ಈರುಳ್ಳಿ ಬೆಳೆದು ಕಣ್ಣೀರಿಟ್ಟ ರೈತರು ಅತಿಯಾದ ಮಳೆಯಿಂದ ಬೆಳೆಹಾನಿ | ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ| ಬೆಲೆ ಕುಸಿತದಿಂದ ಕಂಗಾಲಾದ ಅನ್ನದಾತ|ಕಳಪೆ ಬೀಜ ವಿತರಣೆ ಮಾಡಿ ರೈತರಿಗೆ ಮೋಸ|
ವಿಶ್ವನಾಥ ಬಾವಿಕಟ್ಟಿ
ಹಗರಿಬೊಮ್ಮನಹಳ್ಳಿ[ನ.4]: ತಾಲೂಕಿನಲ್ಲಿ ಇತ್ತೀಚೆಗೆ ಸುಮಾರು 15 ದಿನ ಹಿಡಿದಿದ್ದ ಮಳೆ ಈಗ ಕಡಿಮೆಯಾಗಿದೆ. ಆದರೆ ನೆರೆಯಿಂದ ಆದ ಅನಾಹುತ ಲೆಕ್ಕ ಇಲ್ಲದಷ್ಟು. ಅದೇ ರೀತಿ ಈ ಬಾರಿ ಈರುಳ್ಳಿ ಬೆಳೆದ ರೈತರ ಮುಖ ಬಾಡುತ್ತಿದೆ. ಒಂದು ಕಡೆ ಮಳೆಗೆ ಈರುಳ್ಳಿ ಬೆಳೆ ಬಲಿಯಾದರೆ, ಮತ್ತೊಂದು ಕಡೆ ಬೆಲೆ ಕುಸಿತದಿಂದ ಮತ್ತಷ್ಟು ಕಂಗಾಲಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ತಾಲೂಕಿನಲ್ಲಿ ಈರುಳ್ಳಿ ಬೆಳೆಗಾರರು ಹೆಚ್ಚಾಗುತ್ತಿದ್ದಾರೆ.
ಈ ವರ್ಷ ತಾಲೂಕಿನಲ್ಲಿ 5 ಸಾವಿರ ಎಕರೆಗೂ ಅಧಿಕ ಈರುಳ್ಳಿ ಬಿತ್ತನೆಯಾಗಿದೆ. 2012 ರಲ್ಲಿ ಈ ಭಾಗದ ತಂಬ್ರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ತಂಬ್ರಯಹಳ್ಳಿ, ಬನ್ನಿಗೋಳ, ಕೃಷ್ಣಾಪುರ, ಶಿಗೇನಹಳ್ಳಿ, ಮುತ್ಕೂರು, ಕಿತ್ನೂರು, ತೆಲುಗೋಳಿ ಹಾಗೂಚಿಲುಗೋಡು ವ್ಯಾಪ್ತಿಯಲ್ಲಿಯೇ ಸುಮಾರು 12 ಕೋಟಿಗೂ ಅಧಿಕ ಮೊತ್ತದ ಈರುಳ್ಳಿ ಬೆಳೆ ಬೆಳೆದಿದ್ದರು. ಬನ್ನಿಗೋಳ ಗ್ರಾಮವೊಂದರಲ್ಲಿಯೇ 8 ಕೋಟಿಗೂ ಅಧಿಕ ಈರುಳ್ಳಿ ಬೆಳೆ ಬಂದಿತ್ತು. ಅಂದಿನಿಂದ ಇಂದಿನವರೆಗೂ ಈ ಭಾಗದಲ್ಲಿ ಈರುಳ್ಳಿ ಬೆಳೆಗಾರರು ಹೆಚ್ಚಾಗುತ್ತಿದ್ದಾರೆ. ಆದರೆ ಈ ಬಾರಿ ರೈತರು ಒಂದೆಡೆ ನಿರಂತರ ಮಳೆಯಿಂದ ನಷ್ಟ ಅನುಭವಿಸಿದ್ದಾರೆ. ಇನ್ನೊಂದೆಡೆ ಖಾಸಗಿ ಕಂಪನಿಯವರು ಕಳಪೆ ಬೀಜ ವಿತರಿಸಿದ್ದು, ಇದರಿಂದ ಉತ್ತಮ ಬೆಳೆ ಬಂದಿಲ್ಲ ಎಂದು ರೈತರು ಆರೋಪಿಸುತ್ತಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಸ್ಟ್ ವೆಸ್ಟ್ ಕಂಪನಿಯ ಪ್ರೇಮ್ ಬೀಜ ಈ ಕಳೆದೆರಡು ವರ್ಷಗಳಿಂದ ಕಳಪೆಯಿಂದ ಕೂಡಿದ್ದು, ಇದನ್ನು ನಂಬಿರುವ ರೈತರಿಗೆ ಮೋಸವಾಗುತ್ತಿದೆ ಎಂದು ಈ ಭಾಗದ ರೈತರ ಆರೋಪ. ಒಂದು ಗಡ್ಡೆಯಲ್ಲಿ ಎರಡು ಎಸಳು ಹೊರಟು, ಅದು ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಂಡಿದೆ. ಇದರೊಂದಿಗೆ ಮಳೆಯ ಚೆಲ್ಲಾಟದಲ್ಲಿಈ ಗಡ್ಡೆ ಸಂಪೂರ್ಣ ಕೊಳೆತು ಹೋಗುತ್ತಿದೆ. ಕೊನೆಗೆ ತಿಪ್ಪೆಸೇರಿದ ಉದಾಹರಣೆ ಕೂಡ ಇದೆ ಎಂದು ರೈತರು ಆರೋಪಿಸುತ್ತಾರೆ. ತಾಲೂಕಿನ ಬನ್ನಿಗೋಳ ಗ್ರಾಮವೊಂದರಲ್ಲಿಯೇ ತಿಪ್ಪೆಸೇರಿದ ಈರುಳ್ಳಿಯಿಂದ ಕೊಳೆತು ದುರ್ನಾತ ಬೀರುತ್ತಿದೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ಆಗಿರುವ ನಷ್ಟವನ್ನು ತುಂಬಲು ಯಾರಿಂದಲೂ ಸಾಧ್ಯವಾಗದು.
