ಜ. 11-12ರಂದು ಎರಡು ದಿನಗಳ ಉತ್ಸವ, ಈ ಬಾರಿ ನಾಲ್ಕು ವೇದಿಕೆ| ಹಳೆಯ ಕಾರುಗಳ ರ‍್ಯಾಲಿ ಈ ಬಾರಿ ವಿಶೇಷ| ಆಗಸದಿಂದ ಹಂಪಿ ನೋಡಲು ಈ ಬಾರಿಯೂ ಅವಕಾಶ|ಹಂಪಿಯಲ್ಲಿ ವರ್ಷವಿಡೀ ಕಾರ್ಯಕ್ರಮ|
ಬಳ್ಳಾರಿ/ಹೊಸಪೇಟೆ[ನ.6]: ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಜನವರಿ 11 ಮತ್ತು 12 ರಂದು ಹಮ್ಮಿಕೊಳ್ಳಲು ನಿರ್ಧರಿಸಿರುವ ‘ಹಂಪಿ ಉತ್ಸವ’ದ ಸಿದ್ಧತೆಯ ಕಾರ್ಯ ಶುರುವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹಾಗೂ ಜಿಲ್ಲೆಯ ಎಲ್ಲ ಶಾಸಕರ ಸಮ್ಮುಖದಲ್ಲಿ ಅಕ್ಟೋಬರ್ 22ರಂದು ನಗರದಲ್ಲಿ ಜರುಗಿದ ತ್ರೈಮಾಸಿಕ ಸಭೆಯಲ್ಲಿ ಉತ್ಸವ ನಡೆಸುವ ಕುರಿತು ನಿರ್ಧಾರ ಕೈಗೊಳ್ಳುತ್ತಿದ್ದಂತೆಯೇ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಹಂಪಿಯಲ್ಲಾಗಬೇಕಾದ ಪೂರಕ ಸಿದ್ಧತೆಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಮಂಗಳವಾರ ಉತ್ಸವ ಜರುಗುವ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಬಾರಿ ನಾಲ್ಕು ವೇದಿಕೆಗಳು:
ಈ ಬಾರಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದ್ದು, ವಿಜಯನಗರ ವೈಭವವನ್ನು ಪ್ರತಿಬಿಂಬಿಸುವ ವಸಂತ ವೈಭವ, ತುಂಗಾ ಆರತಿ, ಹಂಪಿ ಬೈ ನೈಟ್, ಹಂಪಿ ಬೈಸ್ಕೈ ಆಯೋಜಿಸಲಾಗುವುದು. ಉತ್ಸವದಲ್ಲಿ ಶ್ವಾನ ಪ್ರದರ್ಶನ, ಕುಸ್ತಿ ಸ್ಪರ್ಧೆ, ಮೆಹಂದಿ, ರಂಗೊಲಿ ಸ್ಪರ್ಧೆ, ಕರಕುಶಲ ವಸ್ತುಗಳ ಪ್ರದರ್ಶನ, ದೇಸಿ ಆಹಾರ, ಫಲಪುಷ್ಪ ಪ್ರದರ್ಶನ, ಶಿಲ್ಪಕಲಾ ಶಿಬಿರ, ಚಿತ್ರಕಲಾ ಶಿಬಿರ, ಫೋಟೋ ಸ್ಪರ್ಧೆ, ಮಹಿಳೆಯರಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಗತ್ಯ ವಿವರ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಳೆಯ ಕಾರುಗಳ ರ‍್ಯಾಲಿ:
ಈ ಬಾರಿ ವಿಶೇಷವಾಗಿ ಹಳೆಯ ಕಾರ್‌ಗಳ ರ‍್ಯಾಲಿ ನಡೆಸಲಾಗುವುದು. ಹೊಸಪೇಟೆ ನಗರದಿಂದ ಹಂಪಿವರೆಗೆ ರಾರಯಲಿ ನಡೆಯಲಿದೆ. ನೂರಾರು ಕಾರುಗಳು ರಾರಯಲಿಯಲ್ಲಿ ಪಾಲ್ಗೊಳ್ಳುವುದರಿಂದ ನೋಡಲು ಆಕರ್ಷಣೀಯವಾಗಿರುತ್ತದೆ. ಹಂಪಿ ಉತ್ಸವ ಕುರಿತು ಪ್ರಚಾರವನ್ನು ಮಾಡಿದಂತಾಗುತ್ತದೆ. ಈ ಕಾರಣಕ್ಕಾಗಿ ರ‍್ಯಾಲಿ ಆಯೋಜಿಸಲಾಗಿದೆ.
