮ್ಲಜನಕ ಚಿಕಿತ್ಸೆ ಸಿಗದಿರುವುದು,‌ ನ್ಯುಮೋನಿಯಾ, ಉಸಿರುಗಟ್ಟುವಿಕೆ ಮತ್ತು ಅಪೌಷ್ಟಿಕತೆಯಿಂದ ಶಿಶುಗಳು ಮೃತಪಟ್ಟಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 29 ಬಾಣಂತಿಯರು ಹಾಗೂ ಒಂದು ವರ್ಷದ ಅವಧಿಯಲ್ಲಿ 322 ಶಿಶುಗಳು ಮೃತಪಟ್ಟಿವೆ ಎಂದು ಪ್ರಭಾರಿ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಶರಣಪ್ಪ ಗಡೇದ ತಿಳಿಸಿದ್ದಾರೆ.

ಬಳ್ಳಾರಿಯ ಬಿಮ್ಸ್‌ನಲ್ಲಿ ಬಾಣಂತಿಯರ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಇತ್ತೀಚಿಗೆ ಬೆಳಗಾವಿ ಜಿಲ್ಲಾಸ್ಪತ್ರೆ ಔಷಧ ಉಗ್ರಾಣದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಬೆಳಗಾವಿ ಲೋಕಾಯುಕ್ತ ಎಸ್​ಪಿ ಹನುಮಂತರಾಯ ನೇತೃತ್ವದಲ್ಲಿ 8 ಅಧಿಕಾರಿಗಳಿಂದ ಉಗ್ರಾಣದಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪಿಬಿಪಿ ಸಂಸ್ಥೆ‌‌ ಸರಬರಾಜು ಮಾಡಿರುವ ಐವಿ ಗ್ಲುಕೋಸ್ ಬಾಕ್ಸ್​ಗಳು ಪತ್ತೆಯಾಗಿದ್ದವು.

ಇದನ್ನೂ ಓದಿ: ಬಾಣಂತಿಯರ ಸರಣಿ ಸಾವಿಗೆ ನ್ಯಾಯ ಸಿಗುತ್ತಾ? ದಿನೇಶ್ ಗುಂಡೂರಾವ್ ನಡೆಸಿದ ಸಭೆಯಲ್ಲಿ ಆಗಿದ್ದೇನು?

ಬೆಳಗಾವಿ ಜಿಲ್ಲೆಯಾದ್ಯಂತ ಏಪ್ರಿಲ್ ತಿಂಗಳಲ್ಲೇ ಆರ್​ಎಲ್​ಎಸ್​​ ಐವಿ ಗ್ಲುಕೋಸ್ ಪೂರೈಕೆಯಾಗಿದ್ದು, ಎಲ್ಲೆಲ್ಲಿ ಪೂರೈಕೆಯಾಗಿದೆ ಎಂಬ ಬಗ್ಗೆ ಉಗ್ರಾಣ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಪೂರೈಕೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.

ಬೆಳಗಾವಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗೂ ನವಜಾತ ಶಿಶುಗಳ ಸರಣಿ ಸಾವು ದುರದೃಷ್ಟಕರ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.

ಇದನ್ನೂ ಓದಿ: ವಿರೋಧಿಗಳ ಟೀಕೆಗೆ ಮತದಾರ ತಕ್ಕ ಉತ್ತರ ನೀಡಿದ್ದಾನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

click me!