ಈರುಳ್ಳಿ ಬೆಲೆ ಕುಸಿತದಿಂದ ಬೆಂಗಳೂರಿಗೆ ತೆಗೆದುಕೊಂಡು ಹೋದ ಲಾರಿ ಬಾಡಿಗೆ ನೀಡದೆ ಅಲ್ಲೆ ಬಿಟ್ಟು ಬಂದ ರೈತರು ಕಣ್ಣೀರು ಹಾಕುತಿದ್ದಾರೆ. ತಾಲೂಕು ಆಡಳಿತ ನಷ್ಟವಾಗಿರುವ ಬೆಳೆಯ ಬಗ್ಗೆ ಸಮೀಕ್ಷೆ ಮಾಡಲು ಸೂಚಿಸಿದೆಯಾದರೂ ಸರ್ಕಾರ ಪರಿಹಾರ ವಿತರಣೆಯಲ್ಲಿ ರೈತರಿಗೆ ಆಗುವ ನಷ್ಟವನ್ನು ತುಂಬಿಕೊಡಲು ಸಾಧ್ಯವಾಗದು ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಒಂದು ಎಕರೆ ಈರುಳ್ಳಿ ಬೆಳೆಗೆ ಕನಿಷ್ಠ 70 ಸಾವಿರಗಳಿಗೂ ಹೆಚ್ಚು ಖರ್ಚು ತಗಲುತ್ತೆ. ಆದರೆ, ಬೆಲೆ ಕುಸಿದಿರುವ ಹಿನ್ನೆಲೆ ಒಂದು ಎಕರೆಗೆ 40 ಸಾವಿರ ಬೆಲೆ ಸಿಗುತ್ತೆ. ಇದರಿಂದ ರೈತರು ಪ್ರತಿವರ್ಷ ಕೈ ಸುಟ್ಟುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೂಡ ಇದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಸೂಚಿಸುವ ಜತೆಗೆ, ರಫ್ತು ಕ್ರಮ ಕೈಗೊಂಡರೆ ರೈತರಿಗೆ ಅನುಕೂಲವಾಗುತ್ತದೆ
ಇಂದು ಈರುಳ್ಳಿ ಬೆಳೆ ಬೆಳೆದವರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಕಳಪೆ ಬೀಜ ವಿತರಣೆ ಮಾಡಿ ರೈತರಿಗೆ ಮೋಸವಾಗಿದೆ. ಕಂಪನಿಯ ವಿರುದ್ಧ ಕ್ರಮಕೈಗೊಳ್ಳಬೇಕು. ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಸರ್ಕಾರ ನೀಡಬೇಕು ಎಂದು ಹಗರಿಬೊಮ್ಮನಹಳ್ಳಿ ಈರುಳ್ಳಿ ಬೆಳೆಗಾರರ ಸಂಘದ ತಾಲೂಕು ಉಪಾಧ್ಯಕ್ಷ ಮೈನಳ್ಳಿ ಕೊಟ್ರೇಶ್ ಅವರು ಹೇಳಿದ್ದಾರೆ.
ಮಳೆಯಿಂದ ಆಗಿರುವ ನಷ್ಟದ ವರದಿ ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ. ಕೊನೇ ಹಂತ ಮುಗಿದಿದ್ದು, ನಷ್ಟವಾಗಿರುವ ಬೆಳೆ ಸಮೀಕ್ಷೆಯನ್ನು ಶೀಘ್ರದಲ್ಲೆ ಜಿಲ್ಲಾಡಳಿತಕ್ಕೆ ಕಳಿಸಿಕೊಡಲಾಗುವುದು ಎಂದು ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಆಶಪ್ಪ ಪೂಜಾರ್ ಅವರು ತಿಳಿಸಿದ್ದಾರೆ.