ಸುರಕ್ಷತೆ ದೃಷ್ಟಿಯಿಂದ ಎಲ್ಲ ಕಡೆ ತಾತ್ಕಾಲಿಕವಾಗಿ ಸಿಸಿ ಟಿವಿಗಳನ್ನು ಅಳವಡಿಸಲಾಗುವುದು. ವೇದಿಕೆ ನಿರ್ಮಾಣ, ಆಮಂತ್ರಣ ಪತ್ರಿಕೆ, ಕರಪತ್ರ, ಪಾಸ್ ಸೇರಿದಂತೆ ಎಲ್ಲವುಗಳಿಗೆ ಟೆಂಡರ್ ಕರೆಯಲಾಗುವುದು ಎಂದರಲ್ಲದೆ, ಟೆಂಡರ್ ಪ್ರಕ್ರಿಯೆ ಕೂಡಲೇ ಆರಂಭಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಧಿಕಾರಿಗಳು ತಮಗೆ ಸೂಚನೆ ನೀಡಿದಂತೆ ಸಿದ್ಧತೆಗಳನ್ನು ಆರಂಭಿಸಿ. ಡಿಸೆಂಬರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚವರೊಂದಿಗೆ ಸಭೆ ನಡೆಸಲಾಗುವುದು ಎಂದರಲ್ಲದೆ, ಹಂಪಿಉತ್ಸವವನ್ನು ಮತ್ತಷ್ಟೂಆಕರ್ಷಣೀಯವಾಗಿಸುವ ದಿಸೆಯ ಸಲಹೆಗಳಿದ್ದರೆ ನೀಡಿ, ಅದನ್ನು ಜಾರಿಗೊಳಿಸೋಣ ಎಂದು ಅಧಿಕಾರಿಗಳು ಹಾಗೂ ಪತ್ರಕರ್ತರಿಗೆ ಕೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಎದುರು ಬಸವಣ್ಣ ಮಂಟಪ, ಗಾಯಿತ್ರಿ ಪೀಠ, ಮಾಧ್ಯಮ ಗ್ಯಾಲರಿ, ಗ್ರೀನ್ ರೂಂ, ಮಳಿಗೆಗಳು, ಪಾರ್ಕಿಂಗ್ ಪ್ರದೇಶ, ವಿರುಪಾಕ್ಷೇಶ್ವರ ದೇವಸ್ಥಾನ ಆವರಣ ಮತ್ತಿತರ ಕಡೆಗಳಲ್ಲಿ ಓಡಾಡಿ ಪರಿಶೀಲಿಸಿದರು.
ಕಳೆದ ಉತ್ಸವದಲ್ಲಿ ಕೈಗೊಂಡ ಎಲ್ಲ ಸಿದ್ಧತೆಗಳನ್ನು ಈ ಬಾರಿಯೂ ಮಾಡಬೇಕು. ಯಾವುದಕ್ಕೂ ಕೊರತೆಯಾಗಬಾರದು. ಏನೇ ಸಮಸ್ಯೆ ಅಥವಾ ಗೊಂದಲವಿದ್ದರೆ ಮಾತನಾಡಿ ಪರಿಹರಿಸಿಕೊಳ್ಳಬೇಕು. ಉತ್ಸವ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ಎಲ್ಲ ಅಧಿಕಾರಿಗಳು ಶ್ರಮಿಸಬೇಕು. ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ಸಮಿತಿಗಳ ಅಧ್ಯಕ್ಷರುಗಳಿಗೆ ಸಭೆ ಕರೆದು ಸೂಚನೆ ನೀಡಲಾಗುವುದು.
10 ದಿನದೊಳಗೆ ತಮ್ಮ ಅಂದಾಜು ವೆಚ್ಚದ ವಿವರ ಸಲ್ಲಿಸಬೇಕು ಎಂದು ಸೂಚಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಕೆ. ನಿತೀಶ್, ಹೊಸಪೇಟೆ ಸಹಾಯಕ ಆಯುಕ್ತ ಶೇಖ್ ತನ್ವೀರ್, ಪ್ರೊಬೆಷನರಿ ಐಎಎಸ್ ಈಶ್ವರ್ ಕಾಂಡೂ, ಅಪರ ಜಿಲ್ಲಾಧಿಕಾರಿ ಮಂಜುನಾಥ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಡಿಯುಡಿಸಿ ಯೋಜನಾ ನಿರ್ದೇಶಕ ರಮೇಶ್, ಪಿಎನ್ ಲೋಕೇಶ್, ಐಎಎಸ್ ಅಧಿಕಾರಿ ಕಾಳಿಮುತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ರಾಜಪ್ಪ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ ಸೇರಿದಂತೆ ಲೋಕೋಪಯೋಗಿ, ನಿರ್ಮಿತಿ ಕೇಂದ್ರ, ಭೂಸೇನಾ ನಿಗಮ, ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಹಂಪಿಯಲ್ಲಿ ವರ್ಷವಿಡೀ ಕಾರ್ಯಕ್ರಮ:
ಹಂಪಿಗೆ ದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ವರ್ಷಪೂರ್ತಿ ಹಂಪಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಘಟಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ, ವಿಷಯಾಧಾರಿತ ಕಾರ್ಯಕ್ರಮಗಳು, ಮ್ಯಾರಾಥಾನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಮೂಲಕ ಪ್ರತಿ ತಿಂಗಳ ನಮ್ಮ ಹಂಪಿ ಉತ್ಸವ ನಡೆಸಿದಂತಾಗುತ್ತದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಮ್ಮ ಹಂಪಿ ಕಡೆ ಮುಖಮಾಡಿ ಇಲ್ಲಿನ ಶಿಲ್ಪಕಲಾ ಸೌಂದರ್ಯ ಮತ್ತು ವೈಭವ ಸವಿಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದರು.
ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವಾದ ಯೋಜನೆಯೊಂದನ್ನು ಸಿದ್ದಪಡಿಸುವಂತೆ ಹೊಸಪೇಟೆ ಸಹಾಯಕ ಆಯುಕ್ತ ಶೇಖ್ ತನ್ವೀರ್ ಅವರಿಗೆ ಡಿಸಿ ಅವರು ಸೂಚಿಸಿದರು.